ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇವರ ಜೊತೆಗೆ ಸುಮಾರು 25 ಜನರು ಸಚಿವರಾಗಿ ಪ್ರಮಾಣ ಸ್ವೀಕಾರಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಕಲ ತಯಾರಿಗಳು ನಡೆದಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದು, ಎಂಟು ಜನ ಡಿಸಿಪಿಗಳ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕಂಠೀರವ ಸ್ಟೇಡಿಯಂನ ಐದು ಗೇಟ್ಗಳ ಮೂಲಕ ಪ್ರವೇಶಕ್ಕೆ ವ್ಯವಸ್ಥೆ ಮಾಡಿದ್ದು, 1 ಗೇಟ್ನಲ್ಲಿ ವಿವಿಐಪಿ ಜನರು, 2 ಮತ್ತು 3ನೇ ಗೇಟ್ನಲ್ಲಿ ವಿಐಪಿ ಜನರು ಇನ್ನುಳಿದ 4 ಮತ್ತು 5ನೇ ಗೇಟ್ನಲ್ಲಿ ಸಾರ್ವಜನಿಕರು ಒಳ ಪ್ರವೇಶ ಪಡೆಯಬಹುದು. ಇನ್ನು ಜನರಿಗೆ ಯಾವುದೇ ರೀತಿಯ ಪಾಸ್ ಅವಶ್ಯಕತೆ ಇರುವುದಿಲ್ಲ. ಎಲ್ಲರೂ ಬನ್ನಿ ಎಂದು ಸ್ವತಃ ನಿಯೋಜಿತ ಡಿಸಿಎಂ ಡಿ.ಕೆ ಶಿವಕುಮಾರ್ ಬಹಿರಂಗ ಆಹ್ವಾನ ನೀಡಿದ್ದಾರೆ.


ಸ್ಟೇಜ್ ಬಳಿ ತಯಾರಿ ಹೇಗಿದೆ..? CET ಪರಿಕ್ಷಾರ್ಥಿಗಳ ಕಥೆ..?

ಇಡೀ ವೇದಿಕೆಗೆ ಎಲ್ಇಡಿ ಬ್ಯಾಕ್ ಗ್ರೌಂಡ್ ಹಾಕಲಾಗಿದೆ, ಸ್ಟೇಜ್ ಮತ್ತು ಸ್ಟೇಜ್ನ ಮುಂಭಾಗ ರೆಡ್ ಕಾರ್ಪೆಟ್ ವ್ಯವಸ್ಥೆ ಮಾಡಲಾಗಿದೆ. ಸ್ಟೇಜ್ನ ಎಡಭಾಗ ಮತ್ತು ಬಲಭಾಗ ಇನ್ನೂರಕ್ಕೂ ಹೆಚ್ಚು ಸೀಟ್ಗಳ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳು ಹಾಗು ಅವರ ಕುಟುಂಬಸ್ಥರು, ಆಪ್ತ ಸಹಾಯಕರಿಗೆ ಆಸನದ ವ್ಯವಸ್ಥೆ ಇರಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಸುಮಾರು 35 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ನಾಯಕರು, ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಖಾಕಿ ಕೋಟೆಯನ್ನೇ ನಿರ್ಮಿಸಲಾಗಿದೆ. ಈ ನಡುವೆ ಕಂಠೀರವ ಸ್ಟೇಡಿಯಂ ಸುತ್ತಮುತ್ತ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆದಷ್ಟು ಬೇಗ ಪರೀಕ್ಷಾ ಕೇಂದ್ರ ಸೇರಿಕೊಳ್ಳುವಂತೆ ಸೂಚನೆ ಕೊಡಲಾಗಿದೆ. ಅಷ್ಟು ಮಾತ್ರವಲ್ಲದೆ ಒಂದು ಪರೀಕ್ಷೆ ಆದ ಬಳಿಕ ಪರೀಕ್ಷ ಕೇಂದ್ರದಲ್ಲೇ ಊಟದ ವ್ಯವಸ್ಥೆ ಮಾಡುವಂತೆಯೂ ಸೂಚನೆ ಕೊಡಲಾಗಿದೆ ಎಂದು ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ರ ವ್ಯವಸ್ಥೆ ಏನು..?

ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಲಕ್ಷ ಲಕ್ಷ ಜನರು ಸೇರುವ ಹಿನ್ನೆಲೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಾಕಷ್ಟು ಮಾರ್ಗ ಬದಲಾವಣೆ ಮಾಡಿದ್ದಾರೆ. ಹಲಸೂರು ಮಾರ್ಗವಾಗಿ MG ರೋಡ್, ರಿಚ್ ಮಂಡ್ ಸರ್ಕಲ್ ಮೂಲಕ ಕಾರ್ಪೊರೇಷನ್ ಕಡೆಗೆ ಸಂಚಾರ ಮಾಡುವ ವಾಹನಗಳು ಹಲಸೂರು ಲೇಕ್ ಮೂಲಕ ಶಿವಾಜಿನಗರ ತಲುಪಿ ಅಲ್ಲಿಂದ ವಿಧಾನಸೌಧ ಮಾರ್ಗವಾಗಿ ಮೆಜೆಸ್ಟಿಕ್ ತಲುಪಬೇಕು. ಇನ್ನು ಕೆ.ಆರ್ ಮಾರ್ಕೆಟ್ ಕಡೆಗೆ ಬರುವ ವಾಹನಗಳು ರಿಚ್ಮಂಡ್ ಸರ್ಕಲ್ನಿಂದ ಲಾಲ್ ಬಾಗ್ ಮಾರ್ಗದಲ್ಲಿ ಸಂಚರಿಸಿ ಮಾರ್ಕೆಟ್ ತಲುಪಬೇಕು. ಹಾಗು ಮೆಜೆಸ್ಟಿಕ್ನಿಂದ ಕಾರ್ಪೊರೇಷನ್ ಕಡೆಗೆ ಬರುವ ವಾಹನಗಳು ವಿಧಾನಸೌಧ ಮೂಲಕ ತಿಮ್ಮಯ್ಯ ರಸ್ತೆಗೆ ಬಂದು ಅಲ್ಲಿಂದ ಇನ್ಫಾಂಟ್ರಿ ರಸ್ತೆ ಮೂಲಕ ಸಂಚಾರ ಮಾಡಬಹುದು. ಬೆಂಗಳೂರಿನ ಕೇಂದ್ರ ವಿಭಾಗದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ನಿರೀಕ್ಷೆ ಇದ್ದು, ಮೈಸೂರ್ ಬ್ಯಾಂಕ್ ಸರ್ಕಲ್, ರಿಚ್ಮಂಡ್ ರೋಡ್, ಟೌನ್ ಹಾಲ್ ರಸ್ತೆಯನ್ನು ಪೊಲೀಸ್ರು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದಾರೆ. ಶನಿವಾರ ಮಧ್ಯಾಹ್ನದ ತನಕ ಈ ರಸ್ತೆಗಳಿಂದ ದೂರ ಇರುವುದು ಉತ್ತಮ.
ಕಾಂಗ್ರೆಸ್ ಗ್ಯಾರಂಟಿ ಇಂದು ಸಿಕ್ಕೇ ಸಿಗುತ್ತಾ..? ಇಲ್ವಾ..?

ಈ ಬಗ್ಗೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಘೋಷಣೆ ಮಾಡಿದ್ದರು. ಮೊದಲ ಕ್ಯಾಬಿನೆಟ್ನಲ್ಲೇ ಕಾಂಗ್ರೆಸ್ನ 5 ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ನಿನ್ನೆಯಷ್ಟೇ ಮಾತನಾಡಿರುವ ಡಿ.ಕೆ ಶಿವಕುಮಾರ್, ನಾವು ಕೊಟ್ಟ ಮಾತು ಈಡೇರಿಸುತ್ತೇವೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ನಾನೂ ಸೇರಿ ಗ್ಯಾರಂಟಿ ಕೊಟ್ಟಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅದನ್ನ ಜಾರಿ ಮಾಡ್ತೀವಿ ಎಂದಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ನಿಗದಿಯಾಗಿದ್ದು, ಕಾರ್ಯಕ್ರಮ ಮುಗಿದ ಬಳಿಕ ಗಣರೊಂದಿಗೆ ಭೋಜನ ವ್ಯವಸ್ಥೆ ಇರಲಿದೆ. ಆ ನಂತರ ಸಂಪ್ರದಾಯದಂತೆ ಸಚಿಒವ ಸಂಪುಟ ಸಭೆ ನಡೆಯಲಿದೆ. ಆ ಬಳಿಕ ಮಾಧ್ಯಮಗೋಷ್ಠಿ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ 25 ಜನ ಸಚಿವರ ತಂಡ, ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿಗಳುನ್ನು ಸಾಕಾರಗೊಳಿಸುತ್ತಾರೆ. ಆದರೆ ಒಂದಿಷ್ಟು ನಿಯಮಗಳನ್ನು ಹಾಕಬಹುದು. ಸಾಧ್ಯವಾದಷ್ಟು ಮಂದಿಗೆ ಈ ಯೋಜನೆ ಲಾಭ ಸಿಗುವುದಂತೂ ಖಚಿತ.
ಕೃಷ್ಣಮಣಿ