ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ನಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಒಂದೂವರೆ ತಿಂಗಳ ಹಿಂದೆಯೇ ಘೋಷಣೆ ಮಾಡಲಾಗಿದೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ರಾಮನಗರದಲ್ಲಿ ಗೆಲುವು ಸುಲಭ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಮಗನ ರಾಜಕೀಯ ಭವಿಷ್ಯ ರೂಪಿಸುವ ಉದ್ದೇಶದಿಂದಲೇ ತಾಯಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನು ತ್ಯಾಗ ಮಾಡುವ ಕೆಲಸ ಮಾಡಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಸ್ಪರ್ಧೆ ಮಾಡ್ತಾರೆ ಅನ್ನೋದು ರಾಜಕಾರಣದಲ್ಲಿ ದೊಡ್ಡ ಸುದ್ದಿಯಾಗಿದೆ. ಆದರೆ ರಾಮನಗರ ಕ್ಷೇತ್ರದಿಂದ ಕಳೆದ ಬಾರಿ ಇಕ್ಬಾಲ್ ಹುಸೈನ್ H.A ಪರಾಜಯ ಕಂಡಿದ್ದರು. ಇದೀಗ ರಾಮನಗರದಲ್ಲಿ ಗೆಲ್ಲಬೇಕು ಅನ್ನೋ ಛಲದಲ್ಲಿ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಆದರೆ ಇದೀಗ ಡಿ.ಕೆ ಸುರೇಶ್ ಅವರು ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ. ಅದು ಕೂಡ ಕಾಂಗ್ರೆಸ್ ಪಕ್ಷದಿಂದಲೇ ಈ ರೀತಿಯ ಚರ್ಚೆ ನಡೆಯುತ್ತಿದೆ. ಮುಂದೆ ನೋಡೋಣ ಎಂದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಸುರೇಶ್ ಸ್ಪರ್ಧೆ ಮಾಡಿಸುವಂತೆ ಪಟ್ಟು ಹಿಡಿದಿರೋದು ಯಾರು..?
ರಾಮನಗರದಿಂದ ಸಂಸದ ಡಿ.ಕೆ ಸುರೇಶ್ ಸ್ಪರ್ಧೆ ಮಾಡುವ ವಿಚಾರವಾಗಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿರೋದು ನಿಜ. ರಾಮನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಹಳ ದಿನದಿಂದ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಒಂದು ಇತಿಹಾಸ ಇದೆ. ಪಾರ್ಟಿ ಹೇಳಿದ ಮೇಲೆ ಏನ್ ಮಾಡೋಕಾಗುತ್ತೆ. ನಾನು ಸಚಿವನಾಗಿದ್ದವನು, ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಲಿಲ್ಲವೆ..? ರಾಜಕೀಯದಲ್ಲಿ ಕೆಲವು ಸಂದರ್ಭಗಳಲ್ಲಿ ಅನಿವಾರ್ಯ ಎದುರಾಗುತ್ತೆ. ಡಿ.ಕೆ.ಸುರೇಶ್ ಯಾವತ್ತೂ ಸ್ಟೇಜ್ ಹತ್ತಿರಲಿಲ್ಲ, ಮೈಕ್ ಹಿಡಿದಿರಲಿಲ್ಲ. ಹಿಂದೆ ಸೋನಿಯಾ ಗಾಂಧಿ ಸಂಸತ್ತಿಗೆ ಅವರ ಹೆಸರು ಘೋಷಣೆ ಮಾಡಿದ್ರು. ಜನ ಏನ್ ಹೇಳ್ತಾರೆ ಅನ್ನೊದನ್ನ ನಾವು ಕೇಳಬೇಕಲ್ವಾ..? ರಾಜಕೀಯ ನಾವು ಏನು ಅಂದ್ಕೊತ್ತಿವಿ ಅದಲ್ಲ. ಯಾವುದು ನಮ್ಮ ಕೈಯಲಿಲ್ಲ. ಯಾವ ಸಂದರ್ಭದಲ್ಲಿ ಏನ್ ಆಗಬೇಕೋ ಅದು ಆಗುತ್ತೆ ಎನ್ನುವ ಮೂಲಕ ಹೈಕಮಾಂಡ್ ಒತ್ತಡ ಹೇರುತ್ತಿದೆ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ಪರೋಕ್ಷವಾಗಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಲೆಬೇಕಾದ ಅನಿವಾರ್ಯತೆ ಇದೆ ಎನ್ನುವುದನ್ನು ಹೇಳಿದ್ದಾರೆ. ಆದರೆ ಹೈಕಮಾಂಡ್ಗೆ ಒತ್ತಡ ಏರಿದ್ದು ಯಾರು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿದೆ.
ರಾಮನಗರದಲ್ಲಿ HDK ಕಟ್ಟಿ ಹಾಕಿದ್ರೆ ಕಾಂಗ್ರೆಸ್ಗೆ ಅನುಕೂಲ..!
ಕೋಲಾರದಲ್ಲಿ ಸ್ಪರ್ಧೆ ಮಾಡಲು ಅಣಿಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ಗೆ ವರದಿ ಕಳುಹಿಸಿದ್ದು, ಈ ಬಾರಿ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆಗಳಿವೆ. ಪಂಚರತ್ನ ಯಾತ್ರೆ ಸಾಗಿದ ಕಡೆಯಲ್ಲಿ ಜನಸಾಗರವೇ ಸೇರುತ್ತಿದೆ. ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮ್ಯಾಜಿಕ್ ಸಂಖ್ಯೆ ದಾಟುವುದಕ್ಕೆ ಅಡ್ಡಿ ಆದರೂ ಆಗಬಹುದು. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಚಾರವನ್ನು ಕುಗ್ಗಿಸಲು ಒಂದು ಯೋಜನೆ ರೂಪಿಸಬೇಕು. ಹೆಚ್ಚು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪ್ರಚಾರ ಮಾಡದಂತೆ ತಡೆಯಬೇಕಿದ್ದರೆ ಮಗ ಸ್ಪರ್ಧೆ ಮಾಡುತ್ತಿರುವ ರಾಮನಗರ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಹಾಕಿ ಕುಮಾರಸ್ವಾಮಿ ರಾಮನಗರದಲ್ಲೇ ಉಳಿಯುವಂತೆ ಮಾಡಬೇಕು ಎನ್ನುವ ಸಲಹೆಯನ್ನೂ ನೀಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ವರದಿಯಲ್ಲಿ ಡಿಕೆ ಸುರೇಶ್ ರಾಮನಗರ ಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿದ್ದಾರೆ. ಅವರು ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದೆ ಗೆಲ್ಲುತ್ತಾರೆ ಎಂದಿದ್ದಾರೆ. ಸಂಸದನಾಗಿರುವ ಡಿ.ಕೆ ಸುರೇಶ್ ಅವರನ್ನು ಕಣಕ್ಕಿಳಿಸಿ ಎಂದು ಸಲಹೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹೈಕಮಾಂಡ್ ನಾಯಕರು ಈಗಾಗಲೇ ಡಿಕೆ ಶಿವಕುಮಾರ್ಗೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.
ಒಕ್ಕಲಿಗ ಸಮುದಾಯ ತಿರುಗು ಬೀಳುವ ಭೀತಿ..!
ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಅಂದರೆ ಒಕ್ಕಲಿಗ ಸಮುದಾಯಕ್ಕೆ ಅದೇನೋ ಪ್ರೀತಿ ವಿಶ್ವಾಸ. ದೇವೇಗೌಡರ ಬಳಿಕ ಆ ಪ್ರೀತಿ ವಿಶ್ವಾಸವನ್ನು ತನ್ನದಾಗಿಸಿಕೊಂಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ಅಂಬರೀಷ್ ಪತ್ನಿ ಸುಮಲತಾ ಸ್ಪರ್ಧೆ ಮಾಡಿದ್ದ ವೇಳೆ ನಿಖಿಲ್ ಸೋಲು ಕಾಣಬೇಕಾಯ್ತು. ಇದಕ್ಕೆ ಕಾಂಗ್ರೆಸ್ ಹಿಂಬಾಗಿಲ ರಾಜಕಾರಣ ಮಾಡಿತ್ತು ಎನ್ನುವುದು ಈಗಾಗಲೇ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮಾತಿನಿಂದಲೇ ಜಗಜ್ಜಾಹೀರು ಆಗಿದೆ. ಇದೀಗ ಮತ್ತೊಮ್ಮೆ ನಿಖಿಲ್ ಸೋಲಿಸಲು ಕಾಂಗ್ರೆಸ್ ಈ ರೀತಿಯ ಕುತಂತ್ರ ಮಾಡಿದರೆ ಜೆಡಿಎಸ್ ಬಗ್ಗೆ ಹಳೇ ಮೈಸೂರು ಭಾಗದಲ್ಲಿ ಮಮಕಾರ ತೋರಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಒಬ್ಬರನ್ನು ರಾಮನಗರದಲ್ಲಿ ಸೋಲಿಸಬಹುದು. ಅಥವಾ ರಾಮಮನಗರದಲ್ಲೇ ಜನರು ತಿರುಗಿ ಬಿದ್ದು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ, ಅತ್ತ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಿನ್ನಡೆ ಆದರೆ ಅನ್ನೋ ಭೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇದ್ದಾರೆ. ಮಾಜಿ ಪ್ರಧಾನಿ ಹಾಗು ಕುಮಾರಸ್ವಾಮಿ ವಿರುದ್ಧ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಂಡ್ಯದಲ್ಲಿ ಮೌನಕ್ಕೆ ಶರಣಾಗಿ ವಾಪಸ್ ಹೋಗಿರುವಾಗ ಕಾಂಗ್ರೆಸ್ ಕೆಣಕಿ ಏಟು ತಿನ್ನುವುದು ಸರಿಯಲ್ಲ ಎನ್ನುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.