ಬಾಹ್ಯಾಕಾಶ ಹಾಗೂ ಬ್ರಹ್ಮಾಂಡದ ಬಗ್ಗೆ ಎಷ್ಟು ಸಂಶೋಧನೆಗಳನ್ನು ಮಾಡಿದರೂ ಸಹ ಅದು ಕಡಿಮೆಯೇ, ಪ್ರತಿದಿನ, ಪ್ರತಿಕ್ಷಣ ಹೊಸ ಹೊಸ ಆವಿಷ್ಕಾರಗಳು ಸಂಶೋಧಕರ ಕಣ್ಣಿಗೆ ಬೀಳುತ್ತಲೇ ಇರುತ್ತೆ. ಇದು ನಮ್ಮನ್ನು ವಿಸ್ಮಯಗೊಳಿಸುತ್ತೆ ಕೂಡ. ಈಗಾಗಲೇ ಹಲವರು ಬಾಹ್ಯಾಕಾಶದಲ್ಲಿ ಸಸ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚಿಗೆ ನಾಸಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳೆದ ಹೂವಿನ ಅದ್ಭುತ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಜಿನಿಯಾ ಗಿಡವನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವೆಜ್ಜಿ ಫೆಸಿಲಿಟಿ ಭಾಗವಾಗಿ ಕಕ್ಷೆಯಲ್ಲಿ ಬೆಳೆಸಲಾಗಿದೆ. ವಿಜ್ಞಾನಿಗಳು 1970ರ ದಶಕದಿಂದಲೂ ಬಾಹ್ಯಾಕಾಶದಲ್ಲಿ ಸಸ್ಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ, ಆದರೆ ಈ ನಿರ್ದಿಷ್ಠ ಪ್ರಯೋಗವನ್ನು 2015ರಲ್ಲಿ ನಾಸಾದ ಗಗನಯಾತ್ರೆ ಕೆಜೆಲ್ ಲಿಂಡಿಗ್ರೆಸ್ ಆರಂಭಿಸಿದರು ಎಂದು ನಾಸಾ ಪೋಸ್ಟ್ನಲ್ಲಿ ಬರೆಯಲಾಗಿದೆ.
“ನಮ್ಮ ಬಾಹ್ಯಾಕಾಶ ಉದ್ಯಾನವು ಕೇವಲ ಪ್ರದರ್ಶನಕ್ಕಾಗಿ ಅಲ್ಲ: ಕಕ್ಷೆಯಲ್ಲಿ ಸಸ್ಯಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದನ್ನು ಕಲಿಯುವುದು ಭೂಮಿಯ ಮೇಲೆ ಬೆಳೆಗಳನ್ನು ಹೇಗೆ ಬೆಳೆಯುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ, ಚಂದ್ರ, ಮಂಗಳ ಗ್ರಹಕ್ಕೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ತಾಜಾ ಆಹಾರದ ಅಮೂಲ್ಯ ಮೂಲವನ್ನು ಒದಗಿಸುತ್ತದೆ.ಇದನ್ನು ಹೊರತುಪಡಿಸಿ ನಾಸಾದ ಗಗನಯಾತ್ರಿಗಳು ಮೆಣಸು, ಕಾಳು ಮೆಣಸು ಹಾಗೂ ಟೊಮ್ಯಾಟೋಗಳನ್ನೂ ಸಹ ಬೆಳೆದಿದ್ದಾರೆ ಎಂದು ಬರೆಯಲಾಗಿದೆ.