ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದಕ್ಷಿಣ ಕನ್ನಡದ ಪ್ರಮುಖ ನದಿ ನೇತ್ರಾವತಿ ನದಿಯಲ್ಲಿ ಶನಿವಾರದಿಂದ ನೀರಿನ ಮಟ್ಟ ಏರುತ್ತಲೇ ಸಾಗಿದ್ದು ಭಾನುವಾರ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಭಾನುವಾರ ಬೆಳಗ್ಗೆ 7 ಗಂಟೆಗೆ ನದಿಯಲ್ಲಿ ನೀರಿನ ಮಟ್ಟ 8.5 ಮೀಟರ್ ಆಗಿತ್ತು. 9 ಗಂಟೆಯ ವೇಳೆಗೆ ನೀರಿನ ಮಟ್ಟ 8.6 ಆಗಿದ್ದು, ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಶನಿವಾರ ಬೆಳಗ್ಗೆ 8 ಗಂಟೆಗೆ ನದಿಯಲ್ಲಿ ನೀರಿನ ಮಟ್ಟ 6.1 ಮೀಟರ್ ಇದ್ದರೆ, ಮಧ್ಯಾಹ್ನ 2 ಗಂಟೆಯ ವೇಳೆಗೆ 6.8 ಮೀಟರ್ ಗೆ ಏರಿಕೆಯಾಗಿತ್ತು. ಸಂಜೆ 6 ಗಂಟೆಗೆ ನೀರಿನ ಮಟ್ಟ 7.3 ಮೀಟರ್ ಗೆ ತಲುಪಿದರೆ ರಾತ್ರಿ 11 ಗಂಟೆಯ ವೇಳೆಗೆ 7.7 ಮೀಟರ್ ಗೆ ಏರಿಕೆಯಾಗಿತ್ತು.
ನೇತ್ರಾವತಿ ನದಿಯಲ್ಲಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಇದೀಗ ಅಪಾಯದ ಮಟ್ಟವನ್ನು (8.6) ಮೀರಿ ಹರಿಯುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶಗಳ ಜನರು ನೆರೆ ಭೀತಿಯನ್ನು ಎದುರಿಸುತ್ತಿದ್ದಾರೆ. ನೀರಿನ ಮಟ್ಟ ಏರುತ್ತಿರುವುದರಿಂದ ತಗ್ಗು ಪ್ರದೇಶಗಳ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.