
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸರಿ ಸಮಾನವಾಗಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವ ಪ್ರಸ್ತಾವನೆ ಸಿದ್ದವಾಗ್ತಿದ್ದು, ರಾಮನಗರ(Ramanagar) ಭಾಗಕ್ಕೆ ವಿಮಾನ ನಿಲ್ದಾಣ ಮಾಡುವುದಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್(DCM D.K Shivakumar) ಯತ್ನಿಸುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲೆಯಲ್ಲಿ(Mandya) ಏರ್ಪೋರ್ಟ್ ಆದರೆ ಸೂಕ್ತ ಎಂದು ಹಲವಾರು ತಜ್ಞರು ಅಭಿಪ್ರಾಯ ಪಟ್ಟಿದ್ದು, ಅದರಲ್ಲೂ ನಾಗಮಂಗಲ (Nagamangala) ಒಳಭೂಮಿ ಹೊಂದಿರುವ ಪ್ರದೇಶ ಆಗಿದ್ದು, ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ನಾಗಮಂಗಲ ಕೇಂದ್ರ ಸ್ಥಾನ ಎನ್ನುವ ಮಾತುಗಳು ಚರ್ಚೆಯಲ್ಲಿವೆ. ಇದೀಗ ಸಚಿವ ಎಂಬಿ ಪಾಟೀಲ್(M B Patil) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಗ್ಲೋಬಲ್ ಸಿಟಿಯಾಗಿ (Bangalore Global City) ಬೆಳೆಯುತ್ತಿದೆ. ನವೋದ್ಯಮಗಳ ಕ್ಯಾಪಿಟಲ್ ಕೂಡ ಬೆಂಗಳೂರು ಆಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ದೇಶದ ಮೂರನೇ ಅತಿ ದಟ್ಟಣೆ ಹೊಂದಿರುವ ನಿಲ್ದಾಣ ಆಗಿದ್ದು, ವರ್ಷಕ್ಕೆ 52 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಕಾರ್ಗೋ ಸಾಮರ್ಥ್ಯ 1.1 ಮಿಲಿಯನ್ ಟನ್ ತನಕ ಇದೆ. 2033ರ ತನಕ ವಿಮಾನ ನಿಲ್ದಾಣ ವಿಸ್ತರಣೆಗೆ ಅವಕಾಶ ಇಲ್ಲ. 2033ಕ್ಕೆ ಅವಧಿ ಮುಕ್ತಾಯ ಆಗುತ್ತದೆ. ಆ ಬಳಿಕ 150 ಕಿ.ಮೀ ವ್ಯಾಪ್ತಿಯಲ್ಲಿ ನಿಲ್ದಾಣ ನಿರ್ಮಾಣಕ್ಕೆ ಅವಕಾಶ ಸಿಗಲಿದೆ. 2035ಕ್ಕೆ ನಮ್ಮ ಏರ್ಪೋರ್ಟ್ನಲ್ಲಿ ಪ್ರಯಾಣಿಕರ ಓಡಾಟ ಸಾಮರ್ಥ್ಯ ಪೂರ್ಣ ಪ್ರಮಾಣಕ್ಕೆ ತಲುಪುತ್ತದೆ ಎಂದಿದ್ದಾರೆ.
ಎಂಟು ವರ್ಷಗಳ ಕಾಲ ನಮಗೆ ಸಮಯ ಇದೆ. ಈಗಿನಿಂದಲೇ ತಯಾರಿ ಮಾಡುವುದಕ್ಕೆ ಅವಕಾಶವೂ ಇದೆ. ಮೂರ್ನಾಲ್ಕು ಪ್ಯಾರಾಮೀಟರ್ಸ್ ನಾವು ನೋಡಿಕೊಳ್ಳಬೇಕಾಗುತ್ತದೆ. ಎರಡು ಪ್ರಮುಖ ವಿಚಾರಗಳನ್ನು ನಾವು ನೋಡಬೇಕಾಗಿದೆ. ಎಕ್ಸಿಸ್ಟಿಂಗ್ ಕನೆಕ್ಟಿವಿಟಿ ಬಗ್ಗೆ ಕೂಡ ಗಮನ ಹರಿಸಬೇಕಿದೆ. ಪ್ಯಾಸೆಂಜರ್ ಲೋಡ್ ಯಾವ ಕಡೆಯಿಂದ ಬರುತ್ತದೆ ಎಂಬುದನ್ನು ಕೂಡ ಗಮನ ಹರಿಸಬೇಕಿದೆ. ಈ ಎರಡು ಪ್ರಮುಖ ವಿಚಾರಗಳ ಬಗ್ಗೆ ಕೂಡ ತಜ್ಞರ ಅಭಿಪ್ರಾಯ ತೆಗೆದುಕೊಳ್ಳಬೇಕಿದೆ. ಐದಾರು ಲೊಕೇಷನ್ ಕೂಡ ನಮ್ಮ ಗಮನದಲ್ಲಿದೆ. ಆದರೆ ಯಾವುದೂ ಅಂತಿಮ ಆಗಿಲ್ಲ. ಬಿಡದಿ ಆಗಬಹುದು, ಕನಕಪುರ ಆಗಬಹುದು, ದಾಬಸಪೇಟೆ ಆಗಬಹುದು, ಯಾವುದೇ ಆಗಬಹುದು. ಪ್ರಸ್ತುತ ಏರ್ಪೋರ್ಟ್ಗೆ ಹತ್ತಿರ ಆಗಬೇಕಾ..? ಬೇಡ್ವಾ ಅನ್ನೋ ಬಗ್ಗೆಯೂ ಚರ್ಚೆ ಮಾಡುತ್ತಿದ್ದೇವೆ ಎಂದಿದ್ದಾರೆ.
ರಾಮನಗರದಲ್ಲಿ ಏರ್‌ಪೋರ್ಟ್ ಎಂದಿರುವ ಡಿ.ಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿರುವ ಮೂಲ ಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್, ಈವರೆಗೆ ಯಾವುದೇ ಸ್ಥಳವನ್ನ ಗುರುತಿಸಿಲ್ಲ. ಸಹಜವಾಗಿ ಅವರು ನಮ್ಮ ಜಿಲ್ಲೆಯಲ್ಲಿ ಆಗಬೇಕೆಂಬ ಬಯಕೆ ಹೊಂದಿದ್ದಾರೆ. ತುಮಕೂರು ದಾಬಸ್ಪೇಟೆ, ಚಿಕ್ಕಬಳ್ಳಾಪುರ, ಮೈಸೂರು ರಸ್ತೆ ಭಾಗದಲ್ಲೂ ನಮಗೆ ಅವಕಾಶ ಇದೆ. ಕೆಂಪೇಗೌಡ ಏರ್ಪೋರ್ಟ್ನಿಂದ 150 ಕಿಮೀ ವ್ಯಾಪ್ತಿಯೊಳಗೆ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದೇವೆ. ಅಂತಿಮವಾಗಿ ಸಿಎಂ ಜೊತೆ ಚರ್ಚೆ ಮಾಡಿ ಸ್ಥಳ ನಿಗದಿ ಮಾಡಲಾಗುತ್ತದೆ. ನಾವು ಏರ್ಪೋರ್ಟ್ ಬಗ್ಗೆ ಸಭೆ ಮಾಡಿದ ಮೇಲೆ ತಮಿಳುನಾಡುನವರು ಕೂಡ ಸಭೆ ಮಾಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡಲು ಆಗುವುದಿಲ್ಲ. ಅದರ ಬಗ್ಗೆ ಕಾಮೆಂಟ್ ಮಾಡಲ್ಲ ಎಂದಿದ್ದಾರೆ.
ಈಗ ಪ್ರಶ್ನೆ ಎದ್ದಿರುವುದು ರಾಮನಗರಕ್ಕೆ ವಿಮಾನ ನಿಲ್ದಾಣ ಹೋಗುತ್ತಾ..? ಅಥವಾ ಮಂಡ್ಯ ಜಿಲ್ಲೆಯ ನಾಗಮಂಗಲ ಭಾಗಕ್ಕೆ ವಿಮಾನ ನಿಲ್ದಾಣ ಹೋಗುತ್ತಾ ಎನ್ನುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ಎಲ್ಲರಿಗೂ ಅನುಕೂಲ ಆಗುವಂತಿರಬೇಕು. ಜೊತೆಗೆ ವಿಸ್ತಾರವಾದ ಸ್ಥಳಾವಕಾಶ ಕೂಡ ಸಿಗಬೇಕು. ಜೊತೆಗೆ ಯೋಜನಾ ವೆಚ್ಚ ಕೂಡ ಕಡಿಮೆ ಆಗಬೇಕು. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ಸರ್ಕಾರ ನಿರ್ಧಾರ ಮಾಡಬೇಕಿದೆ. ಈ ಎಲ್ಲಾ ಅಂಶಗಳನ್ನು ನೋಡಿದಾಗ ರಾಮನಗರ ಅಥವಾ ದಾಬಸ್ಪೇಸ್, ಬಿಡದಿ ಎಲ್ಲಕ್ಕಿಂತ ನಾಗಮಂಗಲ ಸೂಕ್ತ ಸ್ಥಳ ಎನ್ನಬಹುದು.
ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಸಹಕಾರ ಕೂಡ ಬೇಕಿರುವ ಕಾರಣ, ಇದೀಗ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ತಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಇದಕ್ಕಿಂತ ಕೊಡುಗೆ ನೀಡಲು ಸಾಧ್ಯವೇ..? ಏರ್ಪೋರ್ಟ್ ನಿರ್ಮಾಣ ಆದರೆ ಇಡೀ ಜಿಲ್ಲೆಯೇ ಅಭಿವೃದ್ಧಿ ಆಗುತ್ತದೆ. ಅದನ್ನು ಬಿಟ್ಟು ರಾಜಕೀಯ ಎದುರಾಳಿ ಆಗಿರುವ ಡಿ.ಕೆ ಶಿವಕುಮಾರ್ ಮೇಲುಗೈ ಸಾಧಿಸಲು ಬಿಡುತ್ತಾರಾ..? ಅನ್ನೋ ಪ್ರಶ್ನೆ ಎದುರಾಗಿದೆ. ನಾಗಮಂಗಲ ವಿಧಾನಸಭಾ ಕ್ಷೇತ್ರ ಮೈಸೂರು, ಚಾಮರಾಜನಗರ, ತುಮಕೂರು, ಮಂಡ್ಯ, ಹಾಸನ, ಚಿತ್ರದುರ್ಗ, ಕೊಡಗು, ಚಿಕ್ಕಮಗಳೂರು ಭಾಗದ ಜನರಿಗೂ ಉತ್ತಮ ಎನ್ನುತ್ತಿದ್ದಾರೆ ತಜ್ಞರು.
ಕೃಷ್ಣಮಣಿ