ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ (N ravikumar) ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini rajanish) ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂಬ ವಿಡಿಯೋ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಬೆಳಿಗ್ಗೆ ಎಲ್ಲಾ ಸರ್ಕಾರದ ಕೆಲಸ ಮಾಡ್ತಾರೆ..ರಾತ್ರಿ ನಂತರ.. ಎಂದು ರವಿಕುಮಾರ್ ಮಾತನಾಡಿರುವ ವಿಡಿಯೋ ಇದಾಗಿದೆ.

ಈ ಬೆನ್ನಲ್ಲೇ ರವಿಕುಮಾರ್ ಈ ಆರೋಪಕ್ಕೆ ಸ್ಪಷ್ಟನೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ತಾವು ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲವೆಂದು ಪತ್ರಿಕಾ ಹೇಳಿಕೆಯಲ್ಲಿ ರವಿಕುಮಾರ್ ತಿಳಿಸಿದ್ದಾರೆ.

ಕೆಲವು ಕಡೆಗಳಲ್ಲಿ ತಮ್ಮ ವಿರುದ್ಧ ತಪ್ಪು ಆರೋಪಗಳನ್ನು ಹರಡಲಾಗುತ್ತಿದೆ ಎಂದು ಆಕ್ಷೇಪಿಸಿರುವ ರವಿಕುಮಾರ್, ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ, ದಾರಿತಪ್ಪಿಸುವ ಮತ್ತು ದುರುದ್ದೇಶಪೂರಿತವಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದಾಗಲೇ ಅವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.