ಭಾರೀ ನಿರೀಕ್ಷೆ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಪುತ್ರ ನಿರಂಜನ್ ಸುಧೀಂದ್ರ ಅಭಿನಯದ ನಮ್ಮ ಹುಡುಗರು ಸ್ನೇಹಿತರ ಕಥೆ ಅಂತ ಟೈಟಲ್ ಹೇಳಿದರೂ ನವಿರಾದ ಪ್ರೇಮಕಥೆಯನ್ನು ಹೊಂದಿದೆ.
ಮಂಡ್ಯ ಸುತ್ತಮುತ್ತಲಿನ ಹಳ್ಳಿಗಾಡಿನಲ್ಲಿ ನಡೆಯುವ ಕಥೆ ಸಾಧಾರಣವಾಗಿದ್ದು, ಇಂತಹ ಹಲವಾರು ಚಿತ್ರಗಳು ಬಂದು ಹೋಗಿವೆ. ಆದರೆ ಇಲ್ಲಿ ಪ್ರೇಮಕಥೆಯ ಜೊತೆಗೆ ಸ್ನೇಹಿತರ ಒಡನಾಟ, ಅಲ್ಲೊಮ್ಮೆ ಇಲ್ಲೊಮ್ಮೆ ಕಥೆ ತಿರುವು ಪಡೆಯುವುದರಿಂದ ಪ್ರೇಕಕ್ಷರು ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿ ಚಿತ್ರ ಸಾಗುತ್ತದೆ.
ನಾಯಕ ನಟ ಭರ್ಮ (ನಿರಂಜನ್ ಸುಧೀಂದ್ರ) ನಾಯಕಿ ಗೌರಿ(ರಾಧ್ಯ)ಳನ್ನು ಬಹಳ ಚಿಕ್ಕಂದಿನಿಂದಲ್ಲೇ ಪ್ರೀತಿಸುತ್ತಾನೆ ಇವನ ಪ್ರೀತಿಗೆ ಸ್ನೇಹಿತರಾದ ವಿನಯ್(ಪ್ರವೀಣ್), ಮಹಾಂತೇಶ್ (ಅಲೋಕ್) ಹಾಗು ಗುರು ಅಲಿಯಾಸ್ ಗುಬ್ಬಿ (ಮಂಜುನಾಥ್) ಸ್ನೇಹಿತನ ಬೆನ್ನಿಗೆ ನಿಲ್ಲುತ್ತಾರೆ.

ಮೊದಲಾರ್ಧ ಸ್ನೇಹಿತನನ್ನು ಮೂರ್ಖನನ್ನಾಗಿ ಮಾಡುವ ಸ್ನೇಹಿತರೆ ದ್ವಿತೀಯಾರ್ಧದಲ್ಲಿ ಅವನ ಬೆನ್ನೆಲುಬಾಗಿ ನಿಂತು ತಮ್ಮ ಪ್ರಾಣವನ್ನೇ ಪಣಕ್ಕೆ ಇಡುತ್ತಾರೆ. ಅಲ್ಲಿಂದ ಕಥೆ ಏನಾಗುತ್ತಾದೆ. ಪ್ರೇಮಿಗಳು ಸ್ನೇಹಿತರನ್ನು ಉಳಿಸಿಕೊಳ್ಳುತ್ತಾರಾ ಅಥವಾ ಪ್ರೇಮಿಗಳಿಗಾಗಿ ಸ್ನೇಹಿತರು ಬಲಿ ಆಗುತ್ತಾರಾ ಎಂಬುದನ್ನು ತೆರೆಯ ಮೇಲೆಯೇ ನೋಡಬೇಕು.
ನಿರಂಜನ್ ಹಾಗೂ ರಾಧ್ಯ ಜೋಡಿ ಮುದ ನೀಡುತ್ತದೆ ಇವರಿಬ್ಬರದು ಮೊದಲ ಚಿತ್ರವಾದರು ಸಹ ಎಲ್ಲಿಯೂ ಅವರ ಚೊಚ್ಚಲ ಚಿತ್ರ ಎನ್ನಿಸುವುದಿಲ್ಲ ಅಷ್ಟು ಚೆನ್ನಾಗಿ ನಟಿಸಿದ್ದಾರೆ. ಉಳಿದಂತೆ ಸ್ನೇಹಿತರಾಗಿ ಪ್ರವೀಣ್, ಅಲೋಕ್ ಹಾಗು ಮಂಜುನಾಥ್, ಪೋಷಕರ ಪಾತ್ರದಲ್ಲಿ ನಟಿಸಿರುವ ಶಂಕರ್ ಆಶ್ವತ್ಥ್ – ಭವ್ಯ ಹಾಗು ಶರತ್ ಲೋಹಿತಾಶ್ವ – ಚಿತ್ಕಲಾ ಬಿರಾದರ್ ಜೋಡಿ ಎಂದಿನಂತೆ ತಮ್ಮ ಮ್ಯಾನರಿಸಂ ಮೆರೆದಿದ್ದಾರೆ. ಅತಿಥಿ ಪಾತ್ರದಲ್ಲಿ ವಸಿಷ್ಠ ಎಂದಿನಂತೆ ತಮ್ಮ ಖದರ್ ತೋರಿದ್ದಾರೆ.
ತಾಂತ್ರಿಕ ವಿಭಾಗಕ್ಕೆ ಬರುವುದಾದರೆ ನಿರ್ದೇಶಕ ಸಿದ್ದು ಕಥೆಗೆ ಟ್ವಿಸ್ಟ್ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಅಭಿಮಾನ್ ರಾಯ್ ಸಂಗೀತ ಸಂಯೋಜನೆಯ ಹಾಡುಗಳು ಗುನುಗುವಂತಿದೆ. ಸಂಕಲನಕಾರರಾಗಿ ದೀಪು ಎಸ್ ಕುಮಾರ್ ಎಂದಿನಂತೆ ತಮ್ಮ ಕೈಚಳಕ ತೋರಿದ್ದಾರೆ. ಒಟ್ಟಿನಲ್ಲಿ ಸ್ನೇಹಿತರು ಹಾಗು ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ ನಮ್ಮ ಹುಡುಗರು.