“ ನೀವು ಥೇಟ್ ನಿಮ್ಮ ತಂದೆಯ ಹಾಗೇ ಕಾಣ್ತೀರ ” ಒಬ್ಬ ಗೆಳೆಯರ ಅನಿಸಿಕೆ. “ ಏನಯ್ಯಾ ನಿಮ್ಮಪ್ಪನ ಫೋಟೋ ನೋಡಿದ್ರೆ ನಿನ್ನನ್ನೇ ನೋಡಿದ ಹಾಗಾಗುತ್ತೆ !! ” ಬಾಲ್ಯದ ಗೆಳೆಯನೊಬ್ಬನ ಮಾತು. 46 ವರ್ಷಗಳ ಹಿಂದೆ ಅಗಲಿದ ನಿನ್ನನ್ನು ನೆನಪಿಸಿಕೊಳ್ಳಲು , ನಿನ್ನೊಡನೆ ಕಳೆದ ಕೆಲವೇ ವರ್ಷಗಳ ಮೆಲುಕು ಹಾಕಲು ಈ ಚಹರೆಯ ಹೋಲಿಕೆಯೂ ಪ್ರಚೋದಿಸುತ್ತದೆ. ನಿಜವೇ ಅಪ್ಪಾ ಬಾಲ್ಯದಲ್ಲೇ ನೆರೆತು ಈಗ ಪಕ್ವವಾಗಿರುವ ನನ್ನ ತಲೆಗೂದಲು ನಿನಗಿದ್ದಂತೆಯೇ ಬೆಳ್ಳಗಿದೆ. ಜೊತೆಗೆ ನಿನ್ನನ್ನು ಕಾಡಿದ ಮಧುಮೇಹವೂ ನನ್ನ ಜೊತೆಗೆ ಸಾಗಿದೆ. ಆದರೆ ನಿನ್ನಂತೆ ನಾನಿರುವೆನೇ ?
ಕನ್ನಡಿಯ ಮುಂದೆ ನಿಂತಾಗ ನಾವು ಮುಖವನ್ನಷ್ಟೇ ನೋಡಿಕೊಳ್ಳುವುದು ವಾಡಿಕೆ. ಇಂದೇಕೋ ಹಿಂಬದಿಯಲ್ಲಿ ಕೆಲವು ಭಾವನೆಗಳು ನರ್ತನವಾಡುತ್ತಿದ್ದಂತೆ ಕಂಡವು. ಬಹುಶಃ ಇದೇ ದಿನ, 46 ವರ್ಷಗಳ ಹಿಂದೆ, ನೀನು ಹಠಾತ್ತನೆ ಅಗಲಿದ ನೆನಪು ಕಾಡಿರಬೇಕು. ಹೌದು ನೆರೆತ ಕೂದಲು, ಸ್ವಲ್ಪ ಮಟ್ಟಿಗೆ ಚಹರೆ ಬಿಟ್ಟರೆ ನಿನ್ನೊಡನೆ ಹೋಲಿಕೆ ಹೇಗೆ ಸಾಧ್ಯ ಅಪ್ಪ ? ನೀನು ಮುಂಜಾವಿನ ಸಂಧ್ಯಾವಂದನೆ-ಪೂಜೆಯ ಹೊರತು ಬಾಗಿಲು ದಾಟುತ್ತಿರಲಿಲ್ಲ. ನನಗೆ ಅದರ ಗಂಧ ಗಾಳಿಯೂ ತಿಳಿದಿಲ್ಲ. ವಿಭೂತಿ ಪಟ್ಟೆ-ಕುಂಕುಮದ ಬೊಟ್ಟು ಇಲ್ಲದ ನಿನ್ನ ಹಣೆ ನೆನಪೇ ಇಲ್ಲ. ನನ್ನ ಹಣೆಗೆ ಅದರ ಪರಿಚಯವೇ ಇಲ್ಲ. ಪ್ರತಿ ಶನಿವಾರ ರಾಮ-ಆಂಜನೇಯ ಎರಡೂ ದೇವಸ್ಥಾನಗಳಲ್ಲಿ ನಿನ್ನಿಂದ ಪೂಜೆ ತಪ್ಪಿದ್ದೇ ಇಲ್ಲ. ಇದು ನನ್ನ ಊಹೆಗೂ ನಿಲುಕದ್ದು. ಆದರೆ ನಿನಗಾಗಿ ಶನಿವಾರದ ವೆಂಕಟೇಶ್ವರ ಸುಪ್ರಭಾತ ಪಠಣ ನನ್ನ ಕರ್ತವ್ಯದಂತೆ ನಿಭಾಯಿಸಿದ್ದಂತೂ ನೆನಪಿದೆ. ಹಾಗೇ ರಾಮಕಥೆಯ ಪಠಣ.
ಬಹುಶಃ ನಿನ್ನ ಅತಿರೇಕದ ನಂಬಿಕೆಗಳೇ ಕಾಲಾನಂತರದಲ್ಲಿ ನನ್ನ ನಾಸ್ತಿಕತೆಗೆ ಬುನಾದಿ ಆಯಿತೆನಿಸುತ್ತದೆ. ಇನ್ನೂ ನೆನಪಿದೆ ಅಪ್ಪ, ಪ್ರತಿ ಶನಿವಾರ ರಾಮ-ಆಂಜನೇಯ ದೇವಸ್ಥಾನಗಳಲ್ಲಿ ಪೂಜೆ ಪ್ರಸಾದಕ್ಕೆ ನಿನ್ನದೇ ಪ್ರಾಯೋಜಕತ್ವ. ಪ್ರಸಾದ (ಚಿತ್ರಾನ್ನ-ಕಡಲೆಕಾಳು ಉಸಲಿ) ಸಂಗ್ರಹ ನನ್ನ ಕೆಲಸ. ಆ ಪುರೋಹಿತರು ಮನೆಯಲ್ಲೇ ತಯಾರಿಸಿದ ಪ್ರಸಾದವನ್ನು ಎಲ್ಲ ʼ ಭಕ್ತಾದಿಗಳಿಗೂʼ ವಿತರಿಸಿ ಸ್ವತಃ ಉಪವಾಸ ಇದ್ದುದನ್ನೂ ಕಣ್ಣಾರೆ ಕಂಡ ನೆನಪಿದೆ. ಆಗ ನೀನು ಅವರ ಮನೆಗೆ ಅಕ್ಕಿ ಬೇಳೆ ಕೊಟ್ಟುಬರುವಂತೆ ನಮ್ಮನ್ನೇ ಕಳಿಸುತ್ತಿದ್ದುದೂ ನೆನಪಿದೆ. ಪ್ರತಿ ಗುರುವಾರ ನೀನು ಶಿಸ್ತಿನ ಸಿಪಾಯಿಯಂತೆ ನಿಂತು ಪಠಿಸುತ್ತಿದ್ದ “ ನೋಡಿದೆ ಗುರುಗಳ ನೋಡಿದೆ ” ಎಂಬ ರಾಘವೇಂದ್ರ ಸ್ತುತಿ ಇಂದಿಗೂ ಗುನುಗುನಿಸುತ್ತದೆ. ಹಾಗೆಯೇ ನೀನು ಶಿವರಾತ್ರಿಯಂದು ಆಚರಿಸುತ್ತಿದ್ದ ಮೂರು ಜಾವದ ಪೂಜೆ, ಅದನ್ನು ನೋಡಲೆಂದೇ ಹೊರಗಿನವರೂ ಬರುತ್ತಿದ್ದ ದಿನಗಳೂ ನೆನಪಿವೆ. ಎರಡೂ ವ್ಯರ್ಥಾಲಾಪಗಳೆಂದು ನನಗೆ ಅರಿವಾಗುವಷ್ಟರಲ್ಲಿ ನೀವು ಹೊರಟುಬಿಟ್ಟಿದ್ದಿರಿ.
ನಾನು ನಿನ್ನಂತೆಯೇ ಕಾಣುತ್ತೇನೆ, ಮುಖಚಹರೆಯಲ್ಲಿ ಆದರೆ ನಿಮ್ಮಂತೆ ನನ್ನ ಬದುಕು ರೂಪಿಸಿಕೊಂಡಿಲ್ಲ. ಅದಕ್ಕೆ ಕಾರಣವೇ ಅತೀತಗಳಲ್ಲಿದ್ದ ನಿಮ್ಮ ಅತಿರೇಕದ ನಂಬಿಕೆ, ಶ್ರದ್ಧೆ, ಭಕ್ತಿ ಮತ್ತು ಸತ್ಯಸಂಧತೆ. ಬದುಕನ್ನು ಹತ್ತಿರದಿಂದ ನೋಡುವ, ಮನುಜ ಸಂಬಂಧಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳಲು ಸಾಧ್ಯವಾಗಿದ್ದು ನೀವು ಪಯಣದ ಹಾದಿಯಲ್ಲಿ ಕಂಡ ಮುಳ್ಳು ಬೇಲಿಗಳನ್ನು ಕಂಡು. ಕಸ್ತೂರಿ ನಿವಾಸದ ರಾಜಕುಮಾರನಂತೆ ನೀನು ಉಪ್ಪರಿಗೆಯಿಂದ ಪಾತಾಳಕ್ಕೆ ಕುಸಿದಾಗ ನೀನೇ ಆದರಿಸಿದ ಯಾರೂ ಬಳಿಗೆ ಸುಳಿಯಲೂ ಇಲ್ಲ ಅಲ್ಲವೇನಪ್ಪ ? ನಿನ್ನ ತಂದೆಯ ತಿಥಿಗೆ ನಾಲ್ಕುಚಕ್ರದ ಮೇಲೆ ಬಂದು ಹೋಗುತ್ತಿದ್ದ ಸೋದರ ಸತ್ತವರಿಗೆ ಪಿಂಡ ಇಟ್ಟು ಹೋಗುತ್ತಿದ್ದರೇ ಹೊರತು ನಿನ್ನ ಕಷ್ಟಸುಖಗಳತ್ತ ಕಣ್ಣೆತ್ತಿಯೂ ನೋಡಿದ ನೆನಪಿಲ್ಲ. ನೀನು ಕಟ್ಟಿದ ಪುಟ್ಟ ಹಿತಕರ ಕೋಟೆಯ ಅಡಿಪಾಯ ಕ್ರಮೇಣ ಸಡಿಲವಾಗಿ ಕೊನೆಗೊಮ್ಮೆ ಪೂರ್ಣ ಕುಸಿದಾಗ ನಿನ್ನೊಡನೆ ನಿಂತವರು ನಿನ್ನ ಸಹೋದ್ಯೋಗಿಗಳೂ ಅಲ್ಲ ಬದಲಾಗಿ ಊರಿನ ಆತ್ಮೀಯರು-ಆಪ್ತರು. ಬಹುತೇಕ ವ್ಯಾಪಾರಸ್ಥರು.
ವ್ಯಾಪಾರಿಗಳಲ್ಲಿ ಔದಾರ್ಯ ಇರುವುದಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಅಲ್ಲಗಳೆಯುವಂತೆ ನಿನ್ನ ಆಪ್ತರು ನಿನ್ನೊಡನೆ ನಿಂತಿದ್ದು, ಅಂತಿಮ ಚಿತಾಸ್ಪರ್ಶದವರೆಗೂ ವಿಸ್ತರಿಸಿದ್ದು ಇಂದಿಗೂ ನೆನಪಿದೆ ಅಪ್ಪ. ದಿನವೂ ಮಾತ್ರೆ ತೆಗೆದುಕೊಳ್ಳುವಾಗ ನಿನ್ನ ಒಂದು ಮಾತು ನೆನಪಾಗುತ್ತೆ ಅಪ್ಪ. ಡಯಾಬಿನೀಸ್ ಹೆಸರಿನ ಒಂದು ಮಾತ್ರೆ ಚಿನ್ನದ ಬಣ್ಣದ ಸ್ಟ್ರಿಪ್‌ನಲ್ಲಿರುತ್ತಿತ್ತು. “ ನೋಡೋ ಮರಿ ಇದೇ ನನ್ನ ಪಾಲಿನ ಚಿನ್ನ, ನನ್ನ ನೆರೆತ ಕೂದಲು ಬೆಳ್ಳಿ ” ಎಂದು ಹೇಳುತ್ತಿದ್ದೆ. ಆಗ ತಮಾಷೆ ಎನಿಸುತ್ತಿದ್ದ ಈ ಮಾರ್ಮಿಕ ಪದಗಳು ನಿನ್ನೊಳಗಡಗಿದ್ದ ವೇದನೆಯ ಅಭಿವ್ಯಕ್ತಿ ಎಂದು ಅರಿವಾಗುವ ವೇಳೆಗೆ ನೀನು ಇಲ್ಲವಾಗಿದ್ದೆ. ನೀನು ಬ್ಯಾಂಕ್ ಹುದ್ದೆಯಲ್ಲಿದ್ದಾಗ ಸಾಲ ಸೌಲಭ್ಯಗಳನ್ನು ಕೊಟ್ಟ ಒಂದು ಕಾರಣಕ್ಕೋ ಏನೋ ಮೆಡಿಕಲ್ ಷಾಪ್‌ನವರೂ ನಿನಗೆ ಔಷಧಿಯನ್ನು ಸಾಲಕೊಡುತ್ತಲೇ ಇದ್ದರು. ( ಎಷ್ಟು ಬಾಕಿ ಇತ್ತು ಎನ್ನುವ ಸತ್ಯ ಇಂದಿಗೂ ತಿಳಿದಿಲ್ಲ. ಆ ಹಿರಿಯರು ಬದುಕಿಲ್ಲ). ಅಷ್ಟೇ ಅಲ್ಲ ಮಕ್ಕಳ ಹಸಿವು ನೀಗಿಸಲು ನೀನು ಸುಂದರ ಕೈಬರಹದಲ್ಲಿ ನೀಡುತ್ತಿದ್ದ ಚೀಟಿಗಳಿಗೆ ಆ ವ್ಯಾಪಾರಿಗಳನೇಕರು ಎಷ್ಟು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರೆಂದರೆ, ಇಂದು ಸಹ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಐದರಿಂದ ಐವತ್ತು ರೂಗಳವರೆಗೂ ಪಡೆದ ನೆನಪಂತೂ ಇದೆ.

ಹೌದು ನಿನ್ನ ಆರ್ಥಿಕ ಪಾತಾಳ ಕುಸಿತ, ಭೌತಿಕ ಅಸಹಾಯಕತೆ ಎರಡಕ್ಕೂ ನೀನು ನಂಬಿದ್ದ, ಪೂಜಿಸಿದ್ದ ಯಾವ ದೈವಶಕ್ತಿಯೂ ನೆರವಾಗಲಿಲ್ಲ. ಹಾಗೆಯೇ ನಿನ್ನ ಹಿರಿಯ ಪುತ್ರನೂ ಕೈಜೋಡಿಸಲಿಲ್ಲ. ನಿನ್ನೊಳಗಿದ್ದ ಆ ಸ್ನೇಹಪರತೆಯೇ ಎಂಟು ಜನರ ಕುಟುಂಬದ ಗಾಲಿಗಳಿಗೆ ಕೀಲೆಣ್ಣೆ ತುಂಬಿಸಲು ನೆರವಾದದ್ದಂತೂ ಹೌದು. ಆ ಗಾಲಿಯ ಚಲನೆಗೆ ಕೈಜೋಡಿಸಿದವರು ಅನೇಕರು. ಆ ಮಹನೀಯರ ಹೆಸರುಗಳು ನೆನಪಿದ್ದರೂ ಹೇಳುವುದಿಲ್ಲ. ಹೇಳಿದರೆ ಅವರ ಔದಾರ್ಯವನ್ನು ಕ್ಲೀಷೆಯಂತೆ ನೋಡಿದಂತಾಗುತ್ತದೆ. ಒಂದಂತೂ ಸ್ಪಷ್ಟವಾಗಿ ಇಂದಿಗೂ ಕಣ್ಣಮುಂದೆ ಬರುವುದು ನಿನ್ನ ಆತ್ಮಸ್ಥೈರ್ಯವೊಂದೇ. ವ್ಯಕ್ತಿಗತ ಸ್ವಾಭಿಮಾನವನ್ನೂ ತ್ಯಾಗ ಮಾಡಿ ಮಕ್ಕಳಿಗಾಗಿ ನೀನು ಚಾಚಿದ ಕೈಗಳಂತೂ ನೆನಪಿದೆ. ಚಾಚಿದ ಅಂಗೈಯ್ಯನ್ನು ಮಡಚಿ, ನಿನ್ನ ಹೆಗಲಿಗೆ ಹೆಗಲು ನೀಡಲು ನಿರಾಕರಿಸಿದ ನಿನ್ನ ಹಿರಿಯ ಸುಪುತ್ರನ ಬಗ್ಗೆಯೂ ನೀನು ಕಟುವಾಗಿ ಮಾತನಾಡಲಿಲ್ಲ ! ಏಕೆ ಎಂದು ಯೋಚಿಸಿದಾಗ ನಿನ್ನ ಸ್ವಾಭಿಮಾನದ ಮತ್ತೊಂದು ಮುಖ ಕಾಣುತ್ತದೆ. “ ಬೋಂಡ ವಡೆ ಮಾಡಿ ನಿನ್ನನ್ನು ಸಾಕ್ತೀನಿ ಕಣೆ ” ಎಂದು ಒಮ್ಮೆ ನೀನು ಅಮ್ಮನಿಗೆ ಹೇಳಿದ್ದು ಇಂದಿಗೂ ನೆನಪಿದೆ.
ನಿನ್ನ ವೃತ್ತಿಯ ಬದುಕು ನಿನಗೆ ನ್ಯಾಯ ದೊರಕಿಸಲಿಲ್ಲ ನಿಜ ಅಪ್ಪ. ಆದರೆ ನಿನ್ನ ಬದುಕಿನ ಹಾದಿಯ ನಿಸ್ಪ್ರಹತೆ, ಪ್ರಾಮಾಣಿಕತೆ, ಸಚ್ಚಾರಿತ್ರ್ಯಗಳು ಸಂಪಾದಿಸಿದ ಆ ಸ್ನೇಹ ಹಸ್ತಗಳು ಎಷ್ಟು ಗಾಢವಾಗಿದ್ದವು ಎಂದು ಅರಿವಾದದ್ದು ನಿನ್ನ ಚಿತೆ ಉರಿದ ನಂತರವೇ. ಹಠಾತ್ತನೆ ನಿನ್ನ ಉಸಿರು ನಿಂತಾಗ ಕಂಗಾಲಾಗಿದ್ದ ನಮ್ಮ ಎಳೆಯ ಮನಸುಗಳಿಗೆ ಅರಿವಾಗದಂತೆಯೇ ನಿನ್ನ ಆಪ್ತರೆಲ್ಲರೂ ಸೇರಿ ಚಿತೆಯನ್ನೂ ಸಿದ್ಧಪಡಿಸಿ, “ ಬಾರಪ್ಪ ಮರಿ, ನೀನೇ ಕೊನೆಯವನಲ್ವೇ , ಕೊಳ್ಳಿ ಇಡು ” ಎಂದು ಕರೆದ ಆ ಕ್ಷಣ ಇವತ್ತಿಗೂ ಸಹ ಒಂದೆರಡು ಕಂಬನಿಯ ನಡುವೆ ತೆರೆದುಕೊಳ್ಳುತ್ತದೆ. ಮೃತದೇಹವನ್ನು ನೋಡಲು ಬಂದು ಹೋದ ನೆಂಟರು ಅಡುಗೆ ಮನೆಯಲ್ಲಿದ್ದ ಒಣಗಿದ ಒಲೆಯನ್ನೂ ನೋಡಲಿಲ್ಲ, ಹಸಿದು ಕಂಗಾಲಾಗಿದ್ದ ನಮ್ಮತ್ತಲೂ ನೋಡಲಿಲ್ಲ. ಬಂದವರಿಗೂ ಸೇರಿ ನಮಗೂ ಅನ್ನ ನೀಡಿದವರು ಅದೇ ನಿನ್ನ ಆಪ್ತರ ಬಳಗ. ನಿನಗೆ ವೈಕುಂಠದ ಹಾದಿ ತೋರಿಸಿದ್ದೂ ಅವರಲ್ಲೇ ಒಬ್ಬರು. 46 ವರ್ಷಗಳೇ ಸಂದು ಹೋಗಿವೆ. ಯಾರನ್ನು ಹೆಸರಿಸಲಿ ? ಬಹುಶಃ ನೀನು ಭಕ್ತಿಯಿಂದ ಪೂಜಿಸಿದ ದೇವರುಗಳೆಲ್ಲರೂ ಅವರಲ್ಲೇ ನೆಲೆಸಿದ್ದರೇನೋ ?
ಹೌದು ಅಪ್ಪಾ, ಈ ನೆನಪುಗಳು ಮಾಸುವುದಿಲ್ಲ. “ ನೀವು ನಿಮ್ಮ ಅಪ್ಪನಂತೆಯೇ ಕಾಣುತ್ತೀರಿ” ಎಂದು ಗೆಳೆಯರು ಹೇಳಿದಾಗಲೆಲ್ಲಾ ನೆನಪಾಗುವುದು ಈ ಕಳೆದುಹೋದ ಕ್ಷಣಗಳು. ಚಹರೆ ಬಿಟ್ಟರೆ ಯಾವ ರೀತಿಯಲ್ಲೂ ನಿನ್ನನ್ನು ಹೋಲಲಾರೆ ಅಪ್ಪಾ. ಪ್ರಾಮಾಣಿಕ ದುಡಿಮೆಯನ್ನು ಮಾತ್ರ ನಿನ್ನಂತೆಯೇ ಅನುಸರಿಸಿದ್ದೇನೆ. ಆ ವ್ಯಕ್ತಿತ್ವವೇ ಅಂತಹದ್ದು. ಹ್ಞಾಂ ಮತ್ತೊಂದು ವಿಷಯ. ಎಂಟು ಮಕ್ಕಳ ಪೈಕಿ ನೀನು ಒಬ್ಬಳ ಮದುವೆ ಮಾತ್ರ ನೋಡಿದೆ. ವಿಧಿ ನಿನಗೆ ಉಳಿದ ಮಕ್ಕಳ ಮದುವೆ ನೋಡುವ ಅವಕಾಶ ನೀಡಲಿಲ್ಲ. ಇಲ್ಲಿ ಕೊಂಚ ಮಟ್ಟಿಗೆ ನಾನು ನಿನ್ನನ್ನು ಹೋಲುತ್ತೇನೆ. ಏಕೆಂದರೆ ಇರುವ ಒಬ್ಬ ಮಗಳ ಮದುವೆಯನ್ನೂ ನಾನು ಕಣ್ಣಾರೆ ನೋಡಲಿಲ್ಲ. ನನ್ನನ್ನು ದೂರ ಇರಿಸಿದ್ದು ವಿಧಿ ಅಲ್ಲ, ಮನುಜ ಜೀವನದಲ್ಲಿ ಸಹಜವಾದ ಸ್ವಾರ್ಥತೆಯ ನಿಧಿ. ಬದುಕನ್ನು ಕಾಡುವ, ಬಾಧಿಸುವ ಪರಿಸ್ಥಿತಿಗಳನ್ನೇ ಬಹುಶಃ ನಾವು ವಿಧಿ ಎಂದುಕೊಳ್ಳುತ್ತೇವೆ , ಅಲ್ಲವೇ ಅಪ್ಪಾ !
ಇದೋ ಕೊನೆಯದಾಗಿ ನಿನ್ನ ನೆನಪಿನಲ್ಲೇ ನೆನಪಾದ ನನ್ನ ಕವಿತೆಯೊಂದಿಗೆ ನಮಿಸುತ್ತೇನೆ
ನನಗೂ
ಅಪ್ಪ
ಇದ್ದರು ,
ಹೋದರೂ,,,
ನನ್ನೊಳಗೇ
ಉಳಿದರು ;
ನಾನೂ
ಅಪ್ಪ
ಆದೆ ,
ಇದ್ದೇನೆ
ಯಾರೊಳಗೂ
ಉಳಿದಿಲ್ಲ ;
ಬದುಕು
ಒಂದು
ಪ್ರಶ್ನೆ ????
-೦-೦-೦-೦-