ನಮ್ಮ ದೇಶದಲ್ಲಿ ಯಾವುದೇ ಸರ್ಕಾರ ಬರಲಿ , ಚುನಾವಣಾ ಪ್ರಣಾಳಿಕೆಯಲ್ಲಿ ಏನೇ ಭರವಸೆ ಕೊಟ್ಟಿರಲಿ ಆಳುವ ಪಕ್ಷಗಳು ಎಂದಿಗೂ ಉದ್ಯಮಿಗಳ ಕಡೆಗೆ ಎಂದು ಪದೇ ಪದೇ ಸಾಬೀತಾಗುತ್ತಲೇ ಇದೆ. ಏಕೆಂದರೆ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ದಿಸಲು ಶಕ್ತಿ ಕೊಡುವುದೇ ಈ ಉದ್ಯಮಪತಿಗಳು. ಸರ್ಕಾರಗಳು ಉದ್ಯಮಿಗಳ ಪರ ವಹಿಸಿದರೆ ಕೊನೆಗೆ ರೈತರಿಗೆ ಸಿಗುವುದು ಚಿಪ್ಪೆ. ಇದೇ ರೀತಿಯ ಘಟನೆ ಮೈಸೂರು ಸಮೀಪದ ನಂಜನಗೂಡಿನಲ್ಲಿ ನಡೆದಿದೆ. ಕಳೆದ 52 ದಿನಗಳಿಂದ ಏಷಿಯನ್ ಪೇಂಟ್ಸ್ ಕಾರ್ಖಾಣೆಗೆ ಭೂಮಿ ನೀಡಿದ ರೈತರು ಕಾರ್ಖಾನೆ ಎದುರೇ ಧರಣಿ ಕೂತಿದ್ದಾರೆ. ಆದರೆ ಕಾರ್ಖಾನೆಯ ಆಡಳಿತ ಮಂಡಳಿ ಆಗಲೀ ಸರ್ಕಾರವಾಗಲೀ ಇವರ ಬೇಡಿಕೆಗೆ ಸ್ಪಂದಿಸುತ್ತಿಲ್ಲ.
ಕಳೆದ 50 ದಿನಗಳಿಂದ ಪ್ರತಿಭಟನೆ ನಡೆಸುತಿದ್ದ ರೈತರು ಸೋಮವಾರದಿಂದ ಪ್ರತಿಭಟನೆ ತೀವ್ರಗೊಳಿಸಿದ್ದು, ಪ್ರತಿಭಟನಾ ನಿರತ ರೈತರು ಕಾರ್ಖಾನೆಯ ಗೇಟ್‌ಗಳನ್ನು ಮುಚ್ಚಿ ಎರಡನೇ ದಿನ ಕಾರ್ಮಿಕರು ಒಳ ಹೋಗುವುದು ಮತ್ತು ಬರುವುದನ್ನು ನಿರ್ಬಂಧಿಸಿದ್ದಾರೆ. 50 ದಿನಗಳಿಗಿಂತ ಹೆಚ್ಚು ಕಾಲ ಅವರ ಶಾಂತಿಯುತ ಪ್ರತಿಭಟನೆಗಳು ನಡೆದ ನಂತರವೂ ಅನ್ನದಾತರು ತಮ್ಮ ಆಕ್ರೋಶವನ್ನು ಈ ರೀತಿ ಹೊರ ಹಾಕಿದ್ದು ಕಾರ್ಖಾನೆ ಹಠಮಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ 2017 ರಲ್ಲಿ ಕಾರ್ಖಾನೆಯ ನಿರ್ಮಾಣಕ್ಕಾಗಿ ಇಮ್ಮಾವು ಗ್ರಾಮದಲ್ಲಿ ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟ 95 ರೈತರು ಸುಮಾರು ಎರಡು ತಿಂಗಳಿನಿಂದ ಕಾರ್ಖಾನೆಯ ಹೊರಗೆ ಪ್ರತಿಭಟನೆಯಲ್ಲಿ ಕುಳಿತಿದ್ದಾರೆ. ಭೂಮಿಯನ್ನು ಖರೀದಿಸಿದಾಗ ರೈತರಿಗೆ ಕಾರ್ಖಾನೆಯಲ್ಲಿ ಉದ್ಯೋಗ ಒದಗಿಸುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ ಉದ್ಯೋಗ ನೀಡದೆ ಮೋಸ ಮಾಡಿದೆ ಎಂದು ಆರೋಪಿಸುತಿದ್ದಾರೆ.
ಕಾರ್ಖಾನೆಗಾಗಿ ತಮ್ಮ ನಾಲ್ಕೂವರೆ ಎಕರೆ ಭೂಮಿಯನ್ನು ನೀಡಿದ ಸಚಿನ್ ಎಸ್, ಅವರು ಮಾತನಾಡಿ ನಮ್ಮ ಬೇಡಿಕೆಗಳನ್ನು ಕಾರ್ಖಾನೆ ಆಡಳಿತ ಮಂಡಳಿಯು ಈಡೇರಿಸದಿದ್ದರೆ ಕಾರ್ಖಾನೆಯ ನೀರು ಮತ್ತು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗುತ್ತೇವೆ. ಈ ಕಾರ್ಖಾನೆಯ ಆಡಳಿತವು ನಮಗೆ ಶಾಶ್ವತ ಉದ್ಯೋಗವನ್ನು ಒದಗಿಸಿದ ನಂತರ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ.ಎಂದರು. ಈ ಭೂಮಿಯನ್ನು ರಾಜ್ಯ ಸರ್ಕಾರದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಸ್ವಾಧೀನಪಡಿಸಿಕೊಂಡಿತು ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ 99 ವರ್ಷಗಳ ಕಾಲ ರಿಯಾಯಿತಿ ದರದಲ್ಲಿ ಕಂಪನಿಗೆ ಗುತ್ತಿಗೆ ನೀಡಲಾಯಿತು. ಪರಿಸ್ಥಿತಿಯ ಬಗ್ಗೆ ತಿಳಿಸಿದ ಕರ್ನಾಟಕ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಕಂಪನಿಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ್ದರು. ಆದರೆ ಕಂಪನಿಯ ಆಡಳಿತವು ರೈತರ ಬೇಡಿಕೆ ಈಡೇರಿಸಲು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಇನ್ನೊಬ್ಬ ರೈತ ಪ್ರೇಮರಾಜ್ ಅವರು ನಾವು ಕೆಐಎಡಿಬಿಗೆ ಹೋದರೆ, ಕಂಪನಿಯು ನಮಗೆ ಅಲ್ಲಿ ಉದ್ಯೋಗಗಳನ್ನು ಒದಗಿಸಬೇಕಾಗಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ ಆದರೆ ಸರ್ಕಾರದ ಹೊಸ ಆದೇಶಗಳಿಲ್ಲದೆ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಸರ್ಕಾರ ಇಲ್ಲಿಯವರೆಗೆ ನಮಗೆ ಮೋಸ ಮಾಡಿದೆ, ಸರ್ಕಾರ ನಿಜವಾಗಿಯೂ ನಮ್ಮ ಪರ ಇದ್ದಿದ್ದರೆ ಇವರೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿದ್ದರು ಎಂದರು.
ಭೂಮಿಯನ್ನು ಕಳೆದುಕೊಂಡಿರುವ ಪ್ರತಿ ಕುಟುಂಬದ ಒಬ್ಬ ಕುಟುಂಬ ಸದಸ್ಯರಿಗೆ ಸ್ವಾಧೀನ ಪ್ರಕ್ರಿಯೆಯಲ್ಲಿ ಒಪ್ಪಿದಂತೆ ಶಾಶ್ವತ ಉದ್ಯೋಗ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಆ ಒಪ್ಪಂದದ ಪ್ರಕಾರ, ಭೂಮಾಲೀಕರನ್ನು ಹೊರತುಪಡಿಸಿ 900 ಸ್ಥಳೀಯ ನಿವಾಸಿಗಳು ಸಹ ಕಾರ್ಖಾನೆಯಲ್ಲಿ ಉದ್ಯೋಗ ಪಡೆಯಬೇಕಾಗಿತ್ತು. ಭೂಮಿ ನೀಡಿದ ರೈತ ಕುಟುಂಬ ಸದಸ್ಯರ ಪ್ರತಿಭಟನೆಗೆ ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರೂ ಬೆಂಬಲ ನೀಡುತಿದ್ದಾರೆ.
ಈ ಕುರಿತು ಮಾತನಾಡಿದ ಎಐಯುಟಿಯುಸಿ ನಾಯಕ ಚಂದ್ರಶೇಖರ್ ಮೆಟಿ, ಅವರು ಭೂಮಿ ಕಳೆದುಕೊಂಡಿರುವ ಈ 95 ಕುಟುಂಬಗಳೆಲ್ಲವೂ ಸಣ್ಣ ರೈತರು ಮತ್ತು ಬೇರೆ ಜೀವನೋಪಾಯವಿಲ್ಲ. ಒಪ್ಪಂದದ ಪ್ರಕಾರ, ಕಂಪನಿಯು ಈ ಎಲ್ಲಾ ಕುಟುಂಬಗಳಲ್ಲಿ ಒಬ್ಬ ಸದಸ್ಯರಿಗೆ ಉದ್ಯೋಗವನ್ನು ನೀಡಬೇಕಿದೆ ಆದರೆ ಅವರು ಅದನ್ನು ನೀಡಿಲ್ಲ. ಆದರೆ, ಅವರು ಸರ್ಕಾರದಿಂದ ಅಲ್ಪ ಹಣಕ್ಕೆ ಭೂಮಿಯನ್ನೂ ಮತ್ತು ನಿತ್ಯ 2.5 MLD ನೀರು ಮತ್ತು ವಿದ್ಯುತ್ ಅನ್ನು ರಿಯಾಯಿತಿ ದರದಲ್ಲಿ ಪಡೆಯುತಿದ್ದಾರೆ ಎಂದರು.
“ಕಾರ್ಖಾನೆಯ ನಿರ್ಮಾಣದ ಸಮಯದಲ್ಲಿ, ಭೂಮಿಯನ್ನು ಕಳೆದುಕೊಳ್ಳುವ ಕುಟುಂಬಗಳಲ್ಲಿ ಒಬ್ಬ ಸದಸ್ಯನನ್ನು ಕಂಪನಿಯು ಸಂಬಳ ನೀಡಿ ತರಬೇತಿಗಾಗಿ ಕಳುಹಿಸಲಾಯಿತು ಮತ್ತು ಅವರಿಗೆ ಉದ್ಯೋಗದ ಭರವಸೆ ನೀಡಲಾಯಿತು. ಆದರೆ ಕಂಪನಿಯು ಒಂದೂವರೆ ವರ್ಷಗಳ ಹಿಂದೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ಅವರು ಈ ಕಾರ್ಖಾನೆಯಲ್ಲಿ ಗುತ್ತಿಗೆ ಕೆಲಸವನ್ನು ಮಾತ್ರ ನೀಡಿದರು. ಮಿಕ್ಕವರನ್ನು 40 ಕಿ.ಮೀ ದೂರದಲ್ಲಿರುವ ಕಂಪನಿಯು ನಿರ್ವಹಿಸುವ ಸ್ಯಾನಿಟೈಜರ್ ಉತ್ಪಾದನಾ ಘಟಕಕ್ಕೆ ಅವರನ್ನು ಕಳುಹಿಸಲಾಗಿದೆ. ಕೋವಿಡ್ 19 ಬಿಕ್ಕಟ್ಟು ಮುಗಿದ ನಂತರ, ಸ್ಯಾನಿಟೈಜರ್‌ಗಳ ಬೇಡಿಕೆ ಕಡಿಮೆಯಾಗುತ್ತದೆ ಮತ್ತು ಸ್ಯಾನಿಟೈಸರ್ ಉತ್ಪಾದನಾ ಘಟಕ ಸ್ಥಗಿತಗೊಳ್ಳಲಿದ್ದು ಅನ್ನದಾತರ ಬದುಕು ಮತ್ತೂ ಅತಂತ್ರವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇದರಲ್ಲಿ ಮದ್ಯ ಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕಾದ ಸರ್ಕಾರ ದೀರ್ಘ ನಿದ್ರೆಯಲ್ಲಿದೆ.