ವೈದ್ಯಕೀಯ ವ್ಯಾಸಂಗಕ್ಕಾಗಿ ನಡೆಸಲಾಗುವ NEET-UG ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಜುಲೈ 17ರಂದು ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 2ರಿಂದ ವಿದ್ಯಾರ್ಥಿಗಳು ಆನ್ಲೈನ್ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ವೈದ್ಯಕೀಯ ಮತ್ತು ಇದಕ್ಕೆ ಸಂಬಂಧಿತ ಕಾಲೇಜುಗಳಲ್ಲಿ ದಾಖಲಾತಿ ಪಡೆಯಲು ನಡೆಸುವ ರಾಷ್ಟ್ರವ್ಯಾಪಿ ಪರೀಕ್ಷೆ ಇದಾಗಿದ್ದು, 13 ಭಾಷೆಗಳಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದೆ.
ಮೇ 7ರವರೆಗೆ ನೋಂದಣಿ ಪ್ರಕ್ರಿಯೆ ಮುಂದುವರೆಯುವ ಸಾಧ್ಯತೆಗಳಿವೆ. ನಂತರದ ಐದು ದಿನಗಳಲ್ಲಿ ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಲು ಅವಕಾಶ ನೀಡಲಾಗುತ್ತದೆ. ಮಾರ್ಚ್ 31ರಂದು ಪರೀಕ್ಷೆಯ ಅಧಿಕೃತ ವೇಳಾಪಟ್ಟಿಯನ್ನು NTA ಘೋಷಿಸಲಿದೆ.
2021ರಲ್ಲಿ ದಾಖಲೆಯ 16.14,777 ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಬಯಸಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶೇ. 95.6 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ. 56.4 (8,70,704) ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿದ್ದರು. ಮೂವರು ವಿದ್ಯಾರ್ಥಿಗಳು ಟಾಪರ್ ಸ್ಥಾನವನ್ನು ಅಲಂಕರಿಸಿದ್ದರು.
ವಿವಾದದ ಒಳಸುಳಿಯಲ್ಲಿ NEET ಪರೀಕ್ಷೆ:
ತಮಿಳುನಾಡು ಸರ್ಕಾರವು ರಾಜ್ಯದಲ್ಲಿ ನೀಟ್ ಪರೀಕ್ಷೆ ರದ್ದತಿಗಾಗಿ ವಿಧಾನಸಭೆಯನ್ನು ಮಸೂದೆಯನ್ನು ಮಂಡಿಸಿತ್ತು. ಸರ್ವಾನುಮತದಿಂದ ಈ ಮಸೂದೆಗೆ ಅನುಮೋದನೆ ದೊರಕಿತ್ತು. ಆದರೆ, ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕಲು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಡಿಎಂಕೆ ನೇತೃತ್ವದ ಸರ್ಕಾರ, ಮಸೂದೆಯನ್ನು ವಿಧಾನಸಭೆಯಲ್ಲಿ ಮತ್ತೆ ಮಂಡಿಸಿ ರಾಜ್ಯಪಾಲರಿಗೆ ಮುಜುಗರ ಉಂಟುಮಾಡಿತ್ತು.
ಕೇವಲ ಆರ್ಥಿಕವಾಗಿ ಸದೃಢರಾಗಿರುವ ವಿದ್ಯಾರ್ಥಿಗಳ ಹೊರತಾಗಿ ಇತರರಿಗೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುತ್ತಿಲ್ಲ. ಇಂತಹ ವಿದ್ಯಾರ್ಥಿಗಳು ಮಾತ್ರ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯುತ್ತಾರೆ, ಎಂದು ತಮಿಳುನಾಡು ಆರೋಗ್ಯ ಮಂತ್ರಿ ಮಾ ಸುಬ್ರಹ್ಮಣಿಯನ್ ಹೇಳಿದ್ದರು.
ಹಿಂದಿನಿಂದಲೂ ನೀಟ್ ಪರೀಕ್ಷೆ ಕುರಿತು ಅಪಸ್ವರ ಎತ್ತುತ್ತಿರುವ ತಮಿಳುನಾಡು ಸರ್ಕಾರವು, ಈ ಪರೀಕ್ಷೆ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿದೆ.