ನೆಹರು ಕಾಲವಾಗಿ ಈಗ ಸರಿಸುಮಾರು ೬೦ ವರ್ಷಗಳು ಕಳೆಯುತ್ತಿವೆ (೧೯೬೪). ಆದರೂˌ ನೆಹರು ಇಂದಿಗೂ ಈ ಜಗತ್ತಿನಲ್ಲಿ ಚರ್ಚೆಯ ವಸ್ತುವಾಗಿದ್ದಾರೆ ಹಾಗು ಅಭಿವೃದ್ಧಿ ವಿರೋಧಿಗಳಿಂದ ನಿರಂತರ ದ್ವೇಷಿಸಲ್ಪಡುತ್ತಿದ್ದಾರೆ. ನೆಹರು ತಮ್ಮ ಅಭಿವೃದ್ದಿಪರ ಕಾರ್ಯಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಪ್ರೀತಿಯ ಸ್ಥಾನ ಹೇಗೆ ಪಡೆದರೊ ಅದೇ ಕಾರಣಕ್ಕೆ ದೇಶದ್ರೋಹಿ ಮನಸ್ಸುಗಳಿಂದ ದ್ವೇಷಿಸಲ್ಪಡುತ್ತಿದ್ದಾರೆ. ಈ ದೇಶದ ಮೂಲ ಸ್ವರೂಪವನ್ನು ತಮ್ಮ ಹಿತಾಸಕ್ತಿಯಂತೆ ಪರಿವರ್ತಿಸಲು ಹೊಂಚು ಹಾಕಿ ಕುಳಿತಿದ್ದ ಧರ್ಮಾಂಧರಿಗೆ ನೆಹರು ಮಾಡಿರುವ ಪ್ರಗತಿಪರ ಕಾರ್ಯಗಳು ಅಪತ್ಯವಾಗುತ್ತವೆ.
ನೆಹರು ಮತ್ತು ಗಾಂಧಿಯವರ ವ್ಯಕ್ತಿತ್ವವು ಎಂತಹದೆಂದರೆ ಅವರನ್ನು ಜನರ ಮನಸ್ಸಿನಿಂದ ಮರೆ ಮಾಡಬೇಕೆಂದಷ್ಟು ಅವರು ಪ್ರಸ್ತುತವಾಗುತ್ತಾ ಹೋಗುತ್ತಾರೆˌ ಹಾಗು ಮತ್ತಷ್ಟು ಜನಮಾನಸದಲ್ಲಿ ಬೇರೂರುತ್ತಾ ಸಾಗುತ್ತಾರೆ. ಜನರ ಮನಸ್ಸಿನಿಂದ ನೂಹರು-ಗಾಂಧಿಯ ಹೆಸರುಗಳು ಅಳಕಿಸಬೇಕೆಂದಷ್ಟು ಅವರ ಹೆಸರುಗಳು ಅಜರಾಮರವಾಗುತ್ತ ಹೋಗುತ್ತಿವೆ. ಜಾಗತಿಕ ಮನ್ನಣೆಯ ವ್ಯಕ್ತಿತ್ವಗಳನ್ನು ದ್ವೇಷಿಸುವˌ ಅವಮಾನಿಸುವ ಕೊಳೆತ ಮನಸ್ಸುಗಳಿಗೆ ಇದು ಅರ್ಥವಾಗದ ಸಂಗತಿ. ಸ್ವಾತಂತ್ರ ಪಡೆದ ಹೊಸದರಲ್ಲಿ ಭಾರತವು ಔದ್ಯೋಗಿಕ ವಿಕಾಸದಲ್ಲಿ ಭಯಂಕರ ಹಿಂದುಳಿದಿತ್ತು. ಅದಕ್ಕೆ ಕಾರಣ ನೆಹರು ದ್ವೇಷಿಗಳ ಪೂರ್ವಜರು ಬ್ರಿಟೀಷರು ಮತ್ತು ಮೊಘಲರೊಂದಿಗೆ ಸೇರಿ ಈ ದೇಶವನ್ನು ಅಪಾರವಾಗಿ ವಂಚಿಸಿದ್ದು. ನೆಹರು ಅವರ ದೂರದರ್ಶಿ ನಾಯಕತ್ವ ನೆಹರು ದ್ವೇಷಿಗಳ ಪೂರ್ವಜರು ಮಾಡಿದ್ದ ಎಲ್ಲ ಕೊಳಕನ್ನು ತೊಳೆದು ಈ ದೇಶವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿಸಿತು. ಸ್ವಾತಂತ್ರ ನಂತರ ದೇಶದ ಅಭಿವೃದ್ಧಿಗೆ ಹಾಕಿದ ಭದ್ರ ಬುನಾದಿಯ ಶ್ರೇಯ ಯಾರಿಗೆ ಸಲ್ಲಬೇಕು?
ಅದರ ಶ್ರೇಯ ನೆಹರು ದ್ವೇಷಿಗಳ ಗುಂಪಿನ ಸದಸ್ಯರಿಗೆ ನೀಡಬೇಕೆಂದರೆ ಆಗಿನ್ನೂ ನರೇಂದ್ರ ಮೋದಿ ಹುಟ್ಟಿರಲಿಲ್ಲ. ಸರ್ದಾರ್ ಪಟೇಲರು ೧೯೫೦ ರಲ್ಲಿಯೆ ಮರಣಿಸಿದರು. ಗಾಂಧಿಯವರನ್ನು ೧೯೪೮ ರಲ್ಲಿಯೇ ಮತಾಂಧರ ಗುಂಪು ಬರ್ಬರ ಹತ್ಯೆ ಮಾಡಿತ್ತು. ಈ ದೇಶ ಧರ್ಮಾಧಾರದಲ್ಲಿ ನಿರ್ಮಾಣವಾಗಬೇಕು ಹಾಗು ಬ್ರಾಹ್ಮಣ ಯಜಮಾನಿಕೆಯ ಚಾತುರ್ವರ್ಣ ವ್ಯವಸ್ಥೆ ಮುಂದುವರೆಯಬೇಕು ಎನ್ನುತ್ತಿದ್ದ ಸಂಘಿ ಗೋಳ್ವಾಲ್ಕರ್ ಅವರಿಗೆ ಈ ದೇಶದ ಔದ್ಯೋಗಿಕ ವಿಕಾಸದ ಕುರಿತು ಯಾವುದೇ ಬಗೆಯ ಚಿಂತನೆ ಇರಲಿಲ್ಲ. ಹಾಗಾದರೆ ದೇಶದ ಕೈಗಾರೀಕರಣದ ಶ್ರೇಯ ನೆಹರುರಿಗಲ್ಲದೆ ಇನ್ನಾರಿಗೆ ಕೊಡಲು ಸಾಧ್ಯ?
ಅಂದು ಕೈಗಾರೀಕರಣದ ಅಭಿವೃದ್ಧಿಗಾಗಿ ವಿದ್ಯುತ್ ಮತ್ತು ಇಂಧನಗಳ ಅಗತ್ಯವಿತ್ತು. ಅದಕ್ಕಾಗಿ ಮ್ಯಾಥನ್ˌ ಪಂಚೆತ್, ತಿಲಯ್ಯ ಮುಂತಾದ ಆಣೆಕಟ್ಟುಗಳು ನಿರ್ಮಾಣವಾದವು. ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಾದ ಬಿಟಿಪಿಎಸ್, ಟಿಡಿಪಿಎಸ್ ಗಳು ಸ್ಥಾಪಿಸಲಾಯಿತು. ಇವುಗಳ ಸ್ಥಾಪನೆಯ ಶ್ರೇಯ ಯಾರಿಗೆ ಸಲ್ಲಬೇಕು?
೧೯೫೨ ಪಾಪˌ ಅಟಲ್ ಬಿಹಾರಿ ವಾಜಪೇಯಿ ಎಲ್ಲಿದ್ದರೊ ಏನೊ, ಶಾಮಾಪ್ರಸಾದ ಮುಖರ್ಜಿ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಿದ್ದರು. ಭಾರತದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆ ಮತ್ತು ಶ್ರೇಣೀಕೃತ ಸಾಮಾಜಿಕ ವಿಕೃತಿಗಳ ವಿರುದ್ಧ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಿರಂತರ ಹೋರಾಡುತ್ತಿದ್ದರು. ಅವರಿಗೆ ಶೋಷಿತರ ಗೌರವ ಮತ್ತು ಬದುಕು ಹಸನುಗೊಳಿಸುವ ಮಹತ್ತರ ಜವಾಬ್ದಾರಿ ಹಾಗು ಚಿಂತೆ ಕಾಡುತ್ತಿತ್ತು. ಆಗ ದೇಶದ ಅಧಿಕಾರದ ಚುಕ್ಕಾಣಿ ನೆಹರು ಕೈಯಲ್ಲಿತ್ತು. ಅಂದರೆˌ ಔದ್ಯೋಗಿಕ ವಿಕಾಶದ ಶ್ರೇಯ ಕೂಡ ನೆಹರು ಅವರಿಗೆ ಸಲ್ಲಬೇಕು ಅಲ್ಲವೆ!

ಇನ್ನು ದೇಶದಲ್ಲಿ ವೈಜ್ಞಾನಿಕ ಬೆಳವಣಿಗೆಯ ಕುರಿತು ಯಾರು ಚಿಂತಿಸುತ್ತಿದ್ದರು ಎನ್ನುವ ಸಂಗತಿ ಕೂಡ ಮಹತ್ವದ್ದಾಗಿದೆ. ನಾವು ವೈಜ್ಞಾನಿಕ ವಿಕಾಸದ ಶ್ರೇಯವನ್ನು ಸಾವರಕರ್ ಅವರಿಗೆ ನೀಡಲಾದೀತೆ? ಸದಾ ಹಿಂದೂ-ಮುಸ್ಲಿಮ್ ಎನ್ನುವ ಸಿಮಿತ ಹಾಗು ಅಲ್ಪ ವಿಷಯದ ಸುತ್ತಲು ಚಿಂತಿಸುತ್ತಿದ್ದ ಸಾವರಕರ್ ದೇಶದ ಬಹುತ್ವ ತತ್ವಾಧಾರಿತ ಸರ್ವತೋಮುಖ ಬೆಳವಣಿಗೆಯ ಕುರಿತು ಮಾತನಾಡಿದ್ದು ನಾವು ಕಾಣೆವು. ಧರ್ಮ ಮತ್ತು ಮೌಢ್ಯಗಳನ್ನೆ ಬಂಡವಾಳ ಮಾಡಿಕೊಂಡಿರುವ ಸಾವರಕರ್ ಸಂತತಿ ಇಂದು ದೇಶದಲ್ಲಿ ವೈಜ್ಞಾನಿಕ ಚಿಂತನೆಯನ್ನೆ ನಾಶಮಾಡುತ್ತಿರುವ ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ. ಆದರೆ ದೇಶದ ವೈಜ್ಞಾನಿಕ ಬೆಳವಣಿಗೆಗೆ ನೆಹರುರವರ ದೂರದರ್ಶಿತ್ವವನ್ನು ನಾವು ಮರೆಯಲಾದೀತೆ?
ಭಾರತವು ಜನತಂತ್ರದ ತವರು ಎಂದು ಇಂದು ಮೋದಿಯವರು ಹೋದಲ್ಲಿ ಬಂದಲ್ಲಿ ಭಾಷಣ ಮಾಡುತ್ತಾರೆ. ಆ ಜನತಂತ್ರದ ಬೀಜವನ್ನು ಭಾರತದಲ್ಲಿ ಬಿತ್ತಿದವರು ಬುದ್ಧ-ಬಸವಣ್ಣ ಮುಂತಾದ ದಾರ್ಶನಿಕರೆ ಹೊರತು ಮೋದಿಯವರ ಪಕ್ಷ ನಂಬುವ ಸನಾತನ ಧರ್ಮದವರಲ್ಲ ಎನ್ನುವುದು ನಾವು ಅರಿಯಬೇಕಿದೆ. ಬುದ್ದ-ಬಸವಣ್ಣನವರು ನೆಟ್ಟ ಆ ಪ್ರಾಚೀನ ಜನತಂತ್ರದ ಬೇರುಗಳನ್ನು ಗಟ್ಟಿಗೊಳಿಸಿದವರು ನೆಹರು-ಗಾಂಧಿ-ಅಂಬೇಡ್ಕರ್ ಮುಂತಾದವರು. ಆದರೆ ಇಂದು ದೇಶದ್ರೋಹಿಗಳು ಇವರನ್ನು ದ್ವೇಷಿಸುತ್ತಾ ತಾವೇ ರಾಷ್ಟ್ರಭಕ್ತರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಜೆ ಬಿ ಕೃಪಾಲಿನಿˌ ರಾಮಮನೋಹರ್ ಲೋಹಿಯಾ, ದೀನ್ ದಯಾಳ್ ಉಪದ್ಯಾಯ ಈ ಮೂವರು ನಾಯಕರ ವಿರುದ್ಧ ಸಂಸತ್ತಿನ ಮಧ್ಯಾವಧಿ ಚುನಾವಣೆಯಲ್ಲಿ ಅಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ನಿಲ್ಲಿಸದೆ ಅವರನ್ನು ಸಂಸತ್ತಿಗೆ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿತು. ಇದು ನಿಜವಾದ ಜನತಂತ್ರದ ಮಾರ್ಗ. ಇಂದು ತನ್ನ ಹತ್ತು ವರ್ಷಗಳ ಆಡಳಿತದಲ್ಲಿ ಮೋದಿಯವರು ಕನಿಷ್ಟ ವಿರೋಧ ಪಕ್ಷದ ನಾಯಕ ಇರದಂತೆ ನೋಡಿಕೊಂಡರು. ಆದರೂ ಅವರು ನೆಹರುರವರನ್ನು ದೂಷಿಸುತ್ತ ತಮ್ಮ ಆಡಳಿತದ ವಿಫಲತೆಯನ್ನು ಮರೆಮಾಚಿಕೊಳ್ಳುತ್ತಿದ್ದಾರೆ.
ಇಂದು ನೆಹರು ಈ ದೇಶಕ್ಕೆ ಅನ್ಯಾಯ ಮಾಡಿದರು ಎಂದು ಸುಳ್ಳು ಕತೆಗಳನ್ನು ಹೇಳಿಕೊಂಡು ಓಡಾಡುತ್ತಿರುವವರು ಭಾರತದ ಸ್ವಾತಂತ್ರ್ಯಕ್ಕಾಗಿ ನೆಹರು ೯ ವರ್ಷ ಜೈಲಿನಲ್ಲಿ ಕಳೆದದ್ದನ್ನು ಮರೆತ್ತಂತೆ ನಟಿಸುತ್ತಿದ್ದಾರೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿರುವಾಗ ಬ್ರಿಟೀಷರಿಗೆ ನೆರವಾಗುತ್ತ ಸ್ವಾತಂತ್ರ ಚಳುವಳಿಯನ್ನು ಹತ್ತಿಕ್ಕುತ್ತಿದ್ದವರು ಇಂದು ದೇಶಭಕ್ತಿಯ ಮಾತನಾಡುತ್ತಿರುವುದು ವಿಪರ್ಯಾಸವಾಗಿದೆ.

