ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿ ಚುನಾವಣೆಯಲ್ಲೂ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಕೆಲಸ ಮಾಡುತ್ತದೆ. ಈ ಭಾರಿ ಭಾವನಾತ್ಮಕ ಅಸ್ತ್ರ ಇನ್ನೂ ಬಳಕೆ ಆಗಿಲ್ಲ. ಆದರೆ ದರ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದು, ಅದರಲ್ಲೂ ಪ್ರಮುಖವಾಗಿ ಇಂಧನ ದರ ಏರಿಕೆಯಿಂದ ಪ್ರತಿಯೊಂದು ವಸ್ತುಗಳ ದರ ಹೆಚ್ಚಳ ಆಗಿದೆ ಎನ್ನುವ ಮಾತಿತ್ತು. ಅದೇ ಕಾರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ದರ ಇಳಿಸುವ ಚಿಂತನೆಯಲ್ಲಿದೆ ಎನ್ನುವ ವರದಿಗಳಾಗಿದ್ದವು. ಇದರ ಮೊದಲ ಭಾಗವಾಗಿ ಅಡುಗೆ ಅನಿಲ ದರದವನ್ನು 200 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ಮುಂದೆ ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿದ್ದ ಹಾಗೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿಯೂ ಗಣನೀಯವಾಗಿ ಇಳಿಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ..
2104ರಿಂದ 695 ರೂಪಾಯಿ ಸಿಲಿಂಡರ್ ದರ ಏರಿಕೆ..?
ಪ್ರಧಾನಿ ನರೇಂದ್ರ ಮೋದಿ ಗ್ಯಾಸ್ ಸಿಲಿಂಡರ್ ದರ ಇಳಿಕೆ ಬೆನ್ನಲ್ಲೇ ಮಾತನಾಡಿದ್ದು, ನನ್ನ ಸಹೋದರಿಯರಿಗೆ ಗ್ಯಾಸ್ ದರ ಇಳಿಕೆಯಿಂದ ಅನುಕೂಲವಾಗಲಿದೆಲ. ನನ್ನ ಸಹೋದರಿಯರ ಬದುಕು ಇನ್ನಷ್ಟು ಸರಳವಾಗಲಿದೆ. ಸಹೋದರಿಯರ ಕುಟುಂಬದ ಸೌಕರ್ಯ ಹೆಚ್ಚಿಸುತ್ತದೆ. ಪ್ರತಿಯೊಬ್ಬ ಸಹೋದರಿಯೂ ಸಂತೋಷವಾಗಿರಲಿ, ಆರೋಗ್ಯವಾಗಿರಲಿ, ಸಂತೋಷವಾಗಿರಲಿ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆದರೆ ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲು 2014ರ ಮಾರ್ಚ್-ಏಪ್ರಿಲ್ನಲ್ಲಿ 410 ರುಪಾಯಿಗೆ ಗ್ಯಾಸ್ ಸಿಲಿಂಡರ್ ದೊರೆಯುತ್ತಿತ್ತು. ಆದರೆ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಪೆಟ್ರೋಲಿಯಂ ಕಂಪನಿಗಳಿಗೆ ನೀಡಲಾಗ್ತಿದ್ದ ಸಬ್ಸಿಡಿ ರದ್ದು ಮಾಡಿದ ಪ್ರಧಾನಿ ಮೋದಿ, ಜನರ ಖಾತೆಗೆ ಹಣ ವರ್ಗಾವಣೆ ಮಾಡುವ ಪದ್ದತಿ ಜಾರಿ ಮಾಡಿದರು.
ಸಬ್ಸಿಡಿ ಆಸೆ ತೋರಿಸಿ ಮೆಲ್ಲಗೆ ನಿಲ್ಲಿಸಿದ ಕೇಂದ್ರ ಸರ್ಕಾರ..!
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಿಯಂತ್ರಣ ತೆರವು ಮಾಡಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಬೆರೆ ಏರಿಕೆ ಇಳಿಕೆ ಆಗಲಿದೆ ಎಂದಿದ್ದರು. ಆದರೆ ಜನರ ಖಾತೆಗೆ ಸಬ್ಸಿಡಿ ಹಣವನ್ನು ನೇರವಾಗಿ ಹಾಕುತ್ತೇವೆ ಎಂದು ಘೋಷಣೆ ಮಾಡಿದ್ದರು. ಆ ಬಳಿಕ ನಿಧಾನವಾಗಿ ತೆರಿಗೆ ಪಾವತಿದಾರರಿಗೆ ಸಬ್ಸಿಡಿ ಕೊಡುವುದಿಲ್ಲ ಎಂದು ಸ್ಥಗಿತ ಮಾಡಲಾಯ್ತು. ಆ ಬಳಿಕ ಕೆಲವೇ ವರ್ಷಗಳಲ್ಲಿ ಮೆಲ್ಲಗೆ ಎಲ್ಲರಿಗೂ ಸಬ್ಸಿಡಿ ನಿಲ್ಲಿಸಲಾಯ್ತು. ಆದರೆ ಉಜ್ವಲಾ ಯೋಜನೆಯಲ್ಲಿ ಸಿಲಿಂಡರ್ ಪಡೆದ ಕೆಲವೇ ಮಂದಿಗೆ ಸಬ್ಸಿಡಿ ಮುಂದುವರಿಸಲಾಯ್ತು. ಇದೀಗ ಈಗಾಗಲೇ 200 ರುಪಾಯಿ ಸಬ್ಸಿಡಿ ಪಡೆದು 1105ರ ಬದಲು 905 ರೂಪಾಯಿ ಕಟ್ಟುತ್ತಿದ್ದ ಉಜ್ವಲಾ ಯೊಜನೆಯ ಫಲಾನುಭವಿಗಳು ಇನ್ಮುಂದೆ 705 ರೂಪಾಯಿ ಹಾಗು ಇನ್ನುಳಿದ ಎಲ್ಲರೂ 1105 ರೂಪಾಯಿ ಬದಲು 905 ರೂಪಾಯಿಗೆ ಸಿಲಿಂಡರ್ ಕೊಂಡುಕೊಳ್ಳಬಹುದು. ಆದರೆ ಇದು ಚುನಾವಣೆ ತನಕ ಮಾತ್ರ ಅನ್ನೋದು ಈಗಿನ ಚರ್ಚೆ.
ಲೋಕಸಭಾ ಚುನಾವಣೆಗೂ ಮುನ್ನ ಈ ರೀತಿ ಮಾಡುತ್ತಲೇ ಇರ್ತಾರೆ..!
ಚುನಾವಣೆಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟಬಾರದು ಅನ್ನೋ ಕಾರಣಕ್ಕೆ ಈ ರೀತಿ ದರ ಇಳಿಕೆಗೆ ಬೇಕಾದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಜಯಭೇರಿ ಬಾರಿಸಿದ ಬಳಿಕ 2019ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಸಾಕಷ್ಟು ಬೆಲೆ ಏರಿಕೆ ಆಗಿತ್ತು. ಆ ವೇಳೆ ಕೂಡ ದರ ಸಮರಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದರು. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ಬಳಿಕ ನಿಧಾನವಾಗಿ ದರ ಏರಿಕೆ ಮಾಡಿಕೊಂಡರು. ಇದೀಗ ಮತ್ತೇ ಅದೇ ತಂತ್ರಗಾರಿಕೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲೂ ಸಿಲಿಂಡರ್ ಬೆಲೆ 800, 900 ರೂಪಾಯಿ ಆಸುಪಾಸಿನಲ್ಲೇ ಇತ್ತು. ಆದರೆ ನೇರವಾಗಿ ಕಂಪನಿಗಳಿಗೆ ಸಬ್ಸಿಡಿ ಹಣ ಪಾವತಿ ಮಾಡುವ ಮೂಲಕ ಜನರಿಗೆ ಹೊರೆಯಾಗದಂತೆ ಕ್ರಮ ತೆಗೆದುಕೊಂಡಿದ್ದರು. ಆದರೆ ಬಿಜೆಪಿ ಸರ್ಕಾರ ಕಂಪನಿಗಳಿಗೆ ಕೊಡ್ತಿದ್ದ ಸಬ್ಸಿಡಿ ನಿಲ್ಲಿಸಿ, ಜನರಿಗೆ ಕೊಡ್ತೇವೆ ಎಂದು ಹೇಳಿ ಆನಂತರ ಎಲ್ಲರಿಗೂ ಟೋಪಿ ಹಾಕಿದ್ದರು. ಇದೀಗ ಚುನಾವಣೆ ಬಂತು ಅನ್ನೋ ಕಾರಣಕ್ಕೆ ಮತ್ತೊಂದು ರೀತಿಯಲ್ಲಿ ಟೋಪಿ ಸಿದ್ಧ ಮಾಡುತ್ತಿದ್ದಾರೆ. ಜನ ಮತ್ತೆ ಮರುಳಾಗ್ತಾರಾ..? ಕಾದು ನೋಡ್ಬೇಕು.
ಕೃಷ್ಣಮಣಿ