‘ಚೆಂಬೆಳಕಿನ ಕವಿ’ ಖ್ಯಾತಿಯ ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ (93) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಅವರು ದಾಖಲಿಸಲಾಗಿತ್ತು. ಮಂಗಳವಾರ ಅವರ ಆರೋಗ್ಯದ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ರಾತ್ರಿಯಿಡೀ ವೈದ್ಯರ ನಿಗಾದಲ್ಲಿದ್ದ ಈಡಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ 9 ಸುಮಾರಿಗೆ ಕೊನೆಯುಸಿರು ಬಿಟ್ಟಿದ್ದಾರೆ.
ಕಣವಿ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕಳೆದ ವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಸ್‌ಡಿಎಂ ಆಸ್ಪತ್ರೆಗೆ ಭೇಟಿ ನೀಡಿ ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಿದ್ದರು. ಹಾಗೆಯೇ ಮಂಗಳವಾರ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಣವಿ ಅವರ ಆರೋಗ್ಯ ವಿಚಾರಿಸಿದ್ದರು.
ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ೧೯೨೮ರ ಜೂನ್ ೨೮ರಂದು ಜನಿಸಿದ ಇವರು ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದೇ ಪ್ರಸಿದ್ಧಿರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕಾವ್ಯ ಪ್ರಕಾರದಲ್ಲಿ ಕಣವಿ ಅವರಿಗೆ ಪ್ರಿಯವಾದುದು ಸಾನೆಟ್. “ಕಾವ್ಯರಚನೆಯ ಪ್ರಾರಂಭದಿಂದಲೂ ನನ್ನ ಮನಸ್ಸನ್ನಾಕರ್ಷಿಸಿದ ಕಾವ್ಯ ಪ್ರಕಾರ ಸಾನೆಟ್” ಎಂದು ‘ಎರಡು ದಡ’ದ ಮುನ್ನುಡಿಯಲ್ಲಿ ಸ್ವತಃ ಕಣವಿ ಅವರೇ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕವಿತೆ ಜನತೆಗೆ ತಲುಪುವುದು ಅಗತ್ಯ ಎಂದು ಬಯಸುತ್ತಾ ಬಂದ ಕವಿಗಳಲ್ಲಿ ಕಣವಿ ಕೂಡ ಒಬ್ಬರು ಎಂಬುದು ಗಮನಾರ್ಹ.
ಒಟ್ಟಾರೆ ತಮ್ಮ ಸುದೀರ್ಘ ಕಾವ್ಯೋದ್ಯೋಗದಲ್ಲಿ ಕಣವಿಯವರು ಶ್ರೇಷ್ಠವಾದ ಅನೇಕ ಕವಿತೆಗಳನ್ನು ಬರೆದು ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹು ಮುಖ್ಯ ಕವಿಗಳಲ್ಲಿ ಒಬ್ಬರಾಗಿ ಗುರುತಿಸಕೊಂಡು, ಕನ್ನಡ ಸಾರಸ್ವತ ಲೋಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಸಿಎಂ ಸಂತಾಪ
ನಾಡೋಜ ಚೆನ್ನವೀರ ಕಣವಿ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದು, ಸಜ್ಜನಿಕೆಗೆ ಸಾಕಾರಮೂರ್ತಿ ಚೆನ್ನವೀರ ಕಣವಿಯವರು ಮೃದು ಮಾತುಗಳಿಂದಲೇ ಮನಸ್ಸನ್ನು ಗೆಲ್ಲುತ್ತಿದ್ದರು. ಕಣವಿ ಅವರು ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೆಂಗಳೂರಿನಲ್ಲಿ ಸಂತಾಪ ಸೂಚಿಸಿದ್ದಾರೆ.