ಭಾರತದಲ್ಲಿ ಸಾರ್ವತ್ರಿಕ ಚುನಾವಣಾ ಪದ್ಧತಿಯನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ, ಜನರೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲೆಂದೇ, ಚುನಾವಣೆಗಳು ನಡೆದಿದ್ದವು. ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದ ಜಸ್ಟಿಸ್ ಪಾರ್ಟಿ 1920ರಲ್ಲಿ ನಡೆದ ಚುನಾವಣೆಗಳಲ್ಲಿ ಗೆದ್ದು, ಭಾರತ ಬ್ರಿಟೀಷ್ ಆಡಳಿತಕ್ಕೊಳಪಟ್ಟಿದ್ದಾಗಲೇ, ಸರ್ಕಾರವನ್ನು ರಚಿಸಿತ್ತು. ಮದ್ರಾಸ್ ಪ್ರಾಂತೀಯ ಶಾಸನ ಸಭೆಯ ಕಾರ್ಯವೈಖರಿಯನ್ನು ಗಮನಿಸಲು ಇಂಗ್ಲೆಂಡಿನಿಂದ ಭಾರತಕ್ಕೆ ಆಗಮಿಸಿದ್ದ ಎಲ್ಲರೂ ವ್ಯಕ್ತಪಡಿಸಿದ ಸಮಾನ ಅಭಿಪ್ರಾಯವೆಂದರೆ, ಮದ್ರಾಸ್ ಪ್ರಾಂತ್ಯವು ಕಾನೂನು ಬದ್ಧವಾಗಿ, ಆಡಳಿತ ವ್ಯವಸ್ಥೆಯ ನಿಯಮಗಳನುಸಾರ ಸರ್ಕಾರವನ್ನು ನಡೆಸುತ್ತಿತ್ತು. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಥಾಪಿಸಿದ ಶಾಸನ ಸಭೆಯ ಇತಿಹಾಸದ ಒಂದು ಮಹತ್ವದ ದಿನವಾಗಿ ಉಳಿದಿದೆ. ನಾವು ಪ್ರಜಾಪ್ರಭುತ್ವವನ್ನು ರಕ್ಷಿಸುವ ಉದ್ದೇಶದಿಂದ, ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡಲೆಂದು, ಒಕ್ಕೂಟ ವ್ಯವಸ್ಥೆಯ ನೀತಿಗಳನ್ನು ಸಂರಕ್ಷಿಸಲು ಹಾಗೂ ಶಿಕ್ಷಣದ ಹಕ್ಕನ್ನು ಪಡೆಯಲು ಇಲ್ಲಿ ನೆರೆದಿದ್ದೇವೆ,
ಒಕ್ಕೂಟ ನೀತಿಯ ರಕ್ಷಣೆ
ನಾವು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಪರೀಕ್ಷೆಯನ್ನು ಕುರಿತು ಚರ್ಚೆ ನಡೆಸಲು ಇಲ್ಲಿ ನೆರೆದಿಲ್ಲ. ಬದಲಾಗಿ ತಮಿಳುನಾಡಿನ ಶಾಸನಸಭೆಯ ಸಾರ್ವಭೌಮತ್ವ ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳಲು ನೆರೆದಿದ್ದೇವೆ. ಭಾರತೀಯ ಉಪಖಂಡದ ಜನಾಂಗೀಯ, ಭಾಷಿಕ ಹಾಗೂ ಸಾಂಸ್ಕøತಿಯ ವೈವಿಧ್ಯತೆಯನ್ನು ರಕ್ಷಿಸುವ ಒಂದು ಪ್ರಬಲವಾದ ಮಾರ್ಗವೇ ಒಕ್ಕೂಟ ವ್ಯವಸ್ಥೆಯ ಮೂಲ ತತ್ವ. ಮಹತ್ತರವಾದ ಈ ಒಕ್ಕೂಟ ನೀತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದಲೇ ನಾವು ಇಲ್ಲಿ ಒಂದಾಗಿ ನೆರೆದಿದ್ದೇವೆ. ಸಾಮಾಜಿಕ ನ್ಯಾಯ, ದಮನಿತ ಜನರ ಹಕ್ಕುಗಳು, ತಮಿಳು ಜನಾಂಗದ ಮತ್ತು ತಮಿಳು ಭಾಷೆಯ ಶ್ರೇಷ್ಠತೆ ಇವೆಲ್ಲವನ್ನೂ ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಒಂದು ವಿಧಾನಸಭೆಯಲ್ಲಿ ನಿಂತು ನಾನು ಮಾತನಾಡುತ್ತಿದ್ದೇನೆ.
ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಿರಾಕರಿಸುವ ನೀಟ್ ಪರೀಕ್ಷಾ ಪದ್ಧತಿಯನ್ನು ಈ ಶಾಸನಸಭೆ ತೊಡೆದುಹಾಕುತ್ತದೆ ಎಂಬ ವಿಶ್ವಾಸದೊಂದಿಗೆ ಮಾತನಾಡುತ್ತಿದ್ದೇನೆ. ಇಡೀ ದೇಶದಲ್ಲಿ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು ನೆರವಾಗುವ ಒಂದು ನೀತಿಯನ್ನು ಪ್ರಸ್ತಾಪಿಸಲು ಇಂದು ನಾವು ವಿಧಾನಸಭೆಯಲ್ಲಿ ನೆರೆದಿದ್ದೇವೆ. ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಲ್ಲಿರುವ ಹಂಬಲವನ್ನು ಪೂರೈಸುವ ಸಲುವಾಗಿ ನಾವು ಐಕಮತ್ಯದೊಂದಿಗೆ, ಸಾಮಾಜಿಕ ನ್ಯಾಯವನ್ನು ಪ್ರೋತ್ಸಾಹಿಸಲು ಇಲ್ಲಿ ನೆರೆದಿದ್ದೇವೆ. ನೀಟ್ ಪದ್ಧತಿ ಸಂವಿಧಾನ ರೂಪಿಸಿರುವ ಒಂದು ನೀತಿ ಅಲ್ಲ. ಅದನ್ನು ಸಂವಿಧಾನದ ಒಂದು ಭಾಗ ಎಂದು ಪರಿಗಣಿಸಿಯೂ ಇಲ್ಲ. ಭಾರತೀಯ ವೈದ್ಯಕೀಯ ಮಂಡಲಿ ನೀಟ್ ಪದ್ಧತಿಯನ್ನು ರೂಪಿಸಿ ಜಾರಿಗೊಳಿಸಿದೆ. ಈ ಪರೀಕ್ಷಾ ಪದ್ಧತಿಯನ್ನು 2010ರಲ್ಲಿ ಜಾರಿಗೊಳಿಸಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.
ಹಲವು ರಾಜ್ಯಗಳೂ ಸಹ ಈ ನೀತಿಯನ್ನು ವಿರೋಧಿಸಿದ್ದವು. ದೇಶಾದ್ಯಂತ 115 ಮೊಕದ್ದಮೆಗಳ ಮೂಲಕ ಈ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಮುಂದಾಳತ್ವ ವಹಿಸಿದೆ. ಈ ಎಲ್ಲ ಮೊಕದ್ದಮೆಗಳನ್ನೂ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಗೊಳಪಡಿಸಿ ಆಲಿಸಿದೆ. 2013ರ ಜುಲೈ 18ರ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವೂ ನೀಟ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಹೇಳಿದ್ದು, ಮುಖ್ಯ ನ್ಯಾಯಾಧೀಶರೇ ತೀರ್ಪು ನೀಡಿದ್ದಾರೆ. ತದನಂತರ ದೇಶಾದ್ಯಂತ ಈ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ಖಾಸಗಿ ತರಬೇತು ಸಂಸ್ಥೆ ಈ ಮೊಕದ್ದಮೆಗೆ ಮತ್ತೆ ಜೀವ ನೀಡಿತ್ತು. ಸರ್ವೋಚ್ಚ ನ್ಯಾಯಾಲಯವು ಈ ಮೊಕದ್ದಮೆಯ ವಿಚಾರಣೆ ನಡೆಸಿತ್ತು. ಈ ವಿಚಾರಣೆಯ ನಂತರ ಸರ್ವೋಚ್ಚ ನ್ಯಾಯಾಲಯವು, 2016ರ ಮೇ 24ರಂದು “ ತೀರ್ಪು ಹಿಂಪಡೆಯಲಾಗಿದೆ ” ಮತ್ತು “ ಇದನ್ನು ಹೊಸ ಮೊಕದ್ದಮೆಯಾಗಿ ಆಲಿಸಲಾಗುತ್ತದೆ” ಎಂದು ಹೇಳಿತ್ತು. ಈ ನಿರ್ಣಯವನ್ನು ಆಧರಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2016ರ ಏಪ್ರಿಲ್ 11ರಂದು ಸುಗ್ರೀವಾಜ್ಞೆಯೊಂದನ್ನು ಹೊರಡಿಸಿ ದೇಶವ್ಯಾಪಿಯಾಗಿ ನೀಟ್ ಪದ್ಧತಿಯನ್ನು ಜಾರಿಗೊಳಿಸಿತ್ತು.
ನೀಟ್ ಪದ್ಧತಿಯಿಂದ ಖಾಸಗಿ ತರಬೇತು ಸಂಸ್ಥೆಗಳು ಲಾಭ ಗಳಿಸುತ್ತವೆ. ತರಬೇತಿಗಾಗಿ ಅಪಾರ ಮೊತ್ತದ ಹಣ ಪಾವತಿಸಲು ಸಾಧ್ಯವಾಗದ ಜನರ ಹಿತಾಸಕ್ತಿಯನ್ನು ಕಾಪಾಡಲು ನೀಟ್ ವಿನಾಯಿತಿ ಮಸೂದೆಯನ್ನು ಮಂಡಿಸಲಾಗಿದೆ. ಬಡ ಮತ್ತು ಅವಕಾಶವಂಚಿತ ಮಕ್ಕಳ ಶಿಕ್ಷಣದ ಹಕ್ಕುಗಳಿಗೆ ನೀಟ್ ಒಂದು ತೊಡಕಾಗಿದೆ. ವೈದ್ಯರಾಗುವ ಕನಸು ಹೊತ್ತ ಬಡ ಮಕ್ಕಳು ನೀಟ್ ಎಂಬ ತಡೆಗೋಡೆಯನ್ನು ಎದುರಿಸಬೇಕಾಗಿದೆ. “ ನೀವು ವೈದ್ಯರಾಗುವುದು ಸಾಧ್ಯವಿಲ್ಲ ” ಎಂದು ಹೇಳುವ ನೀಟ್ ಪದ್ಧತಿಯು “ ನಿಮಗೆ ಅಂತಹ ಅರ್ಹತೆ ಇಲ್ಲ” ಎಂದು ಹೇಳುವ ಮೂಲಕ ನೀಟ್ ಪದ್ಧತಿಯು ಜನರ ಮುನ್ನಡೆಗೆ ತೊಡಕಾಗಿದೆ. ಈ ಹಿನ್ನೆಲೆಯಲ್ಲೇ ನೀಟ್ ವಿನಾಯಿತಿ ಮಸೂದೆಯನ್ನು ಮಂಡಿಸಲಾಗಿದೆ. ಈ ಸಭೆಯಲ್ಲಿ ನೀಟ್ ಪರೀಕ್ಷೆಯಲ್ಲಿ ಇರುವಂತಹ ಅನೇಕ ಲೋಪದೋಷಗಳನ್ನು ಕುರಿತು ಪ್ರಸ್ತಾಪಿಸುವ ಅವಶ್ಯಕತೆ ಇಲ್ಲ ಎಂದೇ ಭಾವಿಸುತ್ತೇನೆ. ಒಟ್ಟಾರೆ ಹೇಳುವುದಾದರೆ, ನೀಟ್ ಪದ್ಧತಿ ಪವಿತ್ರವಾದುದೇನಲ್ಲ. ಕಡಿಮೆ ಆದಾಯ ಇರುವ ಕುಟುಂಬಗಳಿಂದ ಬರುವ ಮಕ್ಕಳಿಂದ ಪ್ರತಿಭೆಯ ನೆಪದಲ್ಲಿ ಅವಕಾಶವನ್ನು ಕಸಿದುಕೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿಯೇ ನಾವು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತಿದ್ದು ವಿನಾಯಿತಿ ಕೋರುತ್ತಿದ್ದೇವೆ. ಈ ಸಭೆಯಲ್ಲಿ ನಾನು ಪ್ರಸ್ತಾಪಿಸಲು ಬಯಸುವ ವಿಚಾರ ಎಂದರೆ, ಕೆಲವು ವಿದ್ಯಾರ್ಥಿಗಳ ಜೀವಕ್ಕೆ ಸಂಚಕಾರ ಉಂಟುಮಾಡಿದ, ಹಲವರನ್ನು ಜೈಲಿಗಟ್ಟಿದ ನೀಟ್ ಪರೀಕ್ಷಾ ಪದ್ಧತಿ ನಿಜವಾಗಿಯೂ ಅವಶ್ಯಕವೇ ? ಈ ಪ್ರಶ್ನೆಯನ್ನು ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಎತ್ತಿದ್ದಾರೆ.
ವಿವರಣಾತ್ಮಕ ಪರಿಷ್ಕರಣೆ
2021ರ ಜೂನ್ 19ರಂದು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ ಕೆ ರಾಜನ್ ನೇತೃತ್ವದ ಸಮಿತಿಯನ್ನು ರಚಿಸಿ, ನೀಟ್ ಪದ್ಧತಿಯಿಂದ ಬಡವರು ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಮೇಲೆ ಉಂಟಾಗಿರುವ ಪರಿಣಾಮವನ್ನು ಗುರುತಿಸಲು, ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ವಿಚಾರಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನೂ ಸಂಪರ್ಕಿಸಲಾಗಿತ್ತು. 2021ರ ಜುಲೈ 14ರಂದು ಈ ಸಮಿತಿಯು, ಜನಾಭಿಪ್ರಾಯಗಳನ್ನು ಆಧರಿಸಿದ, 193 ಪುಟಗಳ ಅಂತಿಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ಮಕ್ಕಳು ತಮ್ಮ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂಬ ಜನಾಭಿಪ್ರಾಯ ವ್ಯಕ್ತವಾಗಿತ್ತು. ಈ ವರದಿಯನ್ನಾಧರಿಸಿಯೇ ಸಮಗ್ರ ಶಿಫಾರಸುಗಳನ್ನು ಮಾಡುವ ಸಲುವಾಗಿ ನಾನು ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದೇನೆ. ಕೂಲಂಕುಷ ಪರಿಶೀಲನೆಯ ನಂತರ, ನೀಟ್ ಪದ್ಧತಿಯಿಂದ ವಿನಾಯಿತಿ ಪಡೆಯುವ ತಮಿಳುನಾಡಿನ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ. ನಾವು ಸಾಕಷ್ಟು ಅಧ್ಯಯನ ಮಾಡಿ, ಅಂಕಿ ಅಂಶಗಳ ಸಕ್ಷ್ಯಾಧಾರಗಳೊಂದಿಗೆ, ಈ ಮಸೂದೆಗೆ ಅನುಮೋದನೆ ನೀಡಿದ್ದೇವೆ.
ನೀಟ್ ವಿನಾಯಿತಿ ಮಸೂದೆಯನ್ನು ವಿಧಾನಸಭೆಯ ಬಿಜೆಪಿ ಶಾಸಕರನ್ನೊ ಹೊರತುಪಡಿಸಿ, ಇತರ ಎಲ್ಲ ಸದಸ್ಯರ ಅನುಮೋದನೆಯೊಂದಿಗೆ ಜಾರಿಗೊಳಿಸಲಾಗಿದ್ದು , ಈ ಮಸೂದೆಯು ತಮಿಳುನಾಡಿನ ಜನತೆಯ ಭಾವನೆಗಳನ್ನು ಪ್ರತಿನಿಧಿಸುವುದೇ ಅಲ್ಲದೆ ವಿಧಾನಸಭೆಯ ಸಾರ್ವಭೌಮತ್ವವನ್ನೂ ಎತ್ತಿಹಿಡಿಯುತ್ತದೆ. ಈ ಅಂಗೀಕೃತ ಮಸೂದೆಯನ್ನು ರಾಜ್ಯಪಾಲರು ಅನುಮೋದಿಸಬೇಕಿತ್ತು ಮತ್ತು ಅಂತಿಮ ಸ್ವೀಕೃತಿಗಾಗಿ ರಾಷ್ಟ್ರಪತಿ ಕಚೇರಿಗೆ ಕಳುಹಿಸಬೇಕಿತ್ತು. ಬದಲಾಗಿ, ರಾಜ್ಯಪಾಲರು ಈ ಮಸೂದೆಯನ್ನು 142 ದಿನಗಳ ಕಾಲ ಬಾಕಿ ಇರಿಸಿಕೊಂಡಿದ್ದು, ನಮ್ಮ ಹಲವಾರು ವಿನಂತಿಗಳ ಹೊರತಾಗಿಯೂ, ಅಂತಿಮವಾಗಿ ಇದನ್ನು ಹಿಂದಿರುಗಿಸಿದ್ದಾರೆ. ಮಸೂದೆಯನ್ನು ಹಿಂದಿರುಗಿಸಲು ರಾಜ್ಯಪಾಲರು ನೀಡಿರುವ ಕಾರಣಗಳು ಸರ್ವತಾ ಸಮರ್ಥನೀಯವಲ್ಲ ಎಂದು ಈ ವಿಧಾನಸಭೆಯಲ್ಲಿ ನಾನು ನಿಸ್ಸಂದೇಹವಾಗಿ ಹೇಳುತ್ತೇನೆ.
ನ್ಯಾಯಮೂರ್ತಿ ಎ ಕೆ ರಾಜನ್ ಸಮಿತಿಯನ್ನು 2021ರ ಜೂನ್ 10ರಂದು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶ ಸಂಖ್ಯೆ 283ರ ಅನ್ವಯ ರಚಿಸಲಾಯಿತು. ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಸಮಿತಿಯು ಪರಿಶೀಲಿಸಲಿರುವ ವಿಷಯಗಳನ್ನೂ ಸಾರ್ವಜನಿಕರಿಗೆ ತಿಳಿಸಲಾಗಿತ್ತು. ಸಮಿತಿಗೆ ತಮ್ಮ ಆಕ್ಷೇಪ, ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಸಾವಿರಾರು ಜನರು ಇ ಮೇಲ್ ಮೂಲಕ, ಪತ್ರಗಳ ಮೂಲಕ, ಅರ್ಜಿಯ ಪೆಟ್ಟಿಗೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ಸಮಿತಿಗೆ ಸಲ್ಲಿಸಿದ್ದರು. ಸಮಿತಿಯ ಶಿಫಾರಸ್ಸಿನ ಅನುಸಾರ, ನೀಟ್ ಪದ್ಧತಿಯು ಎಂಬಿಬಿಎಸ್ ವ್ಯಾಸಂಗದಲ್ಲಿ ಮತ್ತು ಉನ್ನತ ವೈದ್ಯಕೀಯ ವ್ಯಾಸಂಗದಲ್ಲಿ ಸಾಮುದಾಯಿಕ ಪ್ರಾತಿನಿಧ್ಯದ ವೈವಿಧ್ಯತೆಗೆ ಧಕ್ಕೆ ಉಂಟುಮಾಡಿದೆ. ತನ್ಮೂಲಕ ಅವಕಾಶವಂಚಿತ, ತುಳಿತಕ್ಕೊಳಗಾದ ಜನಸಮುದಾಯಗಳಿಗೆ ಈ ಉನ್ನತ ಶಿಕ್ಷಣ ಪಡೆಯುವ ಸಾಧ್ಯತೆಗಳನ್ನು ಕಡಿಮೆ ಮಾಡಿದ್ದು, ಸಾಮಾಜಿಕಾರ್ಥಿಕವಾಗಿ ಮೇಲ್ವರ್ಗಕ್ಕೆ ಸೇರಿದ, ಶ್ರೀಮಂತ ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತದೆ. ಈ ಕುರಿತ ಅಂಕಿಅಂಶಗಳನ್ನು ವರದಿಯಲ್ಲಿ ನೋಡಬಹುದು. ಸಮಿತಿ ನಡೆಸಿದ ಸಮೀಕ್ಷೆಯ ಪ್ರಕಾರ ವಾರ್ಷಿಕ ಆದಾಯ ಎರಡೂವರೆ ಲಕ್ಷ ರೂಗಳಿಗೂ ಕಡಿಮೆ ಇರುವ ಪೋಷಕರ ಮಕ್ಕಳು, ಹಿಂದುಳಿದ ವರ್ಗಗಳು, ಅತಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳು ಇದರಿಂದ ಹೆಚ್ಚು ಪ್ರಭಾವಕ್ಕೊಳಗಾಗುತ್ತಾರೆ.
ನೀಟ್ ಪದ್ಧತಿಯು ಪ್ರತಿಭೆ ವಿರೋಧಿ ಎಂದು ಅಧ್ಯಯನದಲ್ಲಿ ಹೇಳಿರುವುದನ್ನು ರಾಜ್ಯಪಾಲರು ಖಂಡಿಸಿದ್ದಾರೆ. ಇದನ್ನು ನಿರಾಕರಿಸುವ ನಿಟ್ಟಿನಲ್ಲಿ ರಾಜನ್ ಸಮಿತಿಯ ವರದಿಯಲ್ಲಿ ಸಾಕ್ಷ್ಯಾಧಾರಗಳ ಸಮೇತ ಮಾಹಿತಿಯನ್ನು ಒದಗಿಸಲಾಗಿದೆ. ಈವರೆಗೂ ಆಯ್ಕೆಯಾದವರ ಪೈಕಿ ಗ್ರಾಮೀಣ ಬಡ ಮಕ್ಕಳು ಹೆಚ್ಚು ಪ್ರಭಾವಿತರಾಗಿದ್ದಾರೆ. ಸಂಶೋಧನೆಯ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ತಮಿಳು ಮಾಧ್ಯಮದಲ್ಲಿ ಓದಿದ ಮಕ್ಕಳೂ ಸಹ ಪ್ರಭಾವಿತರಾಗಿದ್ದಾರೆ. ಈ ಸಂದರ್ಭದಲ್ಲಿ ನಾನು ಸ್ಪಷ್ಟವಾಗಿ ಹೇಳುವುದೆಂದರೆ, ತಮಿಳುನಾಡು ಸರ್ಕಾರ ನೀಡಿರುವ ಶೇ 7.5ರಷ್ಟು ಮೀಸಲಾತಿಯ ಫಲಾನುಭವಿಗಳನ್ನು ನೀಟ್ ಫಲಾನುಭವಿಗಳು ಎಂದು ಹೇಳಲಾಗುವುದಿಲ್ಲ.
ಕಾನೂನು ಜಾರಿಗೊಳಿಸುವ ಅಧಿಕಾರ
ಐವರು ಸದಸ್ಯರ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠವು ಮಾಡರ್ನ್ ಡೆಂಟಲ್ ಕಾಲೇಜ್ ವಿರುದ್ಧ ಮಧ್ಯಪ್ರದೇಶ ಸರ್ಕಾರ, ಈ ಮೊಕದ್ದಮೆಯಲ್ಲಿ ಸ್ಪಷ್ಟವಾದ ತೀರ್ಪು ನೀಡಿದೆ. ಉನ್ನತ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ತಮ್ಮದೇ ಆದ ಕಾನೂನು ರೂಪಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದೇ ಮೊಕದ್ದಮೆಯಲ್ಲಿ ಪ್ರತ್ಯೇಕ ತೀರ್ಪು ನೀಡಿದ್ದ ನ್ಯಾ ಭಾನುಮತಿ, ವಿದ್ಯಾರ್ಥಿಗಳ ಪ್ರವೇಶಾತಿಗೆ ಸಂಬಂಧಿಸಿದ ಕಾನೂನುಗಳ ನಿಯಂತ್ರಣವು ರಾಜ್ಯ ಸರ್ಕಾರದ ವ್ಯಾಪ್ತಿಯೊಳಗೇ ಬರುತ್ತದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದ ಶಾಸಕಾಂಗ ಅಧಿಕಾರವನ್ನು ಉಪಯೋಗಿಸಿಕೊಂಡೇ ನಾವು ನೀಟ್ ವಿರುದ್ಧ ಮಸೂದೆಯನ್ನು ಅಂಗೀಕರಿಸಿದ್ದೇವೆ. ನೀಟ್ ಪದ್ಧತಿಯನ್ನು ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ. ಸಂವಿಧಾನದ ಅನ್ವಯ, ಯಾವುದೇ ಕಾನೂನುಕಟ್ಟಳೆ ರೂಪಿಸಬಹುದು ಆದರೆ ಇದು ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶವಂಚಿತರಾದವರಿಗೆ ಮಾತ್ರವೇ ಅನ್ವಯಿಸುತ್ತದೆ.
ಈ ಆಧಾರದ ಮೇಲೆಯೇ ನಾವು ನೀಟ್ ವಿನಾಯಿತಿ ಮಸೂದೆಯನ್ನು ಪುನಃ ಮಂಡಿಸುತ್ತಿದ್ದೇವೆ. ಸಂವಿಧಾನವು ತಾರತಮ್ಯ ವಿರೋಧಿಯಾಗಿದೆ. ಆದರೆ ನೀಟ್ ಪದ್ಧತಿಯು ಮೂಲತಃ ತಾರತಮ್ಯ ಸಹಿತವಾಗಿದೆ. ಭಾರತದ ಸಾಂವಿಧಾನಿಕ ಕಾನೂನಿನಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಆದರೆ ನೀಟ್ ಪದ್ಧತಿಯು ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ. ಸಾಂವಿಧಾನಿಕ ಕಾನೂನಿನಲ್ಲಿ “ ಕಾನೂನಾತ್ಮಕ ನ್ಯಾಯ ” ಎಂಬ ಪದವನ್ನು ಬಳಸಲಾಗಿದೆ. ಆದರೆ ನೀಟ್ ಕಾಯ್ದೆ ಶ್ರೀಮಂತರ ಪರವಾಗಿದೆ. ಭಾರತದ ಸಂವಿಧಾನದ ಅಡಿಪಾಯವೇ ಸಮಾನತೆಯ ತತ್ವ ಆಗಿದೆ. ಆದರೆ ನೀಟ್ ಪದ್ದತಿ ಸಮಾನತೆಗೆ ವಿರುದ್ಧವಾದ ದಿಕ್ಕಿನಲ್ಲಿದೆ. ನೀಟ್ ಪದ್ಧತಿಯು ಎಲ್ಲ ರೀತಿಯ ಸಾಂವಿಧಾನಿಕ ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿದೆ. ಹಾಗಾಗಿಯೇ ನಾವು ನೀಟ್ ಪದ್ಧತಿಯಿಂದ ವಿನಾಯಿತಿ ಕೋರುತ್ತಿದ್ದೇವೆ. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಮೇಲೆ ತಾರತಮ್ಯಸಹಿತವಾದ ದುಷ್ಪರಿಣಾಮಗಳನ್ನು ಬೀರುವಂತಹ ಒಂದು ಕರಾಳ ಪರೀಕ್ಷಾ ಪದ್ಧತಿಯ ಬಗ್ಗೆ ಇಷ್ಟೊಂದು ವಾದ ವಿವಾದ ನಡೆಸುವುದು ಖೇದಕರ ಎನಿಸುತ್ತದೆ.
ಈ ಮಸೂದೆಯನ್ನು ಹಿಂದಿರುಗಿಸಿರುವುದರಿಂದ, ತಮಿಳುನಾಡು ರಾಜ್ಯದ ಸಾಂವಿಧಾನಿಕ ಹಕ್ಕನ್ನು ಪ್ರಶ್ನಿಸಿದಂತೆಯೂ ಆಗಿದೆ. ಇಲ್ಲಿ ಶಾಸಕಾಂಗದ ಸಾರ್ವಭೌಮತ್ವವು ಪ್ರಶ್ನೆಗೊಳಗಾಗಿದೆ. ರಾಜ್ಯಗಳ ಸ್ವಾಯತ್ತತೆ ಪ್ರಶ್ನೆಗೊಳಗಾಗಿದೆ. ಈ ಅಂಶಗಳು ನನ್ನನ್ನು ಕಾಡುತ್ತಿವೆ. ಹೀಗಾದರೆ ಸಾಂವಿಧಾನಿಕವಾಗಿ ಲಭ್ಯವಿರುವ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳು ಏನಾಗುತ್ತವೆ ? ವಿಭಿನ್ನ ಜನಾಂಗಗಳ, ಭಾಷೆಗಳ ಮತ್ತು ಸಂಸ್ಕøತಿಗಳ ಜನತೆಯ ಹಕ್ಕುಗಳು ಮತ್ತು ಜವಾಬ್ದಾರಿಗಳು ಏನು ?
ನಾವು , ನಮಗೆ ಲಭ್ಯವಿರುವ ಸಾಂವಿಧಾನಿಕ ಅಧಿಕಾರವನ್ನು ಬಳಸಿಕೊಂಡು, ವಿದ್ಯಾರ್ಥಿಗಳನ್ನು ನೀಟ್ ಪರೀಕ್ಷೆಯಿಂದ ಹೊರತುಪಡಿಸಲು, 2021ರ ಸೆಪ್ಟಂಬರ್ 13ರಂದು ಈ ಮಸೂದೆಯನ್ನು ಅಂಗೀಕರಿಸಿದ್ದೇವೆ. ಈ ಅಂಗೀಕೃತ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಉಳಿಸಿಕೊಳ್ಳಬೇಕಾದ್ದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ತಮ್ಮ ಈ ಕರ್ತವ್ಯವನ್ನು ನಿಭಾಯಿಸುತ್ತಾರೆ ಎಂದು ಭಾವಿಸುತ್ತೇನೆ. ಅದು ರಾಜ್ಯಪಾಲರ ಹೊಣೆಗಾರಿಕೆಯಾಗಿದ್ದು, ಇದು ಜನರಿಂದಲೇ ಆಯ್ಕೆಯಾದ ವಿಧಾನಸಭೆಯ ಶಾಸಕಾಂಗ ಅಧಿಕಾರಕ್ಕೆ ಒಳಪಟ್ಟಿರುತ್ತದೆ.
ರಾಜ್ಯಪಾಲರು ತಮಿಳುನಾಡು ಜನತೆಯ ಭಾವನೆಗಳನ್ನು ಗೌರವಿಸುತ್ತಾರೆ ಮತ್ತು ಸಂವಿಧಾನ ಶಾಸಕಾಂಗಕ್ಕೆ ನೀಡಿರುವ ಅಧಿಕಾರವನ್ನು ಬಳಸಿಕೊಂಡು ಮರು ಅನುಮೋದನೆಗೊಳಗಾಗುವ ನೀಟ್ ವಿನಾಯಿತಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸುವ ಮೂಲಕ ತಮಿಳುನಾಡಿನ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾರೆ ಎಂದು ನಾನು ನಂಬಿರುತ್ತೇನೆ. ಬಹಳ ವರ್ಷಗಳಿಂದ ನಿರಾಕರಿಸಲ್ಪಟ್ಟಿರುವ ಶಿಕ್ಷಣದ ಹಕ್ಕುಗಳನ್ನು ಉಳಿಸಿಕೊಳ್ಳುವ ಸಲುವಾಗಿ, ಹಾಗೆಯೇ ತಮಿಳುನಾಡಿನ ರಾಜ್ಯಾಧಿಕಾರದ ಹಕ್ಕುಗಳನ್ನು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಆದಿವಾಸಿಗಳು, ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳು, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು ಮತ್ತು ಗ್ರಾಮೀಣ ಜನತೆಯ ಸಾಮಾಜಿಕ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ, ಎಲ್ಲ ಸದಸ್ಯರೂ ಈ ಮಸೂದೆಗೆ ಬೆಂಬಲ ನೀಡಬೇಕೆಂದು ನಾನು ಆಶಿಸುತ್ತೇನೆ.
ಮೂಲ :ಎಂ.ಕೆ. ಸ್ಟಾಲಿನ್ – ದ ಹಿಂದೂ
ಅನುವಾದ : ನಾ ದಿವಾಕರ
ಕೃಪೆ- ಸಮಾಜಮುಖಿ