ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಐದನೇ ಆವೃತ್ತಿಯು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಲಕ್ಷಣಗಳನ್ನು ದೃಢಪಡಿಸಿದೆ. ಆದರೆ, ಅಪೌಷ್ಟಿಕತೆ ,ಮತ್ತು ರಕ್ತಹೀನತೆ ಸಮಸ್ಯೆಗಳು ಹಾಗೇ ಉಳಿದಿವೆ. ಇದು ಕಳವಳದ ವಿಷಯ.
1992 ರಲ್ಲಿ NFHS ಪ್ರಾರಂಭವಾದ ನಂತರ ಮೊದಲ ಬಾರಿಗೆ, ಮಹಿಳೆಯರ ಪ್ರಮಾಣವು ಪುರುಷರನ್ನು ಮೀರಿದೆ: 1,000 ಪುರುಷರಿಗೆ 1,020 ಮಹಿಳೆಯರು ಇದ್ದಾರೆ ಎಂದು ಸಮೀಕ್ಷೆ ಹೇಳಿದೆ. 2015-16ರ ಸಮೀಕ್ಷೆಯ ಕೊನೆಯ ಆವೃತ್ತಿಯಲ್ಲಿ, ಪ್ರತಿ 1,000 ಪುರುಷರಿಗೆ 991 ಮಹಿಳೆಯರಿದ್ದರು.
ಕೇವಲ ದಶಮಾನದ ಜನಗಣತಿಯನ್ನು (ಸೆನ್ಸಸ್) ಭಾರತದಲ್ಲಿ ಜನಸಂಖ್ಯೆಯ ಪ್ರವೃತ್ತಿಗಳ ಅಧಿಕೃತ ದಾಖಲೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ವ್ಯಾಪಕವಾದ ಕಣ್ಗಾವಲು ಕಾರ್ಯಕ್ರಮವನ್ನು ಹೊಂದಿದೆ. NFHS ಸಮೀಕ್ಷೆಗಳು ಸಣ್ಣ ಪ್ರಮಾಣದಲ್ಲಿರುತ್ತವೆ, ಆದರೆ ಜಿಲ್ಲಾ ಮಟ್ಟದಲ್ಲಿ ನಡೆಸಲ್ಪಡುತ್ತವೆ ಮತ್ತು ಭವಿಷ್ಯಕ್ಕೆ ಸೂಚಕವಾಗಿವೆ.
ಕಳೆದ ಐದು ವರ್ಷಗಳಲ್ಲಿ ಜನಿಸಿದ ಮಕ್ಕಳ ಜನನದ ಸಮಯದಲ್ಲಿ ಲಿಂಗ ಅನುಪಾತವು 2015-16 ರಲ್ಲಿ 1,000 ಗಂಡು ಶಿಶುಗಳಿಗೆ 919 ಹೆಣ್ಣು ಶಿಶುಗಳಿದ್ದರೆ., ಈಗದು 1,000 ಗಂಡುಶಿಶುಗಳಿಗೆ 929 ಹೆಣ್ಣು ಶಿಶುಗಳಿಗೆ ಸಣ್ಣ ಏರಿಕೆ ಕಂಡಿದೆ. ಹೆರಿಗೆಗಾಗಿ ಆಸ್ಪತ್ರೆಗಳನ್ನು ಅವಲಂಬಿಸಿದವರ ಪ್ರಮಾಣವೂ ಹೆಚ್ಚಿದೆ. ಗಂಡು ಶಿಶುಗಳು ಸರಾಸರಿಯಾಗಿ, ಹೆಣ್ಣು ಶಿಶುಗಳಿಗಿಂತ ಉತ್ತಮ ಬದುಕುಳಿಯುವ ಸಾಧ್ಯತೆಗಳನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ಒತ್ತಿ ಹೇಳುತ್ತದೆ.
ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UTs) ಪುರುಷರಿಗಿಂತ ಹೆಚ್ಚಿನ ಮಹಿಳೆಯರನ್ನು ಹೊಂದಿವೆ ಎಂದು NFHS-5 ತೋರಿಸುತ್ತದೆ. ಪುರುಷರಿಗಿಂತ ಕಡಿಮೆ ಮಹಿಳೆಯರನ್ನು ಹೊಂದಿರುವ ರಾಜ್ಯಗಳಲ್ಲಿ ಗುಜರಾತ್, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಪಂಜಾಬ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಚಂಡೀಗಢ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ಲಡಾಖ್ ಸೇರಿವೆ.
ಇಷ್ಟಾದರೂ, ಈ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಹಿಳೆಯರ ಜನಸಂಖ್ಯೆಯ ಹೆಚ್ಚಳದಲ್ಲಿ ಸುಧಾರಣೆಗಳನ್ನು ತೋರಿಸಿವೆ.
NFHS ಡೇಟಾದ ರಾಜ್ಯವಾರು ವಿಘಟನೆಯು ಭಾರತವು ತನ್ನ ಜನಸಂಖ್ಯೆಯನ್ನು ಸ್ಥಿರಗೊಳಿಸುವ ಹಾದಿಯಲ್ಲಿದೆ ಎಂದು ತೋರಿಸುತ್ತದೆ, ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ಫಲವತ್ತತೆ ದರವನ್ನು (TFR) ಎರಡಕ್ಕಿಂತ ಕಡಿಮೆ ಹೊಂದಿವೆ. ಟಿಎಫ್‌ಆರ್ ಕಡಿಮೆ ಇದ್ದಷ್ಟು ಅದು ಸುಧಾರಣೆ ಎಂದರ್ಥ. 2.1 ಕ್ಕಿಂತ ಕಡಿಮೆ ಇರುವ TFR, ಅಂದರೆ, ಸರಾಸರಿ ಜೀವಿತಾವಧಿಯಲ್ಲಿ ಎರಡು ಮಕ್ಕಳನ್ನು ಮಹಿಳೆ ಹೆರುತ್ತಾಳೆ. ಇದು ಅಸ್ತಿತ್ವದಲ್ಲಿರುವ ಜನರ ಪೀಳಿಗೆ ನಿಖರವಾಗಿ ಬದಲಾಗುತ್ತಿದೆ ಎಂದು ಸೂಚಿಸುತ್ತದೆ. ಎರಡಕ್ಕಿಂತ ಕಡಿಮೆಯಿರುವುದು ಕಾಲಾನಂತರದಲ್ಲಿ ಜನಸಂಖ್ಯೆಯಲ್ಲಿ ಅಂತಿಮವಾಗಿ ಕುಸಿತವನ್ನು ಸೂಚಿಸುತ್ತದೆ. ಕೇವಲ ಐದು ರಾಜ್ಯಗಳು: ಬಿಹಾರ, ಮೇಘಾಲಯ, ಮಣಿಪುರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಎರಡಕ್ಕಿಂತ ಹೆಚ್ಚಿನ TFR ಅನ್ನು ಹೊಂದಿವೆ. ಬಿಹಾರವು ಮೂರು TFR ಅನ್ನು ಹೊಂದಿದೆ, NFHS-4 ಸಮೀಕ್ಷೆಯಲ್ಲಿ ಅದು 3.4 ಟಿಎಫ್‌ಆರ್ ಆಗಿತ್ತು. ಒಟ್ಟು ಸಮೀಕ್ಷೆ ಗಮನಿಸಿದಾಗ ಮತ್ತೊಮ್ಮೆ, ಸ್ತ್ರೀ ಸಬಲೀಕರಣದ ಕಡೆಗೆ ವಿಶಾಲವಾದ ಪ್ರವೃತ್ತಿ ಕಂಡು ಬಂದಿದ್ದು, ಎಲ್ಲಾ ರಾಜ್ಯಗಳಲ್ಲಿ TFR ಕಳೆದ ಐದು ವರ್ಷಗಳಲ್ಲಿ ಸುಧಾರಿಸಿದೆ.
2040-2050 ರ ಅವಧಿಯಲ್ಲಿ ಭಾರತದ ಜನಸಂಖ್ಯೆಯು ಸುಮಾರು 1.6 ರಿಂದ 1.8 ಶತಕೋಟಿಯಷ್ಟು ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆಯ ವಿಭಾಗದ ಪ್ರಕ್ಷೇಪಣ ಮಾಹಿತಿ ಹೇಳುತ್ತದೆ.
2031 ರ ಸುಮಾರಿಗೆ ಭಾರತವು ಚೀನಾವನ್ನು ಹಿಂದಿಕ್ಕಿ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಕಳೆದ ವರ್ಷ ಸರ್ಕಾರದ ವರದಿಯು ಅಂದಾಜು ಮಾಡಿದೆ. 2022 ರಲ್ಲೇ ಭಾರತ ಅತಿ ಹೆಚ್ಚಿನ ಜನಸಂಖ್ಯೆಯ ದೇಶವಾಗಲಿದೆ ಎಂಬ ವಿಶ್ವಸಂಸ್ಥೆಯ ಪ್ರಕ್ಷೇಪಣೆ ಹೇಳಿತ್ತು. ಆದರೆ ಅದಕ್ಕೂ ಸುಮಾರು ಒಂದು ದಶಕದ ನಂತರ ಅತಿ ಹೆಚ್ಚು ಸಂಖ್ಯೆಯ ದೇಶವಾಗಬಹುದು ಎಂಬುದು ಗಮನಾರ್ಹ.
ಅಪವಾದವೆಂದರೆ ಕೇರಳ, 1000 ಪುರುಷರಿಗೆ 1,121 ಮಹಿಳೆಯರನ್ನು ಹೊಂದುವ ಮೂಲಕ ಉತ್ತಮ ಸುಧಾರಣೆ ಕಂಡಿದೆ. NFHS-4 ನಲ್ಲಿ 1000 ಪುರುಷರಿಗೆ 1,049 ಮಹಿಳೆಯರ ಪ್ರಮಾಣವಿತ್ತು, ಅದು ಈಗ 1,121ಕ್ಕೆ ಏರಿಕೆಯಾಗಿ ಸುಧಾರಣೆ ದಾಖಲಾಗಿದೆ. ಆದರೂ, ಕೇರಳದಲ್ಲಿ TFR 1.6 ರಿಂದ 1.8 ಕ್ಕೆ ಏರಿದೆ. ಕಳೆದ ಐದು ವರ್ಷಗಳಲ್ಲಿ ಜನಿಸಿದ ಮಕ್ಕಳ ಲಿಂಗ ಅನುಪಾತದಲ್ಲಿ ರಾಜ್ಯವು ಕುಸಿತವನ್ನು ವರದಿ ಮಾಡಿದೆ. 2015-16ರಲ್ಲಿ 1,000 ಗಂಡು ಶಿಶುಗಳಿಗೆ 1,047 ಹೆಣ್ಣು ಶಿಶುಗಳಿದ್ದರೆ, ಈಗ ಅದು 1,000 ಬಾಲಕರಿಗೆ 951 ಬಾಲಕಿಯರ ಪ್ರಮಾಣಕ್ಕೆ ಇಳಿದಿದೆ.
ಹಂತ-I ರಲ್ಲಿ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ NFHS-5 ತಯಾರಿಸಿದ ಸಂಶೋಧನೆಗಳನ್ನು ಡಿಸೆಂಬರ್ 2020 ರಲ್ಲಿ ಬಿಡುಗಡೆ ಮಾಡಲಾಗಿದೆ. ಅರುಣಾಚಲ ಪ್ರದೇಶ, ಚಂಡೀಗಢ, ಛತ್ತೀಸ್‌ಗಢ, ಹರಿಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿಯ NCT, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ , ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಸಮೀಕ್ಷಾ ವಿವರಗಳನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. NFHS-5 ಸಮೀಕ್ಷೆ ಕಾರ್ಯವನ್ನು ದೇಶದ 707 ಜಿಲ್ಲೆಗಳಿಂದ (ಮಾರ್ಚ್, 2017 ರಂತೆ) ಸುಮಾರು 6.1 ಲಕ್ಷ ಮಾದರಿ ಕುಟುಂಬಗಳಲ್ಲಿ ನಡೆಸಲಾಗಿದೆ.. ಒಟ್ಟಿನಲ್ಲಿ ಬಹುತೇಕ ರಾಜ್ಯಗಳಲ್ಲಿ ಲಿಂಗಾನುಪಾತ ಮತ್ತು ಒಟ್ಟು ಫಲವತ್ತತೆ ದರ (ಟಿಎಫ್‌ಆರ್)ದಲ್ಲಿ ಸುಧಾರಣೆಯಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.