ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಇರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET 2021) ಇಂದು ದೇಶಾದ್ಯಂತ ನಡೆಯಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಮಧ್ಯೆ ಸಕಲ ಮುನ್ನೆಚ್ಚರಿಕೆ ಕ್ರಮದೊಂದಿಗೆ ನಡೆಯುತ್ತಿರುವ ಈ ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆಲ ಮಾರ್ಗಸೂಚಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆ ಕೇಂದ್ರದ ಸಿಬ್ಬಂದಿಗಳ ಹಿತದೃಷ್ಟಿಯಿಂದ ಕೆಲ ಹೊಸ ನಿಯಮಗಳನ್ನು ಪಾಲಿಸಬೇಕಾಗಿರುವುದು ಅವಶ್ಯವಾಗಿದೆ.
ದೇಶಾದ್ಯಂತ ನಡೆಸುವ ಈ ನೀಟ್ ಪರೀಕ್ಷೆ ಸಕಲ ಬಿಗಿ ಕ್ರಮದೊಂದಿಗೆ ನಡೆಸುತ್ತಿರುವುದು ಗೊತ್ತಿರುವ ಸಂಗತಿ. ಪರೀಕ್ಷಾ ಅಭ್ಯರ್ಥಿಗಳ ಡ್ರೆಸ್ ಕೋಡ್ನಿಂದ ಹಲವು ಕ್ರಮಗಳನ್ನು ಮಂಡಳಿ ನಡೆಸುತ್ತಿದೆ. ಅದರಂತೆ ಈ ಬಾರಿ ಕೂಡ ಹಲವು ನಿಯಮಗಳನ್ನು ಹೊಸದಾಗಿ ಸೇರ್ಪಡನೆ ಮಾಡಲಾಗಿದೆ. ಈ ಹಿನ್ನಲೆ ನಾಳೆ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಈ ಮಾರ್ಗಸೂಚಿ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.
ಫ್ರಿಸ್ಕಿಂಗ್ ಪ್ರಕ್ರಿಯೆಗೆ ಒಳಗಾಗಬೇಕು :
ಪರೀಕ್ಷಾ ಸ್ಥಳಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲು ಫ್ರಿಸ್ಕಿಂಗ್ ಪ್ರಕ್ರಿಯೆಗೆ ಒಳಗಾಗಬೇಕು. ಅಭ್ಯರ್ಥಿಗಳ ದೇಹದಲ್ಲಿ ಅಡಗಿರುವ ಲೋಹದ ವಸ್ತು, ಆಭರಣ, ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ನಂತಹ ವಸ್ತುವನ್ನು ಅಭ್ಯರ್ಥಿಯನ್ನು ಮಟ್ಟದೇ ಪತ್ತೆ ಹಚ್ಚುವ ಡೆಟೆಕ್ಟರ್ ವಿಧಾನ ಇದಾಗಿದೆ. ಈ ಫ್ರಿಸ್ಕಿಂಗ್ ವಿಧಾನದ ಹಿನ್ನಲೆ ಈಗಾಗಲೇ ವಿದ್ಯಾರ್ಥಿಗಳಿಗೆ ಕಿವಿಯ ಆಭರಣದಿಂದ ಹಿಡಿದು ಯಾವುದೇ ರೀತಿಯ ಲೋಹದ ವಸ್ತುವನ್ನು ದೇಹದಲ್ಲಿ ಇರದಂತೆ ನೋಡಿಕೊಳ್ಳಲು ಈಗಾಗಲೇ ತಿಳಿಸಲಾಗಿದೆ.

ಈ ವಸ್ತುಗಳಿಗೆ ಅನುಮತಿ ಇರಲಿದೆ :
ಕೋವಿಡ್ ಹಿನ್ನಲೆ ಈ ಬಾರಿ ಪರೀಕ್ಷಾ ಕೊಠಡಿ ಒಳಗೆ ಹ್ಯಾಡ್ ಸ್ಯಾನಿಟೈಜರ್ ಬಾಟಲ್ (ಅದು ಕೇವಲ 50 ಎಂ.ಎಲ್ ಅಷ್ಟು ಮಾತ್ರ)ಕ್ಕೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಪಾರದರ್ಶಕ ನೀರಿನ ಬಾಟಲ್, ಹಾಜರಾತಿ ಹಾಳೆಯಲ್ಲಿ ಅಂಟಿಸಲು ಅರ್ಜಿ ನಮೂನೆ, ತುಂಬಿದ ಆದರೆ ಸಹಿ ಮಾಡದ ಸ್ವಯಂ ಘೋಷಿತ ಪ್ರವೇಶ ಪತ್ರದ ಪ್ರಿಂಟ್ ಔಟ್ ನಮೂನೆ, ಮತ್ತು ಪೋಸ್ಟ್‌ಕಾರ್ಡ್ ಫೋಟೋ, ಫೋಟೋ ಐಡಿ, ಮತ್ತು ಪಿಡಬ್ಲ್ಯೂಡಿ ಪ್ರಮಾಣಪತ್ರ ಮತ್ತು ಲಿಖಿತ ಸಂಬಂಧಿತ ದಾಖಲೆಗಳುಗಳನ್ನು ಅವಕಾಶ ಹೊಂದಿದರೆ ಮಾತ್ರ ತೆಗೆದುಕೊಂಡು ಹೋಗಬಹುದು.
ವಸ್ತ್ರ ಸಂಹಿತೆ (Dress Code) :
ಈಗಾಗಲೇ ತಿಳಿಸಿರುವಂತೆ ನೀಟ್ 2021 ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು. ದಪ್ಪ ಅಡಿಭಾಗದಿಂದ ಪಾದರಕ್ಷೆ, ದೊಡ್ಡ ಗುಂಡಿಗಳನ್ನು ಹೊಂದಿರುವ ಉಡುಪುಗಳನ್ನು ಧರಿಸಲು ನಿಮಗೆ ಅನುಮತಿ ಇಲ್ಲ. ಹುಡುಗರು ಅರ್ಧ ತೋಳಿನ ಶರ್ಟ್, ಟೀ ಶರ್ಟ್ ಧರಿಸಬೇಕು. ಪರೀಕ್ಷೆಯ ದಿನದಂದು ಹಗುರವಾದ ಬಟ್ಟೆಗಳನ್ನು ಧರಿಸಬೇಕು. ಜಿಪ್ ಪಾಕೆಟ್ಸ್, ದೊಡ್ಡ ಗುಂಡಿಗಳು ಮತ್ತು ಹೆಚ್ಚಿನ ಕಸೂತಿ ಇರುವ ಬಟ್ಟೆಗಳನ್ನು ತೊಡಬಾರದು. ಸರಳ ಪ್ಯಾಂಟ್ ಧರಿಸಬಹುದು. ಹುಡುಗಿಯರು ಫುಲ್ ಸ್ಲೀವ್ಸ್ ಬಟ್ಟೆ, ವಿಸ್ತಾರವಾದ ಕಸೂತಿ, ಹೂವುಗಳು, ಬ್ರೂಚಸ್ ಅಥವಾ ದೊಡ್ಡ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಹಾಕಬಾರದು. ಹಿಲ್ಡ್ಸ್ ಪಾದರಕ್ಷೆ, ದೊಡ್ಡ ಪಾಕೆಟ್ ಹೊಂದಿರುವ ಜೀನ್ಸ್ ಧರಿಸಬಾರದು. ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ.

N95 ಮಾಸ್ಕ್ ಕಡ್ಡಾಯ :
ಪರೀಕ್ಷಾ ಸಭಾಂಗಣಕ್ಕೆ ಪ್ರವೇಶಿಸುವ ಮೊದಲು N95 ಮುಖವಾಡಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಹೊಸ ಮಾಸ್ಕ್ ಧರಿಸುವುದು ಉತ್ತಮ. ಪುಸ್ತಕದಲ್ಲಿ ಹೆಚ್ಚಿನ ಕೆಲಸಕ್ಕೆ ಖಾಲಿ ಸ್ಥಳಗಳನ್ನು ನೀಡಲಾಗುವುದು. ಈ ಹಿನ್ನಲೆ ವಿದ್ಯಾರ್ಥಿಗಳು ತಮ್ಮದೇ ಕಾಗದವನ್ನು ತರಲು ಅವಕಾಶವಿಲ್ಲ.
ಅಡ್ಮಿಟ್ ಕಾರ್ಡ್ :
ಪರೀಕ್ಷೆಯ ಕೊನೆಯಲ್ಲಿ ಅಡ್ಮಿಟ್ ಕಾರ್ಡ್ ಅನ್ನು ಪರೀಕ್ಷಾ ಕೊಠಡಿಯ ಉಸ್ತುವಾರಿ ಹೊಂದಿರುವ ಇನ್ವಿಜಿಲೇಟರ್ಗೆ ಹಸ್ತಾಂತರಿಸಲು ಮರೆಯಬಾರದು. ಒಂದು ವೇಳೆ ಮರೆತರೆ ನೀವು ಅನರ್ಹತೆ ಹೊಂದುತ್ತಿರ. ಪರೀಕ್ಷಾ ಸಭಾಂಗಣದಿಂದ ವ್ಯವಸ್ಥಾಪಕರ ಸೂಚನೆಯಂತೆ ಕ್ರಮಬದ್ಧವಾಗಿ ಹೊರ ಹೋಗಬೇಕು.










