
ಬೀದರ:ಆಗಸ್ಟ್. 15 ರ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ತಮ್ಮ-ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ದೇಶ ಪ್ರೇಮವನ್ನು ವ್ಯಕ್ತಪಡಿಸಬೇಕೆಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹೇಳಿದರು.ಅವರು ಬುಧವಾರ ಜಿಲ್ಲಾಡಳಿತ ಬೀದರ ವತಿಯಿಂದ ಬೀದರ ಕೋಟೆಯಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ಹಮ್ಮಿಕೊಳ್ಳಲಾಗಿದ್ದ ಹರ್ ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರು ಸೆಲ್ಪಿವಿತ್ ತಿರಂಗಾ ಪೋಟೊ ತೆಗೆದುಕೊಳ್ಳಬೇಕು. ತಮಗೆಲ್ಲರಿಗೂ 78ನೇ ಸ್ವಾತಂತ್ರ‍್ಯ ದಿನಾಚರಣೆಯ ಶುಬಾಷಯಗಳು. ತಿರಂಗಾ ಯಾತ್ರೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರಿಂದ ನಮ್ಮಲ್ಲಿ ದೇಶ ಪ್ರೇಮ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನುಂಟು ಮಾಡುತ್ತವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಹರ್ ಘರ್ ತಿರಂಗಾ, ಬೈಕ್ ರ‍್ಯಾಲಿ, ಓಟ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿಯಲ್ಲಿ ವಿವಿಧ ಶಾಲಾ-ಕಾಲೇಜುಗಳ ಹಲವಾರು ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವದರಿಂದ ತುಂಬಾ ಸಂತೋಷವಾಗುತ್ತಿದೆ ತಮಗೆಲ್ಲರಿಗೂ ಸ್ವಾತಂತ್ರ‍್ಯೋತ್ಸವ ದಿನಾಚರಣೆ ಶುಭಾಶಯಗಳು ಎಂದು ಹೇಳಿದರು.

ಹರ್ ಘರ್ ತಿರಂಗಾ ಯಾತ್ರೆ ಬೀದರ ಕೋಟೆಯಿಂದ ಮಹ್ಮದ್ ಗವಾನ್ ಚೌಕ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತಗಳ ಮಾರ್ಗವಾಗಿ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ನಡೆಯಿತು. ಇದರಲ್ಲಿ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಗುಂಪಾದ ಸಿದ್ದಾರೂಢ ಮಠದಿಂದ ಜಿಲ್ಲಾ ನೆಹರು ಕ್ರೀಡಾಂಗಣದವರೆಗೆ ಬೈಕ್ ರ‍್ಯಾಲಿ, ಬರೀದ್ ಶಾಹಿ ಉದ್ಯಾನ ವನದಿಂದ ನೆಹರು ಕ್ರೀಡಾಂಗಣದವರೆಗೆ ತಿರಂಗಾ ಓಟ, ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಸೆಲ್ಪಿಪಾಯಿಂಟ್ ಹಾಗೂ ತಿರಂಗಾ ಮೇಳ ಮತ್ತು ನೆಹರು ಕ್ರೀಡಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಪುಸ್ತಕ ಮಳಿಗೆ, ಸಂಜೀವಿನಿ ಜೀವನೋಪಾಯ ಯೋಜನೆ ಅಡಿ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರು ತಯ್ಯಾರಿಸಿದ ವಿವಿಧ ಕರಕುಶಲ ವಸ್ತುಗಳ ಮಳಿಗೆ, ಅಣದೂರು ಹಾಗೂ ಕಮಠಾಮ ಮಹಿಳಾ ಸ್ವ- ಸಹಾಯ ಸಂಘದ ಸದಸ್ಯರು ತಯ್ಯಾರಿಸಿದ ಬೆಲ್ಲದ ಚಕ್ಕಿ, ಖಾರ ಹಾಗೂ ಸಮೋಸಾ ಮಳಿಗೆಗಳನ್ನು ಹಾಕಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ. ಬೀದರ ನಗರಸಭೆ ಅಧ್ಯಕ್ಷರಾದ ಮೋಹ್ಮದ್ ಗೌಸ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಹೇಶ್ ಮೆಘಣ್ಣವರ, ವಿರೂಪಾಕ್ಷ ಗಾದಗಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.




