ದೆಹಲಿಯಲ್ಲಿ ಎರಡು ದಿನಗಳು ನಡೆದ ಜಿ 20 ಶೃಂಗಸಭೆ ಯಶಸ್ಸು ಕಂಡು ಕ್ಷುಲ್ಲಕ ಮನಸ್ಥಿತಿಯ ಕೆಲವು ಪಕ್ಷಗಳು ಅಸೂಯೆಪಡುತ್ತಿವೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಮಧ್ಯಪ್ರದೇಶ ಇಂದೋರ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 12) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಿ 20 ಯಶಸ್ಸು ಕಂಡು ಸಂಕುಚಿತ ಮನಸ್ಥಿತಿಯ ಕೆಲವು ಪಕ್ಷಗಳು ಟೀಕಿಸುತ್ತಿವೆ. ವಿಶ್ವದ ನಾಯಕರು ಜಿ 20 ಸಭೆಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಆದರೆ ಕೆಲವು ನಾಯಕರು ಭಾರತ ಮಾತೆಯನ್ನು ವಿದೇಶಿ ನೆಲದಲ್ಲಿ ಮತ್ತೆ ಟೀಕಿಸಿದ್ದಾರೆ” ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
“ಭಾರತ ಜಾಗತಿಕ ವೇದಿಕೆಯಲ್ಲಿ ಒಂದು ತಾರೆಯಾಗಿ ಹೊರಹೊಮ್ಮುತ್ತಿದೆ. ಇದು ಕೆಲವು ಪಕ್ಷಗಳಿಗೆ ಅಸಮಧಾನವನ್ನು ಉಂಟು ಮಾಡುತ್ತಿದೆ. ಕೆಲವು ಜನರು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸುವ ಬದಲಿಗೆ ಇತರರ ಗೌರವ ಕುಂದಿಸುವ ಬಗ್ಗೆ ಆಲೋಚನೆ ಹೊಂದಿರುತ್ತಾರೆ” ಎಂದು ಜ್ಯೋತಿರಾದಿತ್ಯ ಸಿಂಧಿಯಾ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ ರಾಹುಲ್ ಗಾಂಧಿ ಅವರು ಯುರೋಪ್ ಪ್ರವಾಸ ಕೈಗೊಂಡಿದ್ದಾಗ ʼಭಾರತ ಮತ್ತು ಇಂಡಿಯಾʼ ಚರ್ಚೆ ಹಾಗೂ ಇತರ ವಿಷಯಗಳ ಕುರಿತು ನೀಡಿದ ಹೇಳಿಕೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ಇಂತಹ ನಕಾರಾತ್ಮಕ ವಿಷಯಗಳ ಬಗ್ಗೆ ಭಾರತೀಯರು ಜಾಗರೂಕರಾಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಯೂ ಪ್ರತಿಪಕ್ಷಗಳಿಗೆ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ಆಯೋಜಿಸಿದ್ದ ಜಿ 20 ಶೃಂಗಸಭೆ ಐತಿಹಾಸಿಕ ಯಶಸ್ಸು ಪಡೆದಿದೆ. ಶೃಂಗಸಭೆ ವೇಳೆ ಸರ್ವಾನುಮತದಿಂದ ಅಂಗೀಕರಿಸಿದ ದೆಹಲಿ ಘೋಷಣೆಯು ಜಗತ್ತು ಎದುರಿಸುತ್ತಿರುವ ಸವಾಲುಗಳ ನಿರ್ವಹಣೆಗೆ ಒಂದು ನೀಲನಕ್ಷೆಯಾಗಿದೆ” ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.











