ಉತ್ತರ ಪ್ರದೇಶ ಸರ್ಕಾರದ ನಿರ್ದೇಶನದ ನಂತರ, ಬುಧವಾರ ಸಂಜೆಯವರೆಗೆ ಧಾರ್ಮಿಕ ಸ್ಥಳಗಳಿಂದ ಸುಮಾರು 11,000 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಬುಧವಾರ ಸಂಜೆ 4 ಗಂಟೆಯವರೆಗೆ ಉತ್ತರಪ್ರದೇಶ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಂದ ಒಟ್ಟು 10,923 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಮತ್ತು ರಾಜ್ಯಾದ್ಯಂತ ಇನ್ನೂ 35,221 ಧ್ವನಿವರ್ಧಕಗಳನ್ನು ಶಬ್ದ ಮಿತಿ ಮಾನದಂಡಗಳ ಮೇಲೆ ಅನುಮತಿ ನೀಡಲಾಗಿದೆ ಎಂದು ಹೇಳಿದೆ.
ರಾಜ್ಯದ ಗೃಹ ಇಲಾಖೆಯು, ಆಗ್ರಾ, ಮೀರತ್, ಬರೇಲಿ, ಲಕ್ನೋ, ಕಾನ್ಪುರ, ಪ್ರಯಾಗ್‌ರಾಜ್, ಗೋರಖ್‌ಪುರ, ವಾರಣಾಸಿ, ಗೌತಮ್ ಬುದ್ಧ ನಗರ ಮತ್ತು ನಾಲ್ಕು ಕಮಿಷನರೇಟ್‌ಗಳು ಸೇರಿದಂತೆ ರಾಜ್ಯದ ಎಂಟು ವಲಯಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿದೆ ಎಂದು ಹೇಳಿದೆ.

ಬುಧವಾರ, ಗೃಹ ಇಲಾಖೆಯು ರಾಜ್ಯದಾದ್ಯಂತ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು ಮತ್ತು ಶಬ್ದ ಮಿತಿ ಮಾನದಂಡಗಳನ್ನು ಉಲ್ಲಂಘಿಸುವವರ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಪೊಲೀಸರಿಗೆ ಸೂಚಿಸಿದೆ. ರಾಜ್ಯದ ಧಾರ್ಮಿಕ ಸ್ಥಳಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಏಪ್ರಿಲ್ 24 ರಂದು ಆದೇಶ ಹೊರಡಿಸಲಾಗಿದ್ದು, ಈ ಬಗ್ಗೆ ಎಲ್ಲಾ ಜಿಲ್ಲೆಗಳಿಂದ ಏಪ್ರಿಲ್ 30 ರೊಳಗೆ ಅನುಪಾಲನಾ ವರದಿಯನ್ನು ಕೇಳಲಾಗಿದೆ.
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 21 ರಂದು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಜೋರಾಗಿ ಹಾಕಬಾರದು ಮತ್ತು ಧ್ವನಿಯನ್ನು ಆವರಣದೊಳಗೆ ಮಾತ್ರ ಸೀಮಿತಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಮೈಕ್‌ಗಳನ್ನು ಅಳವಡಿಸಬಾರದು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಯಾವುದೇ ಹೊಸ ಧ್ವನಿವರ್ಧಕಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದ್ದರು.
ಸುಪ್ರೀಂ ಕೋರ್ಟ್‌ನ ಜೂನ್ 2005 ರ ಆದೇಶವು ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕಗಳು ಮತ್ತು ಮ್ಯೂಸಿಕ್ ಸಿಸ್ಟಮ್ ಬಳಕೆಯನ್ನು ನಿಷೇಧಿಸಿದೆ (ಸಾರ್ವಜನಿಕ ತುರ್ತು ಸಂದರ್ಭಗಳನ್ನು ಹೊರತುಪಡಿಸಿ), ಅಂತಹ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳ ಆರೋಗ್ಯ ಮತ್ತು ಶಬ್ದ ಮಾಲಿನ್ಯದ ಬಗ್ಗೆ ಗಂಭೀರ ಪರಿಣಾಮಗಳನ್ನು ಉಲ್ಲೇಖಿಸಿ ಈ ಆದೇಶ ಹೊರಡಿಸಿತ್ತು .