ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗುತ್ತಿದ್ದು, ಪಕ್ಷದ ನಾಯಕರು, ಹಾಗೂ ಮುಖಂಡರು ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ.ಹಳೇ ಮೈಸೂರು ಭಾಗದಲ್ಲಿ ಹೇಗಾದರೂ ಮಾಡಿ ಕಮಲ ಅರಳಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನೂ ಕೂಡ ಇದಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ಏಪ್ರಿಲ್ 30ರಂದು ರಾಮನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಮುಂದಾಗಿದೆ.

ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ 30 ಎಕರೆಯಲ್ಲಿ ಜಾಗದಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದು ಸುಮಾರು 10ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳನ್ನ ಒಳಗೊಂಡಂತೆ ಸಮಾವೇಶ ನಡೆಯಲಿದ್ದು ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದಾರೆ. ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಪಕ್ಷದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಅವರನ್ನು ಹಲವು ಬಾರಿ ರಾಜ್ಯಕ್ಕೆ ಕರೆಸಿಕೊಂಡು ಪ್ರಚಾರ ನಡೆಸುವ ಉದ್ದೇಶ ಬಿಜೆಪಿಯದ್ದಾಗಿದೆ. ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ರಾಜ್ಯದಲ್ಲಿ ಮರಳಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ.








