ಬೆಂಗಳೂರು: ವಿಜಯಪುರ ಜಿಲ್ಲೆಯ ಮಮದಾಪುರದಲ್ಲಿ ಇರುವ 1,494.38 ಎಕರೆ ವಿಸ್ತೀರ್ಣದ ಜೀವವೈವಿಧ್ಯ ಉದ್ಯಾನಕ್ಕೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರನ್ನು ಈಗ ಸರಕಾರದಿಂದ ಅಧಿಕೃತವಾಗಿ ಇಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಬುಧವಾರ ಈ ವಿಚಾರ ತಿಳಿಸಿರುವ ಅವರು, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಮಗೆ ಸದಾ ಮಾರ್ಗದರ್ಶಕರಾಗಿದ್ದರು. ಸರಕಾರದ ಈ ನಿರ್ಧಾರದಿಂದ ಅತೀವ ಸಂತಸವಾಗಿದೆ. ಇನ್ನುಮುಂದೆ ಮಮದಾಪುರ ಉದ್ಯಾನವು ‘ಶ್ರೀ ಸಿದ್ಧೇಶ್ವರ ಸ್ವಾಮೀಜಿ ಜೀವವೈವಿಧ್ಯ ಪರಂಪರೆ ತಾಣ’ ಎಂದು ಕರೆಯಲ್ಪಡಲಿದೆ ಎಂದಿದ್ದಾರೆ.
ಮಮದಾಪುರ ಉದ್ಯಾನವು ನೀರು ಮತ್ತು ಮಣ್ಣಿನ ಸಂರಕ್ಷಣೆ, ಪ್ರಾಣಿ ಮತ್ತು ಪಕ್ಷಿ ಸಂಕುಲಗಳ ಆವಾಸ, ಸ್ಥಳೀಯರ ಜೀವನಕ್ಕೆ ಆಸರೆಯಾಗುರುವ ಅನನ್ಯ ತಾಣವಾಗಿದೆ. ಇದಕ್ಕೆ ಶ್ರೀಗಳ ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿಕೊಂಡಿದ್ದೆ. ಇದಕ್ಕೆ ಅವರು ಕ್ಷಿಪ್ರವಾಗಿ ಸ್ಪಂದಿಸಿದ್ದಾರೆ. ಇದಕ್ಕಾಗಿ ತಾವು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಚಿವರು ನುಡಿದಿದ್ದಾರೆ.