ಹಿನ್ನಲೆ
ಕಸ್ತೂರಿ ರಂಗನ್ ನೇತೃತ್ವದ ಸಮಿತಿಯು 2018ರ ಡಿಸೆಂಬರ್‌ನಲ್ಲಿ ತನ್ನ 486 ಪುಟಗಳ ‘ಎನ್‌ಇಪಿ:2019’ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ರೊ. ವಸುದ ಕಾಮತ್, ಪ್ರೊ. ಮಂಜುಲ್ ಭಾರ್ಗವ, ಡಾ. ರಾಮ್ ಶಂಕರ್ ಕುರೀಲ್, ಪ್ರೊ. ಓ.ವಿ.ಕಟ್ಟೀಮನಿ, ಕ್ರಿಶ್ಣಮೋಹನ್ ತ್ರಿಪಾಠಿ, ಪ್ರೊ. ಮಾಜರ್ ಆಸೀಫ್, ಪ್ರೊ.ಎಂ.ಕೆ.ಶ್ರೀಧರ್, ರಾಜೇಂದ್ರ ಪ್ರತಾಪ್ ಗುಪ್ತ ಈ ಸಮಿತಿಯ ಸದಸ್ಯರು. ಇವರಲ್ಲಿ ಎಂ.ಕೆ.ಶ್ರೀಧರ್ ಅವರು ಆರೆಸ್ಸಸ್‌ನ ಸಂಘಚಾಲಕರಾಗಿದ್ದವರು ಮತ್ತು ಎಬಿವಿಪಿಯ ಉಪಾದ್ಯಕ್ಷರಾಗಿದ್ದವರು. ರಾಜೇಂದ್ರ ಪ್ರತಾಪ್ ಗುಪ್ತ ಅವರು 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿನ ಬಿಜೆಪಿ ಪಕ್ಷದ ಪ್ರಣಾಳಿಕೆಯನ್ನ ರೂಪಿಸಿದವರಲ್ಲಿ ಪ್ರಮುಖರು. 2018ರಲ್ಲಿ ಆಗಿನ ಕೇಂದ್ರ ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ಅವರು ತಮ್ಮ ಸಲಹೆಗಾರರಾಗಿದ್ದ ಈ ರಾಜೇಂದ್ರ ಪ್ರತಾಪ್ ಗುಪ್ತ ಅವರನ್ನ ಭ್ರಷ್ಟಾಚಾರದ ಆಧಾರದ ಮೇಲೆ ಸೇವೆಯಿಂದ ವಜಾಗೊಳಿಸಿದ್ದರು. ಮತ್ತೊಂದೆಡೆ ಕೊಠಾರಿ ಆಯೋಗದಲ್ಲಿ 21 ಸದಸ್ಯರಲ್ಲಿ ಶಿಕ್ಷಣ ತಜ್ಞರಿದ್ದರು, ಸಂವಿಧಾನ ತಜ್ಞರಿದ್ದರು, ಉಪಕುಲಪತಿಗಳಿದ್ದರು, ವಿದೇಶಿ ಶಿಕ್ಷಣ ತಜ್ಞರಿದ್ದರು. ಆದರೆ ಕಸ್ತೂರಿ ರಂಗನ್ ಸಮಿತಿಯಲ್ಲಿನ 7 ಸದಸ್ಯರ ಪೈಕಿ ಕೆಲ ಸದಸ್ಯರ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ.
ಮೇ 31, 2019ರಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿ ತಯಾರಾದ “ರಾಷ್ಟ್ರೀಯ ಶಿಕ್ಷಣ ನೀತಿ 2019”ಯನ್ನ ಮೋದಿ ಸರಕಾರ ಸಾರ್ವಜನಿಕವಾಗಿ ಪ್ರಕಟಿಸಿತು. ಜೂನ್ 30ರ ಒಳಗೆ ಪ್ರತಿಕ್ರಿಯೆ, ಅಭಿಪ್ರಾಯಗಳನ್ನ ಸಲ್ಲಿಸಬೇಕೆಂದು ತಿಳಿಸಿದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ನಂತರ ಈ ಗಡುವನ್ನು ಆಗಸ್ಟ್ 31, 2019ಕ್ಕೆ ವಿಸ್ತರಿಸಿತು. ನಂತರ ಕೆಲ ತಿಂಗಳ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ 55 ಪುಟಗಳ ಪರಿಶ್ಕರಿಸಿದ ‘ಎನ್‌ಇಪಿ 2020’ಗೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಅದರ ಮುಖ್ಯಾಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದೆ ಮತ್ತು ಕರಡು ಪ್ರತಿಯನ್ನು ತನ್ನ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ.
ಆದರೆ ಇದಕ್ಕೆ ಪೂರ್ವಭಾವಿಯಾಗಿ ಆರ್ ಎಸ್ ಎಸ್ ನ ಅಂಗಸಂಸ್ಥೆಗಳಾದ ‘ಭಾರತೀಯ ಶಿಕ್ಷಣ ಮಂಡಲ್ (ಬಿಎಸ್‌ಎಂ) ಮತ್ತು ‘ಶಿಕ್ಷ ಸಂಸ್ಕೃತಿ ಉತ್ಥಾನ ನ್ಯಾಸ್ (ಎಸ್‌ಎಸ್‌ಯುಎನ್) ಮತ್ತು ಭಾರತೀಯ ಭಾಷಾ ಮಂಚ್ ಜಂಟಿಯಾಗಿ ರಾಷ್ಟ್ರಾದ್ಯಾಂತ 40 ಸೆಮಿನಾರ್‌ಗಳನ್ನು ಏರ್ಪಡಿಸಿದ್ದವು, 6000 ಶೈಕ್ಷಣಿಕ ವಲಯದವರು ಮತ್ತು ಸಂಸ್ಥೆಗಳ ಮಾಲಿಕರೊಂದಿಗೆ ಸಮಾಲೋಚನೆ ನಡೆಸಿದ್ದವು ಮತ್ತು ಆ ಮೂಲಕ ಎಲ್ಲರ ಅಭಿಪ್ರಾಯಗಳನ್ನು ಪಡೆದುಕೊಂಡವು. ಈಗಿನ ಮಾನವ ಸಂಪನ್ಮೂಲ ಇಲಾಖೆಯ ಮಂತ್ರಿ ರಮೇಶ್ ಪೋಕ್ರಿಯಾಲ್ ಮತ್ತು ಹಿಂದಿನ ಮಂತ್ರಿ ಪ್ರಕಾಶ್ ಜಾವಡೇಕರ್ ಅವರು ಆರ್ ಎಸ್ ಎಸ್ ಪದಾಧಿಕಾರಿಗಳೊಂದಿಗೆ ಮತ್ತು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ರಾಜ್ಯಗಳ ಶಿಕ್ಷಣ ಮಂತ್ರಿಗಳೊಂದಿಗೆ ಸತತವಾಗಿ ಸಮಾಲೋಚನೆ ನಡೆಸಿದ್ದರು. ಸಂಫ ಪರಿವಾರದ ಅಂಗಸಂಸ್ಥೆಗಳು ತಮ್ಮ ಅಭಿಪ್ರಾಯವನ್ನು ಸುಬ್ರಮಣ್ಯ ಸಮಿತಿ ಮತ್ತು ನಂತರದ ಕಸ್ತೂರಿರಂಗನ್ ಸಮಿತಿಗೆ ಸಲ್ಲಿಸಿದ್ದವು. ‘ಎಸ್‌ಎಸ್‌ಯುಎನ್’ನ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಕೊಠಾರಿ ‘ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಯಾವುದೇ ಶಿಕ್ಷಣ ನೀತಿಯು ಪೂರ್ಣಗೊಳ್ಳುವುದಿಲ್ಲ, ಭಾರತದ ಮೌಲ್ಯಗಳು, ಭಾಷೆ, ಕಲೆ ಸಂಸ್ಕೃತಿ ಮುಂತಾದವು ‘ಎನ್‌ಇಪಿ 2020’ ಮುಖ್ಯಭಾಗಗಳಾಗಿರುತ್ತವೆ… ನಾವು ಈ ಸಮಿತಿಗೆ ದೀರ್ಘವಾದ ಸಲಹೆಗಳನ್ನು ನೀಡಿದ್ದೆವು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲಾಗಿದೆ, ಮುಂದೆಯೂ ಸೂಕ್ತ ಬದಲಾವಣೆಗಳನ್ನು ಸೂಚಿಸುತ್ತೇವೆ…’ ಎಂದು ಹೇಳಿದ್ದಾರೆ. (ಇಂಡಿಯಾ ಟುಡೇ ಅಂತರ್ಜಾಲ ಪತ್ರಿಕೆಯ 31, ಜುಲೈ, 2020)
ಮೇಲಿನ ವರದಿಯು ಇಡೀ ಶಿಕ್ಷಣ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಆರ್ ಎಸ್ ಎಸ್‌ನ ಹಸ್ತಕ್ಷೇಪವನ್ನು ಅನಾವರಣಗೊಳಿಸುತ್ತದೆ. ಆದರೆ ಶಿಕ್ಷಣ ತಜ್ಞರು, ಲೇಖಕರು, ವಿದ್ಯಾರ್ಥಿ ಸಂಘಟನೆಗಳು, ಲಕ್ಷಾಂತರ ಜನಸಂಖ್ಯೆಯ ಪ್ರಜ್ಞಾವಂತ ಪ್ರಜೆಗಳು ಈ ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳಿಗೆ ಪ್ರತಿಯಾಗಿ ತಮ್ಮ ಅಭಿಪ್ರಾಯಗಳನ್ನು, ಅನೇಕ ತಿದ್ದುಪಡಿಗಳನ್ನು ಸೂಚಿಸಿದ್ದರು. ಆದರೆ ‘ಎನ್‌ಇಪಿ 2020’ ಇವರೆಲ್ಲರ ಅಭಿಪ್ರಾಯ, ಸಲಹೆಗಳನ್ನು ತಿರಸ್ಕರಿಸಿ ಆರ್ ಎಸ್ ಎಸ್‌ನ ಆದೇಶಗಳನ್ನು ಪಾಲಿಸಿರುವುದೂ ಸಹ ಸ್ಪಷ್ಟವಾಗುತ್ತದೆ. ಈ ಪ್ರಕರಣವು ಇಡೀ ಶಿಕ್ಷಣ ನೀತಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುತ್ತದೆ.
ಹಿಂದಿನ ಶಿಕ್ಷಣ ಆಯೋಗಗಳು, ಶಿಕ್ಷಣ ನೀತಿಗಳು
1881 – ಹಂಟರ್ ಆಯೋಗ;
1944 – ಸಾರ್ಜಂಟ್ ಆಯೋಗ; ( ಸ್ವಾತಂತ್ರ್ಯಪೂರ್ವ)
1948-49 – ರಾಧಾಕೃಷ್ಣ ಆಯೋಗ (ಉನ್ನತ ಶಿಕ್ಷಣ);
1952-53 – ಮೊದಲಿಯಾರ್ ಆಯೋಗ (ಪ್ರೌಡ ಶಿಕ್ಷಣ);
1964-66 – ಕೊಠಾರಿ ಆಯೋಗ;
1968 – ಮೊದಲ ರಾಷ್ಟ್ರೀಯ ಶಿಕ್ಷಣ ನೀತಿ – ಎನ್‌ಪಿಇ68
1986 / 1992 – ಎರಡನೆ ರಾಷ್ಟ್ರೀಯ ಶಿಕ್ಷಣ ನೀತಿ – ಎನ್‌ಪಿಇ86
ಇನ್ನು ಇದರ ಪ್ರಸ್ತಾವನೆಯ ಕಡೆ ಗಮನ ಹರಿಸೋಣ
- ಮೊದಲನೆಯದಾಗಿ ‘ಎನ್‌ಇಪಿ 2020’ ಶಿಕ್ಷಣ ನೀತಿಯು ಸಂವಿಧಾನ ಅನುಚ್ಚೇದಗಳನ್ನು ಬಹಿರಂಗವಾಗಿಯೆ ಕಡೆಗಣಿಸಿದೆ. ಈ ವರದಿಯಲ್ಲಿ ಸಮಾಜವಾದ, ಜಾತ್ಯಾತೀತ, ಬಂಧುತ್ವ ಮತ್ತು ಸಮಾನತೆಯ ಪ್ರಸ್ತಾಪವಿಲ್ಲ. 14ನೆ ವಯಸ್ಸಿನವರೆಗೂ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣವನ್ನು ಪ್ರತಿಪಾದಿಸುವ ಸಂವಿಧಾನ ಅನುಚ್ಚೇದ 21ಎ, 45ರ ಕುರಿತು ಪ್ರಸ್ತಾಪವಿಲ್ಲ. ಇದು ಈ ನೀತಿಯ ವಿಶ್ವಾಸಾರ್ಹತೆಗೆ ಕುಂದುಂಟು ಮಾಡುತ್ತದೆ.
- ಎರಡನೆಯದಾಗಿ ಈ ಶಿಕ್ಷಣ ನೀತಿಯು ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಕುರಿತಾಗಿ ನಡೆಯುತ್ತಿರುವ ಬದಲಾವಣೆಗಳು, ಪ್ರಯೋಗಗಳು ಮತ್ತು ಸಾಧನೆಗಳನ್ನು ಅಧ್ಯಯನ ಮಾಡಿಲ್ಲ. ಹಿಂದಿನ ಶಿಕ್ಷಣ ನೀತಿಗಳನ್ನು ತೌಲನಿಕವಾಗಿ ವಿಶ್ಲೇಷಣೆ ಮಾಡಿಲ್ಲ. ತಾನು ಯಾವ ಆಧಾರದ ಮೇಲೆ ಶಿಫಾರಸ್ಸುಗಳನ್ನು ಮಾಡುತ್ತಿದ್ದೇನೆ ಎಂಬುದಕ್ಕೆ ಯಾವುದೆ ರೆಫೆರೆನ್ಸ್ಗಳಿಲ್ಲ.
- ಮೂರನೆಯದಾಗಿ ನೆರೆಹೊರೆ ಶಾಲಾ ವ್ಯವಸ್ಥೆಯ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲ. ಸಮಾನ ಶಿಕ್ಷಣ ಪದ್ದತಿ ಕುರಿತು ಮಾತನಾಡುವುದಿಲ್ಲ. ಈ ವ್ಯವಸ್ಥೆಯನ್ನು ಜಾರಿಗೊಳಿಸದೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಸಬಲೀಕರಣಗೊಳ್ಳುವುದಿಲ್ಲ. ಪ್ರಜಾಪ್ರಭುತ್ವದ ಆಧಾರಸ್ತಂಬವೇ ಕುಸಿದು ಬೀಳುತ್ತದೆ.
- ಇನ್ನು ಮೇಲ್ನೋಟಕ್ಕೆ ಕಾಣುವಂತೆ ಇಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಪೆಡಗಾಜಿ, ಬಹುಸಂಸ್ಕೃತಿ, ಎಲ್ಲರಿಗೂ ಶಿಕ್ಷಣ, ಮಕ್ಕಳ ಆಯ್ಕೆ ಮುಂತಾದ ಪದಪುಂಜಗಳು ಹೇರಳವಾಗಿವೆ. ಇದರ ಬಹುತೇಕ ಆಶಯಗಳು ನಿಜಕ್ಕೂ ಸ್ವಾಗತಾರ್ಹ. ಇದನ್ನು ಮಾತ್ರ ಅನುಸರಿಸಿದರೆ ಈ ಕರಡುಪ್ರತಿಯಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಇದನ್ನು ಸಮಾಜಿಕ-ರಾಜಕೀಯ-ಶೈಕ್ಷಣಿಕ ಹಿನ್ನಲೆಯಲ್ಲಿ ಅರ್ಥೈಸಿದರೆ, ಆಳವಾಗಿರುವ ಸಿಕ್ಕುಗಳನ್ನು ಬಿಡಿಸಿದರೆ ಇದರೊಳಗಿನ ಮಿತಿಗಳು, ಪ್ರತಿಗಾಮಿ ಉದ್ದೇಶಗಳು ಗೋಚರಿಸುತ್ತವೆ. ಮುಖ್ಯವಾಗಿ ಇದು ಖಾಸಗೀಕರಣಕ್ಕೆ, ಕೇಂದ್ರೀಕರಣಕ್ಕೆ ಮತ್ತು ವ್ಯಾಪಾರೀಕರಣಕ್ಕೆ ಪ್ರೋತ್ಸಾಹ ನೀಡುತ್ತದೆ ಎನ್ನುವ ಸತ್ಯ ಗೋಚರಿಸುತ್ತದೆ.
- ಮತ್ತೊಂದಡೆ ಶಿಕ್ಷಣವು ಏಳನೇ ಶೆಡ್ಯೂಲ್‌ನ ಪ್ರಕಾರ ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಇಲ್ಲಿ ರಾಜ್ಯಗಳಿಗೂ ಸಹ ಸಮಾನ ಜವಬ್ದಾರಿಗಳಿವೆ. ಆದರೆ ಇದನ್ನು ನಿರ್ಲಕ್ಷಿಸಿ ‘ಎನ್‌ಇಪಿ 2020’ ಕೇಂದ್ರ ಮಟ್ಟದಲ್ಲಿ ಒಂದು ನಿಯಂತ್ರಣ ಪ್ರಾಧಿಕಾರ ರಚಿಸಲು ಬಯಸುತ್ತದೆ. ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಣಗೊಳಿಸುತ್ತದೆ. ಇದು ಒಕ್ಕೂಟ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡುತ್ತದೆ. ರಾಜ್ಯಗಳು ಪ್ರತಿ ಸಂದರ್ಭದಲ್ಲಿಯೂ ಈ ಪ್ರಾಧಿಕಾರದ ಬಾಗಿಲು ತಟ್ಟಬೇಕಾಗುತ್ತದೆ. ಅಂದರೆ ಈ ‘ಎನ್‌ಇಪಿ 2020’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಕ್ಕೂಟ ವ್ಯವಸ್ಥೆಯ ಆತ್ಮವಾದ ವಿಭಿನ್ನ ರಾಜ್ಯಗಳ ಶಿಕ್ಷಣದ ಅಗತ್ಯಗಳು, ಅಲ್ಲಿನ ಮಿತಿಗಳು ಮತ್ತು ಅಲ್ಲಿನ ಸ್ಥಳೀಯ ಸಂಸ್ಕೃತಿ ಇತ್ಯಾದಿಗಳನ್ನು ಪರಿಗಣಿಸುವುದಿಲ್ಲ. ಇಲ್ಲಿನ ರಾಜ್ಯಗಳಿಗೆ ತಮ್ಮ ನುಡಿ ನೀತಿಯ ಕುರಿತು, ಶಿಕ್ಷಣ ನೀತಿಯ, ಶಿಕ್ಷಣ ಹಕ್ಕುಗಳ ಕುರಿತು, ಸರಕಾರಿ ಶಾಲೆಗಳ ಕುರಿತು ಪ್ರಸ್ತಾಪಿಸುವ, ತಮ್ಮ ವಾದವನ್ನು ಮಂಡಿಸುವ ಅವಕಾಶ ಕಡಿಮೆಯಾಗುತ್ತದೆ. ಹೀಗಾಗಿ ಈ ಶಿಕ್ಷಣ ನೀತಿಯು ಇಲ್ಲಿನ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಕಡೆಗಣಿಸುತ್ತದೆ.
- ‘ಎನ್‌ಇಪಿ 2020’ ರ ಮುಖ್ಯ ಆಶಯವೇ ವೃತ್ತಿಪರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದು. ಈ ಕಾರಣಕ್ಕಾಗಿ ಪ್ರತಿ ಹಂತದಲ್ಲಿ ವೃತ್ತಿಪರ ಶಿಕ್ಷಣ, ತರಬೇತಿ ಕುರಿತು ಪ್ರಸ್ತಾಪ ಮಾಡಲಾಗಿದೆ. ಮಕ್ಕಳ/ವಿದ್ಯಾರ್ಥಿಗಳ ವ್ಯಕ್ತಿತ್ವದ, ಅಂತರಂಗದ ವಿಕಸನದ ಕುರಿತಾಗಿ ಹೆಚ್ಚಿನ ಪ್ರಾಮುಖ್ಯತೆ ಕೊಡದೆ ಆದಷ್ಟು ಶೀಘ್ರದಲ್ಲಿ ಒಂದು ಕೋರ್ಸ ಮತ್ತು ಪ್ರಮಾಣಪತ್ರದೊಂದಿಗೆ ಉದ್ಯೋಗ ಗಳಿಸುವ ಶಿಕ್ಷಣ ನೀತಿಯನ್ನು ಪ್ರತಿಪಾದಿಸುತ್ತದೆ. ಈ ಶಿಕ್ಷಣ ನೀತಿಯು ಜಾರಿಗೊಂಡರೆ ಇನ್ನು ಮುಂದಿನ ದಿನಗಳಲ್ಲಿ ಅಧಿಕಾರಶಾಹಿಯು ಶೈಕ್ಷಣಿಕ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇದು ಟಿಪಿಕಲ್ ಕಾರ್ಪೋರೇಟ್ ಮಾದರಿಯಲ್ಲಿರುತ್ತದೆ. ಶಿಕ್ಷಕರು ಕ್ಯಾರಿಕೇಚರ್‌ಗಳಾಗುತ್ತಾರೆ ಮತ್ತು ಈ ಆತಂಕಗಳು ಉತ್ಪ್ರೇಕ್ಷೆಯಿರಲಿಲ್ಲ.. ತನ್ನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗೆ, ಅವಶ್ಯಕವಾದ ಕಾರ್ಯಯೋಜನೆಗಳ ಕುರಿತು ಈ ಶಿಕ್ಷಣ ನೀತಿಯು ಮೌನವಾಗಿದೆ ಮತ್ತು ಈ ವಿಚಾರವು ಇದರ ವ್ಯಾಪ್ತಿಗೂ ಬರುವುದಿಲ್ಲ. ಹೀಗಾಗಿ ಸರಕಾರವು ತನ್ನ ಸಿದ್ಧಾಂತಕ್ಕೆ ಪೂರಕವಾಗುವಂತಹ ಅಂಶಗಳನ್ನು ಮಾತ್ರ ಜಾರಿಗೊಳಿಸುತ್ತದೆ. ಅಷ್ಟರ ಮಟ್ಟಿಗೆ ಈ ಶಿಕ್ಷಣ ನೀತಿಯ ಮಿತಿ ಇದೆ,
- ‘ಎನ್‌ಇಪಿ 2020’ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿದ ಅನೇಕ ವಿಷಯಗಳು ಕಳೆದ ಐವತ್ತು ವರ್ಷಗಳಿಂದ ಚರ್ಚಿಸುತ್ತಲೇ ಬಂದಿದ್ದೇವೆ. ಆದರೆ ಯಾವುದೂ ಅನುಷ್ಠಾನಗೊಂಡಿಲ್ಲ. ಉದಾಹರಣೆಗೆ 2010ರ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಆಶಯವು ಮುಂದಿನ 10 ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಶೇ.100 ಪ್ರಮಾಣದಲ್ಲಿ ಉಚಿತ, ಕಡ್ಡಾಯ ಗುಣಮಟ್ಟದ ಶಿಕ್ಷಣವನ್ನು ಸಾಧಿಸುವುದು ಗುರಿಯಾಗಿತ್ತು. ಆದರೆ ಹತ್ತು ವರ್ಷಗಳಾಗಿವೆ. ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ. ಶಿಕ್ಷಣ ಮತ್ತಷ್ಟು ಖಾಸಗೀಕರಣಗೊಂಡಿದೆ. ಈ ‘ಎನ್‌ಇಪಿ 2020’ ಸಹ 2030ರಲ್ಲಿ ಸಂಪೂರ್ಣವಾದ, ಗುಣಮಟ್ಟದ ಶಿಕ್ಷಣದ ಗುರಿಯನ್ನು ಹೊಂದಿದೆ. ಆದರೆ ಈಗಾಗಲೇ ಈ ಗುರಿಯು ವಿಫಲವಾಗಿರುವುದನ್ನು ವಿಶ್ಲೇಷನೆ ಮಾಡಿಕೊಂಡಂತಿಲ್ಲ
- ಜಿಡಿಪಿಯ ಶೇ.6% ಪ್ರಮಾಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಇದು ಹೇಳುತ್ತದೆ. ಆದರೆ 1966ರ ಕೊಠಾರಿ ಆಯೋಗ ಮೊದಲುಗೊಂಡು ಎಲ್ಲಾ ಶಿಕ್ಷಣ ನೀತಿಯಲ್ಲಿ ಇದೇ ಸಲಹೆಯನ್ನು ಕೊಡಲಾಗಿತ್ತು. ಆದರೆ ಇದುವರೆಗೂ ಸರಕಾರಗಳು ಶೇ. 1.5% ಪ್ರಮಾಣ ಮಾತ್ರ ಮೀಸಲಿಟ್ಟಿದೆ. ಅನೇಕ ಸಂದರ್ಭಗಳಲ್ಲಿ ತನ್ನ ಮುಂಗಡಪತ್ರವನ್ನು ಪರಿಷ್ಕರಿಸಿ ಆ ಅನುದಾನವನ್ನು ಸಹ ಕಡಿತಗೊಳಿಸಿದೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು
- 2015ರಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ’17 ಸುಸ್ಥಿರ ಅಭಿವೃದ್ದಿ ಗುರಿಗಳು (ಎಸ್‌ಡಿಜಿ)” ಗಳಿಗೆ ಒಪ್ಪಿಕೊಂಡು ಸಹಿ ಹಾಕಿವೆ. ಇದರಲ್ಲಿನ ಗುರಿ 4ರ ಆಶಯ ‘ನ್ಯಾಯಸಮ್ಮತವಾದ, ಒಳಗೊಳ್ಳುವಿಕೆಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು, ಸರ್ವರಿಗೂ ಜೀವನಪರ್ಯಂತ ಕಲಿಕೆಯ ಅವಕಾಶಗಳಿಗೆ ಒತ್ತಾಸೆಯಾಗುವುದು’. ಇದನ್ನು 2030ರ ಒಳಗೆ ಸಾಧಿಸುವುದು ತಮ್ಮ ಉದ್ದೇಶ ಎಂದು ಎನ್‌ಇಪಿ 2020 ಆರಂಭದಲ್ಲಿ ಹೇಳಿಕೊಂಡಿದೆ. ನಿಜಕ್ಕೂ ಈ ಉದ್ದೇಶವು ಶ್ಲಾಘನೀಯ. ಆದರೆ ಮುಂದುವರೆದು ಪುಟ 4, ಎರಡನೆ ಪ್ಯಾರಾದಲ್ಲಿ ತಮ್ಮ ಉದ್ದೇಶವು ‘ಪ್ರಾಚೀನ ಭಾರತದ ಶ್ರೀಮಂತ ಪರಂಪರೆಯು ಈ ನೀತಿಯ ಮಾರ್ಗಸೂಚಿಯಾಗಿದೆ… … ಬಹುಶಿಸ್ತೀಯ ಅದ್ಯಯ£ದಲ್ಲಿ ತಕ್ಷಶಿಲಾ, ನಳಂದ, ವಿಕ್ರಮಶಿಲಾ, ವಲ್ಲಬೈ ಉನ್ನತ ಮಾನದಂಡಗಳನ್ನು ಹಾಕಿಕೊಟ್ಟಿವೆ… … ಚರಕ, ಶುಶ್ರುತ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ, ಬ್ರಹ್ಮಗುಪ್ತ, ಚಾಣಕ್ಯ, ಮಾದವ, ಪನಿನಿ, ಪತಾಂಜಲಿ ಮುಂತಾದವರು ಜ್ಞಾನ ಅಭಿವೃದ್ದಿಗೆ ಕೊಡುಗೆ ನೀಡಿದ್ದಾರೆ…’ ಎಂದು ಸ್ಮರಿಸಿಕೊಂಡಿದೆ. ಪುಟ 17, ಅನುಕ್ರಮ 4.27. ರಲ್ಲಿ ಭಾರತದ ಶಿಕ್ಷಣದ ಭವಿಷ್ಯವು ಪ್ರಾಚೀನ ಭಾರತದ ಜ್ಞಾನದ ಬಲದ ಮೇಲೆ ಅವಲಂಭಿತವಾಗಿದೆ ಎಂದು ಹೇಳಲಾಗಿದೆ. ಪ್ರಾಚೀನ ಭಾರತದ (ಸನಾತನ) ಮೌಲ್ಯಗಳನ್ನು ಈ ಶಿಕ್ಷಣ ಪದ್ದತಿಗೆ ಅಳವಡಿಸಿಕೊಳ್ಳಬೇಕೆಂದು ಪದೇ ಪದೇ ಪ್ರಸ್ತಾಪಿಸಲಾಗಿದೆ. ಆದರೆ ಒಂದು ಸಾಲಿನ ಹೇಳಿಕೆ ಹೊರತುಪಡಿಸಿ ಸಂವಿಧಾನದ ಅದ್ಯಯನ ಮತ್ತು ಕಲಿಕೆಯ ಅವಶ್ಯಕತೆ ಕುರಿತು ಎಲ್ಲಿಯೂ ಪ್ರಸ್ತಾಪಿಸುವುದಿಲ್ಲ. ಇದು ಆರ್ ಎಸ್ ಎಸ್ ನ ಗುಪ್ತಕಾರ್ಯಸೂಚಿ ಎಂಬುದು ಸ್ಪಷ್ಟವಾಗುತ್ತದೆ,
- ತಮ್ಮ ಹಿಂದಿನ ಪರಂಪರೆಯನ್ನು ನೆನಪಿಸಿಕೊಳ್ಳುವುದು ಸಹಜ. ಆದರೆ 2030ರ ಒಳಗೆ ಎಲ್ಲರಿಗೂ ನ್ಯಾಯಸಮ್ಮತವಾದ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಬಯಸುವ ಈ ಶಿಕ್ಷಣ ನೀತಿ ಎಲ್ಲಿಯೂ ಸಹ ಆಧುನಿಕ ಶಿಕ್ಷಣ ಪದ್ದತಿಯನ್ನು ಕುರಿತು ತೌಲನಿಕವಾಗಿ ಚಂತನೆ ನಡೆಸಿಲ್ಲ. ಶೈಕ್ಷಣಿಕ ವಲಯದ ಕುರಿತಾಗಿ ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳು ಮತ್ತು ಅದನ್ನು ಭಾರತದ ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಳ್ಳುವುದರ ಕುರಿತು ಪ್ರಸ್ತಾಪಿಸುವುದಿಲ್ಲ. ತನ್ನ ಹಿಂದಿನ ಶಿಕ್ಷಣ ನೀತಿಯನ್ನು ಮತ್ತು ಜಾಗತಿಕ ಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ತೌಲನಿಕವಾಗಿ ಅಧ್ಯಯನ ಮಾಡುವುದಿಲ್ಲ ಮತ್ತು ಆಧುನಿಕ, ವೈಜ್ಞಾನಿಕ, ಶೋಷಿತರ ವ್ಯಾಸಂಗಕ್ರಮವನ್ನು ರೂಪಿಸುವ ಯೋಜನೆಯೂ ಕಾಣುವುದಿಲ್ಲ. ಸುಸ್ಥಿರ ಅಭಿವೃದ್ದಿಯ ಗುರಿ 4ನ್ನು ತಲುಪಲು ಅಗತ್ಯವಾದ ಸಮಾನ ಶಿಕ್ಷಣ ವ್ಯವಸ್ಥೆ, ನೆರೆಹೊರೆ ಶಾಲಾ ಪದ್ದತಿ, ವೈಜ್ಞಾನಿಕ ಮನೋಧರ್ಮದ ಕುರಿತು ಮಾತನಾಡುವುದಿಲ್ಲ. ಬದಲಿಗೆ ಪದೇ ಪದೇ ಪ್ರಾಚೀನ ಭಾರತದ ಗುರುಕುಲ ಪದ್ದತಿ, ಆಗಿನ ವೈದಿಕಶಾಹಿ ಶಿಕ್ಷಣ ಪರಂಪರೆ ಕುರಿತು ಮಾತನಾಡುತ್ತದೆ. ಸಂಸ್ಕೃತ ಭಾಷೆಯನ್ನು ಐಚ್ಚಿಕವಾಗಿ ಕಲಿಯಬೇಕೆಂದು ಒತ್ತಾಯಿಸುತ್ತದೆ. ಆರೆಸ್ಸಸ್ ಜೊತೆಗೆ ಸತತವಾಗಿ ಸಮಾಲೋಚನೆ ನಡೆಸಿರುವ ಈ ‘ಎನ್‌ಇಪಿ 2020’ ಸಮಿತಿ ಈ ಶಿಕ್ಷಣ ನೀತಿಯ ಮೂಲಕ ದೇಶವನ್ನು ಸಾವಿರ ವರ್ಷಗಳ ಹಿಂದಕ್ಕೆ ವರ್ಣಾಶ್ರಮ ಪದ್ಧತಿಗೆ ಕೊಂಡೊಯ್ಯಲು ಬಯಸುತ್ತದೆ.
(ಮುಂದುವರಿಯುವುದು..)
ರಾಷ್ಟ್ರೀಯ ಶಿಕ್ಷಣ ನೀತಿ-2021 ಕುರಿತ ಚರ್ಚೆಯ ಹಿನ್ನೆಲೆಯಲ್ಲಿ ಓದುಗರು ತಮ್ಮ ಅಭಿಪ್ರಾಯಗಳನ್ನು ಕಳಿಸಬಹುದು. ಬರಹ 400-500 ಪದಗಳ ಮಿತಿಯಲ್ಲಿರಲಿ. ಇಮೇಲ್: pratidhvaninews@gmail.com