ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ಮಳೆಯ ನಡುವೆಯೂ ಶಾಂತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಸ್‌ನ ಪತ್ರಕರ್ತ ಕಪಿಲ್ ರಾವುತ್ ಅವರ ತಾಳ್ಮೆಯ ವರ್ತನೆ ಇದೀಗ ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.

ಪ್ರತಿಭಟನೆಯ ನೇರ ಪ್ರಸಾರದ ವೇಳೆ ಕೆಲ ಪ್ರತಿಭಟನಾಕಾರರು ಕಪಿಲ್ ರಾವುತ್ ಅವರನ್ನು ಸುತ್ತುವರಿದು ವರದಿ ಮಾಡಲು ಅಡ್ಡಿಪಡಿಸಿದ್ದರು. ಆದರೆ, ಯಾವುದೇ ಆಕ್ರೋಶ ಅಥವಾ ಪ್ರತಿಕ್ರಿಯೆ ವ್ಯಕ್ತಪಡಿಸದೇ ಅವರು ಶಾಂತವಾಗಿ ತಮ್ಮ ಕರ್ತವ್ಯ ಮುಂದುವರಿಸಿದರು. ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾದ ಬಳಿಕ ಪ್ರತಿಭಟನಾಕಾರರ ಪೈಕಿ ಕೆಲವರು ಕಪಿಲ್ ರಾವುತ್ ಅವರನ್ನು ಭೇಟಿಯಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.ಇನ್ನು ಕೆಲವರು ದೂರವಾಣಿ ಮೂಲಕವೂ ವಿಷಾದ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಕಪಿಲ್ ರಾವುತ್, “ನಾನು ಎಲ್ಲರನ್ನೂ ಕ್ಷಮಿಸಿದ್ದೇನೆ.

ಅವರ ವರ್ತನೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿಲ್ಲ. ಅವರ ಪರಿಸ್ಥಿತಿ ಮತ್ತು ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ” ಎಂದು ತಿಳಿಸಿದ್ದಾರೆ.ಆದರೆ, ಈ ಘಟನೆ ತಮ್ಮ ಕುಟುಂಬದವರ ಮೇಲೆ ಪರಿಣಾಮ ಬೀರಿತ್ತು ಎಂದು ಹೇಳಿದ ಅವರು, “ಈ ವಿಡಿಯೊ ನೋಡಿ ನನ್ನ ಮಗಳು ಬೇಸರಗೊಂಡಿದ್ದಳು. ಬಳಿಕ ಪ್ರತಿಭಟನಾಕಾರರು ಕ್ಷಮೆ ಕೇಳಿದ ನಂತರ ಮನೆಯವರೆಲ್ಲರೂ ನಿರಾಳರಾದರು” ಎಂದು ತಿಳಿಸಿದ್ದಾರೆ.ಕಪಿಲ್ ರಾವುತ್ ಅವರ ಸಮಚಿತ್ತದ ನಡೆ ಮತ್ತು ವೃತ್ತಿಪರ ಬದ್ಧತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.







