
ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ “ಠಾಣೆ” ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ “ಬಾಳಿನಲ್ಲಿ ಭರವಸೆಯ ಬೆಳಕು” ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಟ್ರೆಂಡಿಂಗ್ ನಲ್ಲಿದೆ. ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡಿಗೆ ಕನ್ನಡ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಅವರಿಗೂ ಸಹ ಈ ಹಾಡು ಅಚ್ಚುಮೆಚ್ಚಂತೆ. ಬಾಲ ಪ್ರತಿಭೆಗಳ ಗಾಯನದಲ್ಲಿ ಮೂಡಿಬಂದಿರುವ ಈ ಹಾಡನ್ನು ಮೆಚ್ಚಿಕೊಂಡ ನಾರಾಯಣ ಗೌಡ ಅವರು ಚಿತ್ರತಂಡದವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದರು.

ಬಾಲ ಪ್ರತಿಭೆಗಳು ಹಾಡಿರುವ “ಠಾಣೆ” ಚಿತ್ರದ ಅರ್ಥಗರ್ಭಿತ ಈ ಹಾಡನ್ನು ನಾನು ದಿನಕ್ಕೆ ನಾಲ್ಕೈದು ಬಾರಿ ಕೇಳುತ್ತಲೇ ಇರುತ್ತೇನೆ. ಅಷ್ಟು ಇಷ್ಟವಾಗಿದೆ ನನಗೆ ಈ ಹಾಡು. ಮಕ್ಕಳು ತುಂಬಾ ಚೆನ್ನಾಗಿ ಹಾಡಿದ್ದಾರೆ. ರೆಮೊ ಅವರ ಸಾಹಿತ್ಯ ಹಾಗೂ ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನ ಕೂಡ ಬಹಳ ಸುಂದರವಾಗಿದೆ. ಮಾನಸ ಹೊಳ್ಳ ಅವರು ನಮ್ಮ ಹಿರಿಯ ನಟ ಶಂಖನಾದ ಅರವಿಂದ್ ಅವರ ಪುತ್ರಿ. ಅವರ ತಂದೆ ಅದ್ಭುತ ಕಲಾವಿದರು. ಮಗಳು ಸಹ ಉತ್ತಮ ಸಂಗೀತ ನಿರ್ದೇಶಕಿ. ಇಂತಹ ಮನಮುಟ್ಟುವ ಹಾಡನ್ನು ನೀಡಿದ ಚಿತ್ರತಂಡಕ್ಕೆ ನನ್ನ ಅಭಿನಂದನೆಗಳು. ನಿಮ್ಮ ತಂಡದ ಜೊತೆಗೆ ಸದಾ ನಾನು ಇರುತ್ತೇನೆ. ಹಾಡಿನಷ್ಟೇ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ನಾರಾಯಣ ಗೌಡ ಅವರು ಹಾರೈಸಿದರು. ನಿರ್ದೇಶಕ ಎಸ್ .ಭಗತ್ ರಾಜ್, ನಾಯಕ ಪ್ರವೀಣ್, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಮುಂತಾದ “ಠಾಣೆ” ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. “ಠಾಣೆ” ಚಿತ್ರಕ್ಕಾಗಿ ಖ್ಯಾತ ಗಾಯಕ ರಾಜೇಶ್ ಕೃಷ್ಣ ಅವರು ಹಾಡಿರುವ ಹಾಡೊಂದು ಸದ್ಯದಲ್ಲೇ ಲೇಖಾ ಆಡಿಯೋ ಮೂಲಕ ಬಿಡುಗಡೆಯಾಗಲಿದೆ.
