ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (NHAI) ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಡ್ರೋನ್ ಬಳಕೆಯನ್ನು ಕಡ್ಡಾಯಗೊಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರತಿದಿನ 40 ಕಿಲೋಮೀಟರ್ ಹೆದ್ದಾರಿಗಳನ್ನು ನಿರ್ಮಿಸುವ ಭಾರತದ ಯೋಜನೆಯ ಹಿನ್ನೆಲೆಯಲ್ಲಿ NHAI ನ ಈ ನಿರ್ಧಾರ ಹೊರಬಂದಿದೆ.
“ಪಾರದರ್ಶಕತೆ, ಏಕರೂಪತೆ ಮತ್ತು ಗುಣಮಟ್ಟದ ಖಾತರಿಗಾಗಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಎಲ್ಲಾ ಹಂತಗಳ ಮಾಸಿಕ ವಿಡಿಯೋ ರೆಕಾರ್ಡಿಂಗ್‌ಗಾಗಿ ಡ್ರೋನ್‌ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ” ಎಂದು NHAI ಬುಧವಾರದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

“ಈ ವೀಡಿಯೊಗಳನ್ನು” ಡಾಟಾ ಲೇಕ್ ” (Data Lake) ನಲ್ಲಿ ಶಾಶ್ವತವಾಗಿ ಸಂಗ್ರಹಿಸಲಾಗುವುದು. ಹೀಗೆ ಸಂಗ್ರಹಿಸಲಾಗುವ ವೀಡಿಯೊಗಳನ್ನು ಆರ್ಬಿಟಲ್ ಟ್ರಿಬ್ಯೂನಲ್ ಮತ್ತು ನ್ಯಾಯಾಲಯಗಳ ಮುಂದೆ ವಿವಾದ ಪರಿಹಾರದ ಪ್ರಕ್ರಿಯೆಯಲ್ಲಿ ಸಾಕ್ಷಿಯಾಗಿ ಬಳಸಬಹುದು” ಎಂದು NHAI ಹೇಳಿದೆ.
“ಗುತ್ತಿಗೆದಾರರು ಮೇಲ್ವಿಚಾರಣಾ ಸಲಹೆಗಾರರ ಸಮ್ಮುಖದಲ್ಲಿ ಡ್ರೋನ್ ವಿಡಿಯೋ ರೆಕಾರ್ಡಿಂಗ್ ಮಾಡಿ, ಪ್ರಸ್ತುತ ಮತ್ತು ಹಿಂದಿನ ತಿಂಗಳ ತುಲನಾತ್ಮಕ ಪ್ರಾಜೆಕ್ಟ್ ವೀಡಿಯೊಗಳನ್ನು NHAI ನ ಪೋರ್ಟಲ್‘ ಡಾಟಾ ಲೇಕ್ ’ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅಲ್ಲದೆ, ವಿವಿಧ ಯೋಜನೆ ಸಂಬಂಧಿತ ಬೆಳವಣಿಗೆಗಳನ್ನು ಡ್ರೋಣ್ ಮೂಲಕ ಸೆರೆಹಿಡಿಯಲಿದ್ದು, ಮೇಲ್ವಿಚಾರಣಾ ಸಲಹೆಗಾರರು ಈ ವೀಡಿಯೊಗಳನ್ನು ವಿಶ್ಲೇಷಿಸಿ ಯೋಜನೆಯ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡ ಡಿಜಿಟಲ್ ಮಾಸಿಕ ಪ್ರಗತಿ ವರದಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ ”ಎಂದು NHAI ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಸ್ತೆ ನಿರ್ಮಾಣದ ವೇಗವನ್ನು ಹೆಚ್ಚಿಸಲು NHAI ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ. NHAI ಪ್ರಕಾರ, ತನ್ನ ಯೋಜನಾ ನಿರ್ದೇಶಕರು ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ ಸೈಟ್ನಲ್ಲಿ ಯೋಜನೆಯ ನಿರ್ಮಾಣ ಪ್ರಾರಂಭವಾಗುವವರೆಗೆ ಮತ್ತು ಯೋಜನೆಯ ಪೂರ್ಣಗೊಳ್ಳುವವರೆಗೆ ಮಾಸಿಕ ಡ್ರೋನ್ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತದೆ.

ಈ ಹಿಂದೆ, ನಿರ್ಮಾಣ ಗುಣಮಟ್ಟವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸ್ಥಿತಿಯ ಸಮೀಕ್ಷೆಗಳನ್ನು ನಡೆಸಲು ನೆಟ್‌ವರ್ಕ್ ಸರ್ವೆ ವಾಹನದ (Network Survey Vehicle (NSV) ನಿಯೋಜನೆಯನ್ನು ಕೂಡಾ ಕಡ್ಡಾಯಗೊಳಿಸಲಾಗಿತ್ತು.
ಆ ಮೂಲಕ, ಯೋಜನೆಗಳ ನಿರ್ಮಾಣದ ಸಮಯದಲ್ಲಿ ಅತ್ಯುನ್ನತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸಲು ಎನ್‌ಎಚ್‌ಎಐ ಬದ್ಧವಾಗಿದೆ ಎಂದು NHAI ಹೇಳಿದೆ.
