ಐಕಾನಿಕ್ ಅಂಬಾಸಿಡರ್ ಕಾರುಗಳಿಗೆ ಹೆಸರುವಾಸಿಯಾಗಿರುವ ಹಿಂದೂಸ್ತಾನ್ ಮೋಟರ್ಸ್ ಭಾರತೀಯ ಮಾರುಕಟ್ಟೆಗೆ ವಾಪಾಸಾಗಲು ತಯಾರಿ ನಡೆಸಿದೆ. ಆದರೆ, ಈ ಬಾರಿ ಎಲೆಕ್ಟ್ರಿಕ್ ರೂಪದಲ್ಲಿ ಜನರ ಮುಂದೆ ಬರಲು ಸಜ್ಜಾಗಿದೆ.
ಕಂಪನಿಯೂ ಈಗಾಗಲೇ ಯೂರೋಪ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದರ ಭಾಗವಾಗಿ ಈ ಸ್ಕೂಟರ್ಗಳನ್ನ ಮೊದಲು ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ತಿಳಿದು ಬಂದಿದೆ. ನಂತರ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಉಭಯ ಕಂಪನಿಗಳು ಎಂಒಯುಗೆ ಸಹಿ ಹಾಕಿದ್ದು ಪಾಲುದಾರಿಕೆ ಪ್ರಕ್ರಿಯೆ ಮೂರು ತಿಂಗಳಲ್ಲಿ ಮುಗಿಯುವ ಕಾರಣ ನಂತರ ಅಧಿಕೃತ ಪ್ರಕಟನೆ ಹೊರಡಿಸಲಿದೆ ಎಂದು ಕಂಪನಿಯ ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ. ಕಂಪನಿಯು ಶೇಕಡಾ 51ರಷ್ಟು ಪಾಲನ್ನು ಹೊಂದಲಿದ್ದು ಉಳಿದ 49 ಪಾಲನ್ನು ಯೂರೋಪ್ ಮೂಲದ ಕಂಪನಿ ಹೊಂದಲಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಹಿಂದೂಸ್ತಾನ್ ಮೋಟಾರ್ ಕಾರ್ಪೋರೇಶನ್ ಬಿರ್ಲಾ ಸಮೂಹ ಸಂಸ್ಥೆಗಳ ಅಧೀನದಲ್ಲಿದೆ. ಚೆನೈನಲ್ಲಿರುವ ಸ್ಥಾವರದಲ್ಲಿ ಕಂಪನಿ ಈ ಮೊದಲು ಮಿತುಭುಷಿ ಕಾರುಗಳನ್ನು ತಯಾರಿಸುತಿತ್ತು ಉತ್ತರಾಪಾರಾ ಸ್ಥಾವರದಲ್ಲಿ ಅಂಬಾಸಿಡರ್ ಕಾರುಗಳನ್ನು ತಯಾರು ಮಾಡುತಿತ್ತು.
![](https://pratidhvani.com/wp-content/uploads/2022/05/1047106-hm-ambassador-electric.webp)
ಸಾಂಧರ್ಬಿಕ ಚಿತ್ರ
ಕಳಪೆ ಗುಣಮಟ್ಟ, ಅಧಿಕ ಸಾಲ, ಕಡಿಮೆ ಬೇಡಿಕೆ ನಿರ್ಮಾಣವಾಗಿದ್ದ ಕಾರಣ ಕಂಪನಿಯೂ 2014ರಲ್ಲಿ ತನ್ನ ಕಡೆಯ ಕಾರನ್ನು ತಯಾರಿಸಿತ್ತು ನಂತರ PSA ಸಮೂಹ ಸಂಸ್ಥೆಗಳಿಗೆ ಕಂಪನಿಯನ್ನು ಮಾರಾಟ ಮಾಡಿತ್ತು.
ಹಲವು ವರ್ಷಗಳ ಕಾಲ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಅಂಬಾಸಿಡರ್ ಕಾರುಗಳು 1975ರ ಸಮಯದಲ್ಲಿ ದೇಶದ ಸುಮಾರು 75% ಮಾರುಕಟ್ಟೆ ಪಾಲನ್ನು ಹೊಂದಿತ್ತು ಮತ್ತು ನಂತರದ ದಿನಗಳಲ್ಲಿ ಬೇರೆ ಕಂಪನಿಗಳಿಂದ ಸ್ಪರ್ಧೆ ಹೆಚ್ಚಾದ ಕಾರಣ ಕಾರುಗಳಿಗೆ ಬೇಡಿಕೆ ಕುಂಟುತ್ತಾ ಹೋಯಿತ್ತು.
ಆಟೋಮೊಬೈಲ್ ಕ್ಷೇತ್ರದಲ್ಲಿ ವೇಗವಾಗಿ ಬದಲಾದ ತಂತ್ರಜ್ಞಾನದೊಂದಿಗೆ ಮುಂದುವರೆಯಲು ಸಂಸ್ಥೆಗೆ ಸಾಧ್ಯವಾಗಲಿಲ್ಲ ಮತ್ತು ಅಂತಿಮವಾಗಿ ಕಂಪನಿ 2017ರಲ್ಲಿ ಮಾರಾಟ ಮಾಡಿತ್ತು.