ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ಗೆ ಇದೀಗ ಹೊಸ ಹುದ್ದೆ ನೀಡಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಕಾಂಗ್ರೆಸ್ನಲ್ಲಿ ಇಷ್ಟು ದಿನ ಪಟ್ಟದಾಟ ತೆರೆಮರೆಯಲ್ಲೇ ನಡೆಯುತ್ತಿತ್ತು.. ಒಂದಿಷ್ಟು ನಾಯಕರು ಕೂಡ ಸೈಲೆಂಟಾಗಿ ರಣತಂತ್ರಗಳನ್ನ ಹೆಣೆಯುತ್ತಿದ್ರು.. ಆದ್ರೆ ಈ ವಿಚಾರವಾಗಿ ಡಿಕೆ ಮೌನ ಮುರಿದಿದ್ದೇ ತಡ,, ತೆರೆಮರೆ ಆಟಗಳು ಇದೀಗ ಮಾತಿನ ಸಮರಕ್ಕೆ ತಿರುಗಿವೆ. ಇದರ ಮಧ್ಯ ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ರಾಜಕೀಯ ಆಟ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಸಂಪುಟ ದರ್ಜೆ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯ ನೀಡವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಿಎಂ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಬಿ.ಆರ್.ಪಾಟೀಲ್ಗೆ ಹೊಸ ಹುದ್ದೆ ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು, ಇದನ್ನು ಅವರು ಸ್ವೀಕಾರ ಮಾಡುತ್ತಾರಾ ಎನ್ನುವುದೇ ಮುಂದಿರುವ ಪ್ರಶ್ನೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಚಿವ ಸ್ಥಾನ ಸಿಗದಿದ್ದರಿಂದ ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ನಾವು ಹಿರಿಯರಿದ್ದರೂ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲ ಎಂದು ಬಸವರಾಜ್ ರಾಯರೆಡ್ಡಿ, ಆರ್ವಿ ದೇಶಪಾಂಡೆ ಹಾಗೂ ಬಿಆರ್ ಪಾಟೀಲ್ ಅಸಮಾಧಾನ ಹೊರಹಾಕಿದ್ದರು. ಇದರಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಈ ಮೂವರು ಹಿರಿಯ ಶಾಸಕರಿಗೆ ಸಚಿವ ಸಂಪುಟ ಸ್ಥಾನಮಾನದ ಹುದ್ದೆ ನೀಡಿದ್ದರು.

ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ನೇಮಕ ಮಾಡಿದ್ದರೆ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಆರ್.ವಿ.ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿತ್ತು. ಇನ್ನು ಬಿಆರ್ ಪಾಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಆದ್ರೆ, ಅದೇನಾಯ್ತೋ ಏನೋ ನೇಮಕಗೊಂಡ ಕೆಲ ತಿಂಗಳ ಬಳಿಕ ಬಿಆರ್ ಪಾಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಬಿಆರ್ ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬಿಆರ್ ಪಾಟೀಲ್ ಅವರು ತಮ್ಮ ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದರು. ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕಾಗಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದ್ರೆ, ಕಳೆದ ಬಜೆಟ್ನಲ್ಲೇ ಆಳಂದ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಇರೋದಕ್ಕೆ ಬೇಸರಗೊಂಡಿದ್ದು, ಈ ಬಾರಿ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.

ರಾಜೀನಾಮೆ ಮೂಲಕ ಒತ್ತಡ ಹಾಕಿ ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಸಾಧ್ಯತೆ ಇದೆ ಎನ್ನುವ ಚರ್ಚೆಗಳು ನಡೆದಿದ್ದವು. ಇನ್ನು ಇದರ ಜೊತೆಗೆ ಸಿಎಂ ಸಲಹೆಗಾರರಾಗಿ ಆ ಹುದ್ದೆಗೆ ಯಾವುದೇ ಮಹತ್ವ ಕೂಡ ಇಲ್ಲ . ಸಲಹೆಗಾರ ಹುದ್ದೆಯಲ್ಲಿ ಕೇವಲ ನಾಮಕಾವಸ್ಥೆಗಷ್ಟೇ .ಸಾಕಷ್ಟು ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಆರ್ ಪಾಟೀಲ್ ಸಲಹೆಗಳನ್ನ ತೆಗೆದುಕೊಳ್ಳುವ ವ್ಯಕ್ತಿತ್ವವು ಅಲ್ಲ. ರಾಜಿನಾಮೆ ಹಿಂದೆ ಈ ಮುನಿಸು ಕೂಡ ಕಾರಣ ಇರಬಹುದು ಎನ್ನಲಾಗಿತ್ತು.