ಹಸುಗೂಸನ್ನು 30 ಅಡಿ ಆಳದ ಪಾಳುಬಾವಿಗೆ ಎಸೆದರೂ ಮಗು ಪಾರದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ನಡೆದಿದೆ.
ತೋಟಕ್ಕೆ ರೈತ ಮಹಿಳೆ ಹೋಗುತ್ತಿದ್ದಾಗ ಮಗುವಿನ ಅಳುವಿನ ಸದ್ದು ಕೇಳಿ ಗ್ರಾಮಸ್ಥರನ್ನು ಕರೆದಿದ್ದಾರೆ. ಗ್ರಾಮಸ್ಥರು ಪಾಳುಬಾವಿಗೆ ಇಳಿದು ನೋಡಿದಾಗ ಬಾವಿಯಲ್ಲಿ ಮಗು ಅಲ್ಲದೇ ಹಾವು ಕಂಡು ಗಾಬರಿಗೊಂಡಿದ್ದಾರೆ. ಆದರೆ ಮಗು ಜೀವಂತವಾಗಿ ಇರುವುದನ್ನು ಕಂಡು ಕೂಡಲೇ ರಕ್ಷಿಸಿದ್ದಾರೆ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನಂತರ ಮಗುವಿಗೆ ಎದೆ ಹಾಲುಣಿಸಿ ಗ್ರಾಮದ ಮಹಿಳೆ ಮಾನವೀಯತೆ ಮೆರೆದಿದ್ದಾರೆ. ನಂತರ ಮಗುವನ್ನು ಆರೈಕೆ ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಮಾಹಿತಿ ನೀಡಿದ ನಂತರ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಕಸ ಕಡ್ಡಿಯೇ ತುಂಬಿದ್ದ ಹಾಗೂ ಪಕ್ಕದಲ್ಲೇ ಹಾವಿದ್ದರೂ ಪವಾಡ ಸದೃಶ್ಯ ರೀತಿಯಲ್ಲಿ ನವಜಾತ ಶಿಶು ಬದುಕುಳಿದಿದೆ.

ಆಗ ತಾನೇ ಜನಿಸಿರುವ ಗಂಡು ಮಗವನ್ನು ಪಾಳು ಬಾವಿಗೆ ಎಸೆದಿದ್ದು ತಾಯಿ ಕೃತ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಶಿಶುವಿನ ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಇರುವೆ ತುಂಬಿದ್ದು, ಇರುವೆ ಕಚ್ಚಿರುವ ಗುರುತುಗಳಾಗಿವೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಆರೋಗ್ಯಕರವಾಗಿ ಇದೆ ಯಾವುದೇ ಆಪಾಯವಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ. ಬಾವಿ ಮೇಲಿಂದ ಎಸೆದಿರುವ ಕಾರಣ ಮಗು ಬೆನ್ನ ಹಿಂದೆ ಸಣ್ಣ ಪುಟ್ಟ ಗಾಯವಾಗಿದೆ.
ಇನ್ನೂ 10, 15 ದಿನ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗುವುದು ಎಂದು ಮಂಡ್ಯ ಮಿಮ್ಸ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದರು.