ಸ್ವತಂತ್ರ ಭಾರತದ ಮೊತ್ತಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅವರ 132ನೇ ಜಯಂತಿಯನ್ನು ನಾವು ಆಚರಿಸುತ್ತಾ ಇದ್ದೇವೆ. ಪ್ರಥಮ ಪ್ರಧಾನಿಯಾಗಿ ಭಾರತದ ಹಲವು ‘ಪ್ರಥಮ’ಗಳಿಗೆ ಕಾರಣರಾದ ನೆಹರು ಕುರಿತು ಸುಳ್ಳು ಸುದ್ದಿ ಸೃಷ್ಟಿಸಿ ಅದಕ್ಕೆ ಪ್ರಚಾರ ನೀಡುವ ವ್ಯವಸ್ಥಿತ ಪಿತೂರಿ ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಾ ಇದೆ. ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಾವ ಸಂಕಷ್ಟಕ್ಕೆ ಸಿಲುಕಿದರೂ, ನೆಹರು ಆಡಳಿತದ ಕಡೆಗೆ ಬೊಟ್ಟು ಮಾಡುವುದು ಸಾಮಾನ್ಯವೆಂಬಂತಾಗಿದೆ.
ಇದಕ್ಕೆ ಹೊರತಾಗಿ, ನೆಹರು ಅವರ ಜೀವನ, ರಾಜಕೀಯ ನೀತಿ ಹಾಗೂ ಜೀವನ ಶೈಲಿಯ ಕುರಿತು ಸಂಘಪರಿವಾರ ಹಿಂದಿನಿಂದಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬಂದಿದೆ. ಅದರಲ್ಲೂ, ಯಾವುದೇ ವಿಚಾರವನ್ನು ತಿರುಚಿ ಸಂಘಪರಿವಾರಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಬಿಜೆಪಿ ‘ಐಟಿ ಸೆಲ್’ ಹೊತ್ತುಕೊಂಡಿದೆ. ಎಷ್ಟರ ಮಟ್ಟಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತದೆ ಎಂದರೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಅವರು ಐಟಿ ಸೆಲ್ ನೀಡಿರುವ ಸುಳ್ಳು ಸುದ್ದಿಯನ್ನು ನಂಬಿ ಚಾನೆಲ್ ಒಂದರಲ್ಲಿ ‘Exclusive Breaking News’ ನಂತೆ ಪ್ರಸ್ತುತ ಪಡಿಸುತ್ತಾರೆ. ಪ್ರಧಾನಿ ಮೋದಿಯ ಆಪ್ತರಿಂದ ಹಿಡಿದುಕಟ್ಟ ಕಡೇಯ ಕಾರ್ಯಕರ್ತರವರೆಗೂ, ನೆಹರೂ ಕುರಿತ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಷಡ್ಯಂತ್ರ ಇನ್ನೂ ನಡೆಯುತ್ತಲೇ ಇದೆ.
ನೆಹರು ಮರಣವನ್ನಪ್ಪಿ ಐದು ದಶಕಗಳು ಕಳೆಯುತ್ತಾ ಬಂದರೂ, ಇನ್ನೂ ಅವರ ಜಪ ದೇಶದಲ್ಲಿ ನಡೆಯುತ್ತಲೇ ಇದೆ. ಅವರ ಕುರಿತು ದೇಶದಲ್ಲಿ ಹಬ್ಬಿಸಲಾದ ಪ್ರಮುಖ ಸುಳ್ಳುಗಳ ಪಟ್ಟಿ ಇಲ್ಲಿದೆ.
- ನೆಹರೂ RSS ಶಾಖೆಗೆ ಭೇಟಿ ನೀಡಿದ್ದರೇ?
ಆರ್ಎಸ್ಎಸ್ ಸಿದ್ದಾಂತಗಳನ್ನು ಕಟುವಾಗಿ ಟೀಕಿಸುತ್ತಿದ್ದ ನೆಹರು, ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿದ ಚಿತ್ರವೈರಲ್ ಆಗಿತ್ತು. ‘I Support Doval’ ಎಂಬ ಫೇಸ್ಬುಕ್ ಪೇಜ್ ನಲ್ಲಿ ಈ ಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು.
“ತುಂಬಾ ಕಷ್ಟದಿಂದ ಈ ಚಿತ್ರ ಲಭಿಸಿದೆ. ನೆಹರು ಆರ್ಎಸ್ಎಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ನೀವು ಹೇಳಿ, ನೆಹರು ಕೂಡಾ ಕೇಸರಿ ಭಯೋತ್ಪಾದಕರಾಗಿದ್ದರೇ?” ಎಂಬ ಒಕ್ಕಣೆಯೊಂದಿಗೆ ಈ ಚಿತ್ರವನ್ನು ಹರಿಯಬಿಡಲಾಗಿತ್ತು.
ಈ ಚಿತ್ರ ನಿಜವಾಗಿಯೂ ನೆಹರು ಅವರದ್ದೇ. ಆದರೆ, ಅವರು ಧರಿಸಿರುವ ಸಮವಸ್ತ್ರ ಆರ್ಎಸ್ಎಸ್ ಸಮವಸ್ತ್ರವಲ್ಲ. ಈ ಚಿತ್ರವನ್ನು 1939ರಲ್ಲಿ ಉತ್ತರಪ್ರದೇಶದ ನೈನಿ ಎಂಬಲ್ಲಿ ತೆಗೆಯಲಾಗಿತ್ತು.
1925ರಲ್ಲಿ ಆರ್ಎಸ್ಎಸ್ ಸಮವಸ್ತ್ರವನ್ನು ಪರಿಚಯಿಸಿದ್ದರೂ, ಅವರು ಕಪ್ಪು ಬಣ್ಣದ ಟೋಪಿ ಬಳಸುತ್ತಿದ್ದರು. ಈ ಚಿತ್ರದಲ್ಲಿ ಬಿಳಿ ಬಣ್ಣದ ಟೋಪಿಯನ್ನು ನೆಹರುಧರಿಸಿದ್ದಾರೆ. ಇದು ಭಾರತೀಯ ಸೇವಾದಳದ ಸಮವಸ್ತ್ರವಾಗಿದ್ದು ಆರ್ಎಸ್ಎಸ್ ಸಮವಸ್ತ್ರವಲ್ಲ.
2. ನೆಹರೂ ಸ್ತ್ರೀಲೋಲರಾಗಿದ್ದರೇ?
ಬಿಜಪಿ ಐಟಿ ಸೆಲ್ ಕಾಂಗ್ರೆಸ್ಸಿಗೆ ಮುಜುಗರ ಉಂಟುಮಾಡುವ ಸಲುವಾಗಿ, ನೆಹರು ಕುರಿತು ಅತ್ಯಂತ ಕೀಳು ಮಟ್ಟದ ಅಪಪ್ರಚಾರವನ್ನು ಆರಂಭಿಸಿದ್ದವು. ನೆಹರು ತಮ್ಮ ಸಹೋದರಿ ಹಾಗೂ ಸೋದರ ಸಂಬಂಧಿಯೊಂದಿಗೆ ತೆಗೆಸಿದ ಚಿತ್ರಗಳನ್ನು ಪರಸ್ತ್ರೀಯರೊಂದಿಗಿನ ಚಿತ್ರಗಳೆಂದು ಬಿಂಬಿಸಿ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಖುದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ತಪ್ಪು ಮಾಹಿತಿಯನ್ನು ನೀಡಿದ್ದರು.
ಮೊದಲ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ಪಂಡಿತ್ ಜವಹರ್ ಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮೀ ಪಂಡಿತ್. ಎರಡನೇ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ನಯನತಾರ ಸೆಹಗಲ್. ಇವರು ನೆಹರು ಅವರ ಸೋದರ ಸೊಸೆ. ಈ ಚಿತ್ರಗಳನ್ನು ಬಳಸಿ ಕೀಳು ಅಭಿರುಚಿಯ ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಬಿಜೆಪಿ ಐಟಿ ಸೆಲ್ ಮಾಡುತ್ತಲೇ ಇದೆ.
3. ಹಿಂದೂವಾಗಿ ಹುಟ್ಟಿದ್ದು ಆಕಸ್ಮಿಕ, ಎಂದು ನೆಹರು ಹೇಳಿದ್ದಾರೆಯೇ?
“ನಾನು ವಿದ್ಯಾರ್ಹತೆಯಲ್ಲಿ ಬ್ರಿಟಿಷ್, ಸಂಸ್ಕೃತಿಯಲ್ಲಿ ಮುಸ್ಲಿಂ, ಹಿಂದೂವಾಗಿದ್ದು ಆಕಸ್ಮಿಕ” ಈ ವಾಕ್ಯವನ್ನು ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಹೇಳಿದ್ದರು. ಸತ್ಯದ ತಲೆಯ ಮೇಲೆ ಹೊಡೆದಂತೆ ಅಪ್ಪಟ ಸುಳ್ಳೊಂದನ್ನು ಜನರ ಮುಂದಿಟ್ಟಿದ್ದರು. ಈ ವಾಕ್ಯವನ್ನು ನೆಹರೂ ಅವರ ಆತ್ಮಚರಿತ್ರೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಮತ್ತೊಂದು ಸುಳ್ಳು ಹೇಳಿದ್ದರು.
ಇವರು ಮಾತ್ರವಲ್ಲದೇ, ಅಮಿತ್ ಮಾಳವಿಯ ಕೂಡಾತಮ್ಮ ಟ್ವಿಟರ್ ಖಾತೆಯಲ್ಲಿ ಈ ಸುಳ್ಳನ್ನು ಹಂಚಿಕೊಂಡಿದ್ದರು.
ಈ ವಾಕ್ಯಕ್ಕೆ ಸಂಬಂಧಪಟ್ಟಂತೆ, The Nehrus: Motilal and Jawaharlal ಪುಸ್ತಕದಲ್ಲಿ ಉಲ್ಲೇಖವಿದೆ. ಲೇಖಕರಾದ ಬಿ ಆರ್ ನಂದಾ ಅವರು ಹೇಳಿರುವ ಪ್ರಕಾರ, ಹಿಂದೂ ಮಹಾಸಭಾದ ನಾಯಕರಾದ ಎನ್ ಬಿ ಖರೆ ಅವರು ನೆಹರು ಕುರಿತಾಗಿ ಮಾತನಾಡುವಾಗ “ನೆಹರು ವಿದ್ಯಾರ್ಹತೆಯಲ್ಲಿ ಬ್ರಿಟಿಷ್, ಸಂಸ್ಕೃತಿಯಲ್ಲಿ ಮುಸ್ಲಿಂ, ಹಿಂದೂವಾಗಿ ಹುಟ್ಟಿದ್ದು ಆಕಸ್ಮಿಕ” ಎಂದು ಹೇಳಿರುವ ಕುರಿತು ಬರೆದುಕೊಂಡಿದ್ದಾರೆ.
4. ಬೋಸ್ ಚಿತ್ರವಿರುವ ಕರೆನ್ಸಿಯನ್ನು ನೆಹರು ರದ್ದುಗೊಳಿಸಿದರೇ?
ಇದೊಂದು ವಿಚಿತ್ರ ಸುಳ್ಳು. ಭಾರತದಲ್ಲಿ ಎಂದೂ ಚಾಲ್ತಿಯಲ್ಲಿ ಇರದಂತಹ ಹಾಗೂ ಪ್ರಪಂಚದಲ್ಲಿ ಎಲ್ಲಿಯೂ ಮಾನ್ಯತೆ ಪಡೆಯದಂತಹ ಕರೆನ್ಸಿಯನ್ನು ನೆಹರುಅಪನಗದೀಕರಣಗೊಳಿಸಿದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಿಬಿಡಲಾಗುತ್ತಿದೆ.
“ಸುಭಾಷ್ ಚಂದ್ರ ಬೋಸ್ ಅವರ ಚಿತ್ರವಿರುವ ರೂ. ಐದು ಮುಖಬೆಲೆಯ ನೋಟನ್ನು ನೆಹರು ಅಪನಗದೀಕರಣಗೊಳಿಸಿದರು. ಬೋಸ್ ಅಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ಜನರು ಮರೆಯಬೇಕೆಂದು ಈ ರೀತಿ ಮಾಡಲಾಗಿತ್ತು. ಸರ್ಕಾರ ಈ ನೋಟುಗಳನ್ನು ಮತ್ತೆ ಮುದ್ರಿಸುವವರೆಗೂ ಇದನ್ನು ಶೇರ್ ಮಾಡಿ,” ಎಂದು ಬರೆದ ಚಿತ್ರವನ್ನು ಸುಮಾರು 18 ಸಾವಿರಕ್ಕೂ ಹೆಚ್ಚು ಜನ ಶೇರ್ ಮಾಡಿದ್ದಾರೆ.
ಈ ನೊಟಿನ ಅಸಲೀಯತ್ತು ಏನೆಂದರೆ, 1944ರಲ್ಲಿ ಮಯನ್ಮಾರ್’ನ ಯಾಂಗೊನ್’ನಲ್ಲಿ ಬೋಸ್ ಸ್ಥಾಪಿಸಿದ್ದ ‘ಆಝಾದ್ ಹಿಂದ್ ಬ್ಯಾಂಕ್’ ಈ ನೋಟುಗಳನ್ನು ಮುದ್ರಿಸಿತ್ತು. ಬ್ರಿಟಿಷರ ವಿರುದ್ದ ಹೋರಾಡುವ ಸಲುವಾಗಿ ಆರ್ಥಿಕ ಮೂಲ ಕ್ರೋಢಿಕರಿಸಲು ಈ ಬ್ಯಾಂಕ್ ತೆರೆಯಲಾಗಿತ್ತು. ಆದರೆ, ಈ ನೋಟಿಗೆ ಎಲ್ಲು ಮಾನ್ಯತೆ ಇರಲಿಲ್ಲ. ಹಾಗಾಗಿ ನೆಹರು ಈ ನೋಟುಗಳನ್ನು ರದ್ದು ಮಾಡುವ ಪ್ರಶ್ನೆಯೇ ಎದುರಾಗುವುದಿಲ್ಲ.
5. ನೆಹರು ಅವರಿಗೆ 1962ರಲ್ಲಿ ಥಳಿಸಲಾಗಿತ್ತೇ?
1962ರ ಇಂಡೋ-ಚೀನಾ ಯುದ್ಧ ಸೋತ ಕಾರಣಕ್ಕಾಗಿ ನೆಹರು ಅವರನ್ನು ಗುಂಪೊಂದು ಧಳಿಸಿತ್ತು.
ಈ ಚಿತ್ರವನ್ನು 1962ರಲ್ಲಿ ಕ್ಲಿಕ್ ಮಾಡಲಾಗಿತ್ತಾದರೂ, ಭಾರತ-ಚೀನಾ ಯುದ್ಧ ನಡೆಯುವ ಮುನ್ನ ತೆಗೆದಂತಹ ಚಿತ್ರವಿದು. ಪಾಟ್ನಾದಲ್ಲಿ 1962ರ ಜನವರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ತೀವ್ರವಾದ ಗದ್ದಲ ಏರ್ಪಟ್ಟಿತ್ತು. ಜನರು ಎಲ್ಲೆಂದರಲ್ಲಿ ಓಡಲು ಆರಂಭಿಸಿದಾಗ ಹಲವರು ತುಳಿತಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ನೆಹರು ಖುದ್ದು ತಾವೇ ಮುಂದೆ ಬಂದು ಜನರನ್ನು ಶಾಂತವಾಗಿಸುವ ಪ್ರಯತ್ನ ಮಾಡಿದ್ದರು. ಅವರು ಜನರ ನಡುವೆ ಹೋಗದಂತೆ ತಡೆಯಲು ಅಂಗರಕ್ಷಕ ಸಿಬ್ಬಂದಿ ಅವರನ್ನು ತಡೆಯಲು ಯತ್ನಿಸಿದಾಗ ತೆಗೆದ ಚಿತ್ರವಿದು.
ಈ ಚಿತ್ರವನ್ನು ಸುಳ್ಳು ಮಾಹಿತಿಯೊಂದಿಗೆ ಐಟಿ ಸೆಲ್’ಗಳು 2013ರಿಂದ ಹಂಚಿಕೊಳ್ಳುತ್ತಲೇ ಇವೆ.