ನಿಷೇಧಿತ ಪಿಎಫ್‌ಐ ಸಂಘಟನೆಗೆ ಫಂಡಿಂಗ್ ಮಾಡಿರುವ ಪ್ರಕರಣದಲ್ಲಿ NIA ಅಧಿಕಾರಿಗಳು ದ.ಕ ಜಿಲ್ಲೆಯ 3 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಉಳ್ಳಾಲದ ಕಿನ್ಯಾ, ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಮತ್ತು ಬಂಟ್ವಾಳ ತಾಲೂಕಿನ ಮೆಲ್ಕಾರ್ ನಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಉಳ್ಳಾಲದ ಕಿನ್ಯಾದಲ್ಲಿ ಕೇರಳ ಮೂಲದ ಇಬ್ರಾಹಿಂ ಎಂಬ ಧಾರ್ಮಿಕ ಶಿಕ್ಷಕರೊಬ್ಬರ ಮನೆಗೆ ದಾಳಿ ನಡೆಸಿದ್ದು, ಮನೆಯಲ್ಲಿದ್ದ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಇಬ್ರಾಹಿಂ ಒಂದು ವರ್ಷದ ಹಿಂದೆ ಪಿಎಫ್‌ಐ ಸಂಘಟನೆ ನಿಷೇಧ ಬೆನ್ನಲ್ಲೇ ನಾಪತ್ತೆಯಾಗಿದ್ದರು. ನಿಷೇಧ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪಿಎಫ್‌ಐ ನಾಯಕರನ್ನು ಬಂಧಿಸಲಾಗಿತ್ತು. ಅವರು ನೀಡಿದ ಮಾಹಿತಿ ಆಧರಿಸಿ ಇಬ್ರಾಹಿಂ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ಇದೀಗ ಆತನ ಮನೆಯಲ್ಲಿ ತಲಾಶ್ ನಡೆಸಿದ್ದಾರೆ.

ಪಿಎಫ್‌ಐ ಪರವಾಗಿ ಫಂಡಿಂಗ್ ನಡೆಸುತ್ತಿರುವ ಹವಾಲಾ ನೆಟ್ವರ್ಕ್ ನಲ್ಲಿ ಇಬ್ರಾಹಿಂ ಲಿಂಕ್ ಹೊಂದಿದ್ದಾನೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ವಳಚ್ಚಿಲ್ ಪದವು ನಿವಾಸಿ ಮುಸ್ತಾಕ್ ಮತ್ತು ಮೆಲ್ಕಾರ್ ನಲ್ಲಿ ಇಬ್ರಾಹಿಂ ನಂದಾವರ ಎಂಬವರ ಮನೆಗೂ ದಾಳಿ ನಡೆದಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ತೆರಳಿದ್ದಾರೆ ಎಂಬ ಮಾಹಿತಿಗಳಿವೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ.
 
			
 
                                 
                                 
                                