ನೆತನ್ಯಾಹು ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಿಗೆ ಹೊಸ ವಿಡಿಯೋ ಒಂದು ತೆರೆ ಎಳೆದಿದೆ.
ಇತ್ತೀಚೆಗೆ ದೂರದರ್ಶನದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಬಳಿಕ, ಇರಾನ್ ದಾಳಿಯಲ್ಲಿ ನೆತನ್ಯಾಹು ಮೃತಪಟ್ಟಿದ್ದಾರೆ ಎಂಬ ಆರೋಪಗಳೊಂದಿಗೆ ಕೆಲವು ಎಐ (ಕೃತಕ ಬುದ್ಧಿಮತ್ತೆ) ವಿಡಿಯೋಗಳು ವೈರಲ್ ಆಗಿದ್ದವು. ಆ ವಿಡಿಯೋದಲ್ಲಿ ಬಲಗೈಯಲ್ಲಿ ಆರು ಬೆರಳು ಕಾಣಿಸಿಕೊಂಡಿದ್ದು, ಅದು ನಕಲಿ ದೃಶ್ಯ ಎನ್ನುವ ಶಂಕೆಗೂ ಕಾರಣವಾಗಿತ್ತು.

ಈ ದಾರಿತಪ್ಪಿಸುವ ಪೋಸ್ಟ್‌ಗಳ ನಡುವೆಯೇ, ಇತ್ತೀಚೆಗೆ ಬಿಡುಗಡೆಯಾದ ಹೊಸ ವಿಡಿಯೋದಲ್ಲಿ ನೆತನ್ಯಾಹು ಅವರು ಅಮೆರಿಕದ ರಾಯಭಾರಿ Mike Huckabee ಅವರೊಂದಿಗೆ ನಡೆದುಕೊಂಡು ಮಾತನಾಡುತ್ತಿರುವುದು ಕಾಣಿಸಿಕೊಂಡಿದೆ. ಈ ಮೂಲಕ ಅವರ ಸಾವಿನ ಸುದ್ದಿಗಳು ಸುಳ್ಳು ಎಂಬುದು ಸ್ಪಷ್ಟವಾಗಿದೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ಕಳೆದ ಕೆಲವು ವಾರಗಳಿಂದ ನೆತನ್ಯಾಹು ಮೃತಪಟ್ಟಿದ್ದಾರೆ ಎಂಬ ವದಂತಿಗಳು ವೇಗವಾಗಿ ಹರಡುತ್ತಿವೆ. ಆದರೆ ಇದಕ್ಕೆ ಪ್ರತಿಯಾಗಿ ನೆತನ್ಯಾಹು ಅವರು ಇತ್ತೀಚೆಗೆ ಇರಾನ್ ಜನರಿಗೆ ನೌರುಜ್ ಪಾರ್ಸಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.

“ಧೈರ್ಯಶಾಲಿ ಇರಾನ್ ಜನತೆಗೆ ಬೆಳಕಿನ ಹಬ್ಬದ ಶುಭಾಶಯಗಳು. ಬೆಳಕು ಕತ್ತಲೆಯ ಮೇಲೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ನಂಬಿಕೆ ಸದಾ ಜೀವಂತವಾಗಿರಲಿ” ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.ನೌರುಜ್ ಪಾರ್ಸಿ ಹೊಸ ವರ್ಷವನ್ನು ಸೂಚಿಸುವ ಹಬ್ಬವಾಗಿದ್ದು, ಇರಾನ್ ಸೇರಿದಂತೆ ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಹಾಗೂ ಮಧ್ಯಪ್ರಾಚ್ಯದ ಹಲವೆಡೆ ಜನರು ಅದನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಒಟ್ಟಾರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಎಐ ಆಧಾರಿತ ತಪ್ಪು ಮಾಹಿತಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.






