ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ನಿನ್ನೆಯಷ್ಟೆ ಕಬ್ಬಿಗೆ ಹೊಸ ದರ ನಿಗಧಿ ಪಡಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2025-26ನೇ ಸಕ್ಕರೆ ಹಂಗಾಮಿನಲ್ಲಿ ದೇಶದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿಗದಿಗೊಳಿಸಲಾಗಿದ್ದು, ವಿವರಗಳು ಈ ರೀತಿ ಇದೆ.
1. ಶೇಕಡ 10.25 ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಕ್ವಿಂಟಾಲ್ ಗೆ 3550 ರೂ.
2. ಶೇಕಡ 10.25ಕ್ಕೆ ಮೇಲ್ಪಟ್ಟ ಇಳುವರಿಗೆ ತದನಂತರದ ಶೇಕಡ 0.1 ರಷ್ಟು ಇಳುವರಿಗೆ ಪ್ರತಿ ಕ್ವಿಂಟಾಲ್ ಕಬ್ಬಿಗೆ ರೂ.3.46 ರಂತೆ ಹೆಚ್ಚುವರಿ ಬೆಲೆ.
3. ಶೇಕಡ 10.25ಕ್ಕಿಂತ ಕಡಿಮೆ ಹಾಗೂ ಶೇಕಡ 9.5ಕ್ಕಿಂತ ಮೇಲ್ಪಟ್ಟ ಇಳುವರಿಯನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಶೇಕಡ 0.1 ರಷ್ಟು ಇಳುವರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.3.46ರಷ್ಟು ಪ್ರಮಾಣದಲ್ಲಿ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ಕಡಿಮೆ ಮಾಡುವುದು.
4. ಶೇಕಡ 9.5 ರಷ್ಟು ಅಥವಾ 9.50 ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಕಾರ್ಖಾನೆಗಳಿಗೆ ಪ್ರತಿ ಮೆ.ಟನ್‌ಗೆ ರೂ.3290.05 ಗಳ ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವುದು
2024-25ನೇ ಹಂಗಾಮಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳು ಪಡೆದ ಸಕ್ಕರೆ ಇಳುವರಿಯನ್ನು ಆಧರಿಸಿ, ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ರಾಜ್ಯದ ಸಕ್ಕರೆ ಕಾರ್ಖಾನೆಗಳು 2025-26ನೇ ಹಂಗಾಮಿನಲ್ಲಿ ಮೊದಲ ಕಂತಿನ ರೂಪದಲ್ಲಿ ಪಾವತಿಸಬೇಕಾದ ನ್ಯಾಯ ಮತ್ತು ಲಾಭದಾಯಕ ಬೆಲೆಯನ್ನು ನಿಗದಿಪಡಿಸಿ, ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶಿಸಿರುತ್ತಾರೆ.







