ಕಳೆದ ಏಳೂವರೆ ವರ್ಷಗಳಿಂದ ಮುಚ್ಚಲ್ಪಟ್ಟಿರುವ ಬೆಂಗಳೂರಿನ ಗವಿಪುರಂ ಗುಟ್ಟಳ್ಳಿಯ ಕೆಂಪೇಗೌಡ ಮುಖ್ಯರಸ್ತೆಯ ಸರ್ಕಾರಿ ಬಾಲಕರ ಪ್ರೌಢಶಾಲೆಯ ಎದುರು ಎಎಪಿ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉಪವಾಸ ಸತ್ಯಾಗ್ರಹದ ನೇತೃತ್ವದ ವಹಿಸಿದ್ದ ಎಎಪಿ ಬೆಂಗಳೂರು ಯುವ ಘಟಕದ ಅಧ್ಯಕ್ಷ ಪ್ರಕಾಶ್ ಎನ್ ಮಾತನಾಡಿ, “ಸ್ಥಳೀಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್‌ರವರ ನಿರ್ಲಕ್ಷ್ಯದಿಂದಾಗಿ ಕ್ಷೇತ್ರದ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿ ತಲುಪಿವೆ. ಕೇವಲ ಸುಂಕೇನಹಳ್ಳಿ ವಾರ್ಡ್‌ನಲ್ಲೇ ನಾಲ್ಕು ಸರ್ಕಾರಿ ಶಾಲೆಗಳ ಪೈಕಿ ಮೂರು ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಉಳಿದಿರುವ ಇನ್ನೊಂದು ಶಾಲೆಯು ಮುಚ್ಚುವ ಹಂತದಲ್ಲಿದೆ. ಪ್ರಭಾವಿ ವ್ಯಕ್ತಿಗಳ ಒಡೆತನದ ಖಾಸಗಿ ಶಾಲೆಗಳಿಗೆ ಲಾಭ ಮಾಡಿಕೊಡಲು ಸರ್ಕಾರಿ ಶಾಲೆಗಳು ಪುನರಾರಂಭ ಆಗದಂತೆ ಉದಯ್ ಗರುಡಾಚಾರ್ ಪಿತೂರಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಎಎಪಿ ಮುಖಂಡ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಮಾತನಾಡಿ, “ಇನ್ನೆರಡು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈವರೆಗೂ ಜನರ ಕೈಗೆ ಸಿಗದ ಆಡಳಿತಾರೂಢ ಬಿಜೆಪಿ ನಾಯಕರು ಚುನಾವಣೆ ಸಮೀಪಿಸುತ್ತಿದ್ದಂತೆ ಮನೆ ಬಾಗಿಲಿಗೆ ಬರಲಿದ್ದಾರೆ. ಎಎಪಿ ಆಡಳಿತವಿರುವ ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಿರುವಾಗ, ಬೆಂಗಳೂರಿನಲ್ಲಿ ಏಕೆ ಸಾಧ್ಯವಾಗಿಲ್ಲ? ಎಂದು ಬಿಜೆಪಿ ನಾಯಕರನ್ನು ಜನರು ಪ್ರಶ್ನಿಸಬೇಕಿದೆ” ಎಂದು ಹೇಳಿದರು.
ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ಆದರೆ ಇಚ್ಛಾಶಕ್ತಿಯ ಕೊರತೆಯಿದೆ. ಎಲ್ಲೆಲ್ಲಿ ಭಾರೀ ಪ್ರಮಾಣದ ಅಕ್ರಮ ಮಾಡಲು ಸಾಧ್ಯವಿದೆಯೋ, ಅಲ್ಲಿ ಮಾತ್ರ ಬಿಜೆಪಿ ಸರ್ಕಾರವು ಹಣ ವಿನಿಯೋಗಿಸುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರದ ಹಣದ ದಾಹದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಕೂಡ ದುಬಾರಿ ಬೆಲೆ ತೆತ್ತು ಖಾಸಗಿ ಶಾಲೆಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಮಾಜಿ ಸಂಸದ ಡಾ ವೆಂಕಟೇಶ್ ,ಸುರೇಶ್ ರಾಥೋಡ್,ಮಾವಳ್ಳಿ ಕೃಷ್ಣ , ಸೇರಿದಂತೆ ಅನೇಕ ಮುಖಂಡರು ಹಾಗೂ ಸ್ಥಳೀಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.