ಮೈಸೂರಿನ ಚಾಮುಂಡಿ ಬೆಟ್ಟದ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಜಿ ಗೃಹ ಸಚಿವ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಚೊಚ್ಚಲ ಸವಾಲು ಒಡ್ಡಿದೆ.
ಹೇಯ ಘಟನೆ ನಡೆದು ಮೂರು ದಿನಗಳು ಕಳೆದರೂ, ಈವರೆಗೆ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಘಟನೆಯ ತನಿಖೆಗಾಗಿ ಡಿಸಿಪಿ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದ್ದು, ಸ್ವತಃ ಎಡಿಜಿಪಿ ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಪಾತಕಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದೆ ಎಂದು ಸರ್ಕಾರ ಹೇಳಿದೆ. ಆರಂಭದ ಉದಾಸೀನ ಹೊರತುಪಡಿಸಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ಧಾರೆ ಎಂಬುದು ಗೊತ್ತಾಗುತ್ತಿದೆ.
ಆದರೆ, ಈ ಪ್ರಕರಣವನ್ನು ಬೊಮ್ಮಾಯಿ ಅವರ ಗೃಹ ಸಚಿವರು ನಿಭಾಯಿಸಿದ ರೀತಿ ವ್ಯಾಪಕ ಟೀಕೆ ಮತ್ತು ಗೊಂದಲಗಳಿಗೆ ಕಾರಣವಾಗಿದೆ. ಇದೇ ಮೊದಲ ಬಾರಿ ಸಚಿವರಾಗಿದ್ದರೂ, ಏಕಾಏಕಿ ಗೃಹ ಖಾತೆಯಂತಹ ಮಹತ್ವದ ಖಾತೆ ಪಡೆದಿರುವ ಆರಗ ಜ್ಞಾನೇಂದ್ರ ಅವರು ಪ್ರಕರಣದ ಕುರಿತು ಪ್ರತಿಕ್ರಿಯಿಸುತ್ತಾ, ಯುವಕ-ಯುವತಿ ರಾತ್ರಿ 7.30ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಆ ವೇಳೆಯಲ್ಲಿ ಅವರು ಅಲ್ಲಿಗೆ ಹೋಗಬಾರದಿತ್ತು” ಎಂದು ಹೇಳಿದ್ದರು. ಗುರುವಾರ ಬೆಳಗ್ಗೆ ಸಚಿವರ ಈ ಹೇಳಿಕೆ ಮಾಧ್ಯಮಗಳ ಮೂಲಕ ಪ್ರಸಾರವಾಗುತ್ತಲೇ ರಾಜ್ಯದಾದ್ಯಂತ ಸಚಿವರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.
ಜೊತೆಗೆ ಅದೇ ವೇಳೆ, ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂಬ ಕಾಂಗ್ರೆಸ್ ಆಗ್ರಹಕ್ಕೆ ಪ್ರತಿಕ್ರಿಯಿಸುತ್ತಾ, “ರೇಪ್ ಆಗಿರುವುದು ಮೈಸೂರಿನಲ್ಲಿ. ಆದರೆ, ಆ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನವರು ನನ್ನ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ..” ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಆರಗ, ಸ್ವತಃ ತಾವಷ್ಟೇ ಅಲ್ಲದೆ, ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನೂ ಮುಜಗರಕ್ಕೆ ಸಿಲುಕಿಸಿದರು.
![](https://pratidhvani.com/wp-content/uploads/2021/08/vijaya-karnataka-3.jpg)
ಒಂದು ಅತ್ಯಾಚಾರದಂತಹ ಪ್ರಕರಣ ನಡೆದಾಗ ಆ ವಿಷಯದ ಬಗ್ಗೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಒಬ್ಬ ಗೃಹ ಸಚಿವರಾಗಿ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಏನನ್ನು ಹೇಳಬೇಕು, ಏನನ್ನು ಹೇಳಬಾರದು ಎಂಬ ವಿವೇಚನೆಯನ್ನೇ ಆರಗ ಕಳೆದುಕೊಂಡಿದ್ದಾರೆ. ಹೆಣ್ಣು ಮಕ್ಕಳು ಎಷ್ಟು ಹೊತ್ತಿಗೆ ಎಲ್ಲಿಗೆ ಹೋಗಬೇಕು? ಹೋಗಬಾರದು? ಎಂಬುದನ್ನು ಬೋಧಿಸುವ ಸಚಿವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳುತ್ತಿದ್ದಾರೆಯೇ? ಪ್ರತಿ ಬಾರಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗಲೂ ಇಂತಹದ್ದೇ ಮಾತುಗಳು ಕೇಳಿಬರುತ್ತವೆ. ಹೆಣ್ಣು ಅಲ್ಲಿಗೆ ಅಷ್ಟೊತ್ತಲ್ಲಿ ಯಾಕೆ ಹೋಗಿದ್ದಳು? ಯಾಕೆ ಅಂತಹ ಬಟ್ಟೆ ತೊಟ್ಟಿದ್ದಳು? ಯಾಕೆ ಒಬ್ಬಳೇ ಹೋಗಿದ್ದಳು? ಎಂಬ ಮಾತುಗಳೇ ಬರುತ್ತವೆ. ಆದರೆ, ಸ್ವತಃ ಗೃಹ ಸಚಿವರಾಗಿ ಆರಗ ಅವರೂ ಅಂತಹದ್ಧೇ ಮಾತುಗಳನ್ನು ಆಡಿರುವುದು ಆಘಾತಕಾರಿ ಎಂಬ ಟೀಕೆಗಳು ವ್ಯಕ್ತವಾಗಿವೆ.
ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಲಾಗದ ತಮ್ಮ ವೈಫಲ್ಯವನ್ನು ಸಚಿವರು ಹೀಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರು ಕೂಡಲೇ ರಾಜೀನಾಮೆ ಕೊಡುವುದು ಒಳಿತು ಎಂಬ ಮಾತುಗಳೂ ಕೇಳಿಬಂದಿವೆ. ಅಲ್ಲದೆ, ಘಟನೆ ಖಂಡಿಸಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ರಾಜ್ಯದ ಮೂಲೆಮೂಲೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು, ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಬೀದಿಗಿಳಿದಿವೆ.
ಪ್ರತಿಭಟನೆಗಳು ಕಾವೇರುತ್ತಲೇ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿಯವರೇ ಮಧ್ಯಪ್ರವೇಶಿಸಿ ಸಚಿವರ ಹೇಳಿಕೆ ಬಗ್ಗೆ ತಮಗೆ ಸಹಮತವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ಗೃಹ ಸಚಿವರಿಗೆ ತಾಕೀತು ಮಾಡಿರುವ ಸಿಎಂ, ಅತ್ಯಾಚಾರ ಪ್ರಕರಣವನ್ನು ತಾವು ಗಂಭೀರವಾಗಿ ತೆಗೆದುಕೊಂಡಿದ್ದು ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಡಿಜಿಪಿ ಮತ್ತು ಕಮೀಷನರ್ ಜೊತೆ ನೇರವಾಗಿ ಮಾತನಾಡಿರುವುದಾಗಿಯೂ, ಮತ್ತು ಪ್ರಕರಣದ ಕುರಿತು ತಮಗೆ ನೇರವಾಗಿ ವರದಿ ನೀಡುವಂತೆ ಸೂಚಿಸಿರುವುದಾಗಿಯೂ ಹೇಳಿದ್ದಾರೆ.
ಸಿಎಂ ಸೂಚನೆಯ ಬಳಿಕ ಗೃಹ ಸಚಿವ ಆರಗ ತಮ್ಮ ಹೇಳಿಕೆಯನ್ನು ವಾಪಸು ಪಡೆದಿರುವುದಾಗಿ ಹೇಳಿ, “ಸಂತ್ರಸ್ತೆ ನನ್ನ ಮಗಳು ಇದ್ದಂತೆ, ನಾನು ಆತಂಕದಿಂದ ಈ ಮಾತು ಹೇಳಿದ್ದೇನೆಯೇ ಹೊರತು ಬೇರೇನಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಅಷ್ಟರಲ್ಲಿ ಸಜ್ಜನ ಸಚಿವ ಆರಗ ಅವರ ಸಚಿವಗಿರಿ ಮತ್ತು ಬಿಜೆಪಿ ಸರ್ಕಾರ ಮತ್ತು ಪಕ್ಷಕ್ಕೆ ಆಗಬೇಕಾದ ಹಾನಿ ಆಗಿಹೋಗಿದೆ.
ಸಂತ್ರಸ್ತೆ ಅಷ್ಟು ಹೊತ್ತಲ್ಲಿ ಅಲ್ಲಿಗೆ ಯಾಕೆ ಹೋಗಿದ್ದರು ಎಂಬುದು ಒಂದು ಕಡೆಯಾದರೆ, ಕಾಂಗ್ರೆಸ್ ನವರು ತಮ್ಮ ಮೇಲೆ ರೇಪ್ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ಮತ್ತೊಂದು ಕಡೆ. ಒಟ್ಟಾರೆ ಈ ಎರಡೂ ಹೇಳಿಕೆಗಳು ಸಚಿವರ ಅಸೂಕ್ಷತೆಯನ್ನು, ಅತ್ಯಾಚಾರದಂತಹ ಒಂದು ಪೈಶಾಚಿಕ ಕೃತ್ಯದ ಭೀಕರತೆಯನ್ನು ಅರಿಯದ ಭೋಳೇತನವನ್ನು ಬಯಲುಮಾಡಿವೆ. ಅದರಲ್ಲೂ ಬಾಲ್ಯದಿಂದ ಆರ್ ಎಸ್ ಎಸ್ ಶಾಖೆಗಳಲ್ಲಿ ಪಳಗಿದ, ಈಗಲೂ ಆರ್ ಎಸ್ ಎಸ್ ಶಿಫಾರಸಿನ ಮೇಲೆಯೇ ಮೊದಲ ಬಾರಿಗೇ ಗೃಹ ಖಾತೆಯಂತಹ ಮಹತ್ವದ ಖಾತೆಯನ್ನು ಪಡೆದ ಆರಗ ಅವರಂಥವರು ಹೆಣ್ಣುಮಕ್ಕಳ ಬಗ್ಗೆ, ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳ ಬಗ್ಗೆ, ಲಿಂಗ ಸಮಾನತೆಯ ಬಗ್ಗೆ ಹೊಂದಿರುವ ಮನೋಸ್ಥಿತಿಯನ್ನೂ ಈ ಹೇಳಿಕೆಗಳು ಬಯಲುಮಾಡಿವೆ ಎಂಬ ಕಟು ಟೀಕೆಗಳೂ ಕೇಳಿಬಂದಿವೆ. ಹಾಗೇ ಗೃಹ ಸಚಿವರಂಥ ಸೂಕ್ಷ್ಮ ಸ್ಥಾನಕ್ಕೆ ನೇಮಕ ಮಾಡುವಾಗ ಅನುಭವ ಮತ್ತು ಸಾಮಾಜಿಕ ಪ್ರಜ್ಞೆ ಎಂಬುದು ಎಷ್ಟು ಮುಖ್ಯ ಎಂಬುದಕ್ಕೆ ಕೂಡ ಈ ಘಟನೆ ನಿದರ್ಶನವಾಗಿದೆ.
Also read: ಅತ್ಯಾಚಾರಕ್ಕಿಂತಲೂ ಘೋರ ಈ ಧೋರಣೆ ಮನಸ್ಥಿತಿ
ವಾಸ್ತವವಾಗಿ ಹೆಣ್ಣು ಮಕ್ಕಳು ಸಂಜೆ, ರಾತ್ರಿ, ಒಬ್ಬರೇ ಅಲ್ಲಿ ಯಾಕೆ ಹೊಗಿದ್ದರು, ಇಲ್ಲಿಗೆ ಯಾಕೆ ಬಂದಿದ್ದರು ಎಂದು ಪ್ರಶ್ನಿಸುವುದೇ ಪರೋಕ್ಷವಾಗಿ ಅವರು ಮುಕ್ತವಾಗಿ ಓಡಾಡುವಂತಹ ಕಾನೂನು ವ್ಯವಸ್ಥೆ ಸಮಾಜದಲ್ಲಿ ಇಲ್ಲ ಎಂಬುದನ್ನು ಒಪ್ಪಿಕೊಂಡಂತೆ. ಅದರಲ್ಲೂ ಒಬ್ಬ ತಂದೆಯ ಸ್ಥಾನದಲ್ಲಿ ನಿಂತು ಆ ಮಾತು ಹೇಳಿದ್ದೇನೆ ಎಂಬ ಅವರ ಸ್ಪಷ್ಟನೆ ಕೂಡ ಮತ್ತೆ, ಹೆಣ್ಣು ಮಕ್ಕಳು ಸಂಜೆ ಹೊರಹೋಗುವ ಬಗ್ಗೆ ಪೋಷಕರಾಗಿ ಭಯವಿದೆ ಎಂಬುದನ್ನು ಹೇಳುತ್ತದೆ. ಮಕ್ಕಳು ಮನೆಯಿಂದ ಹೊರಹೋದರೆ ಪೋಷಕರು ಭಯಪಡುವ ಸ್ಥಿತಿ ಇದೆ ಎಂದರೆ, ಆ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇಲ್ಲ ಎಂದೇ ಅರ್ಥವಲ್ಲವೆ? ಹಾಗಿದ್ದರೆ ಅಂತಹ ದುರವಸ್ಥೆಗೆ ಹೊಣೆಯಾಗಬೇಕಾದವರು ಮತ್ತದೇ ಗೃಹ ಸಚಿವರೇ ಅಲ್ಲವೆ? ಎಂಬುದು ಪ್ರಶ್ನೆ.
ಆರ್ ಎಸ್ ಎಸ್ ಗರಡಿಯಲ್ಲಿ ಬೆಳೆದ ಸಚಿವ ಆರಗ ಅವರ ಸಾಮಾಜಿಕ ಗ್ರಹಿಕೆಯನ್ನು ಪರೀಕ್ಷೆಗೊಡ್ಡಿದ ಇಂತಹ ಪ್ರಶ್ನೆಗಳ ಜೊತೆಗೆ, ಬಹಳ ಮುಖ್ಯವಾಗಿ ಗೃಹ ಸಚಿವರಾಗಿ ಆರಗ ಅವರ ಮೊಟ್ಟಮೊದಲ ಅವಕಾಶಕ್ಕೇ ಈ ಪ್ರಕರಣ ಮಸಿ ಕಪ್ಪು ಚುಕ್ಕೆಯಾಗಲಿದೆ ಎಂಬುದನ್ನಂತೂ ತಳ್ಳಿಹಾಕಲಾಗದು. ಏಕೆಂದರೆ, ಈಗಾಗಲೇ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಅತ್ಯಾಚಾರ ಪ್ರಕರಣದ ಕುರಿತ ಎಲ್ಲಾ ಮಾಹಿತಿಯನ್ನು ನೇರವಾಗಿ ತಮಗೆ ವರದಿ ಮಾಡುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅಂದರೆ, ಸ್ವತಃ ಮುಖ್ಯಮಂತ್ರಿಗಳಿಗೇ ಗೃಹ ಸಚಿವರ ಕಾರ್ಯನಿರ್ವಹಣೆಯ ಮೇಲೆ ನಂಬಿಕೆ ಇಲ್ಲ ಎಂಬ ಸಂದೇಶ ಈಗಾಗಲೇ ರವಾನೆಯಾಗಿದೆ!
![](https://pratidhvani.com/wp-content/uploads/2021/08/pratidhvani_2021-02_b25805e8-d9f8-421e-a7cb-a15b7e6f7742_pratidhvani_2020_09_17f09c37_524c_4aa5_a9f7_60fb07975af5_Support_us_Banner_New_3.png)
ವ್ಯಕ್ತಿಗತವಾಗಿ ಸಭ್ಯರು, ಸೌಜನ್ಯದ ನಡವಳಿಕೆಯವರೂ ಆಗಿದ್ದರೂ, ಆರಗ ಜ್ಞಾನೇಂದ್ರ ಅವರಿಗೆ ಕಠಿಣ ಪರಿಸ್ಥಿತಿಗಳನ್ನು, ಸೂಕ್ಷ್ಮ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು? ಅದರಲ್ಲೂ ಮೂರು ಹೊತ್ತೂ ಕ್ಯಾಮರಾ ಕಣ್ಣುಗಳು ನೆಟ್ಟಿರುವ ಈಗಿನ ಡಿಜಿಟಲ್ ಹದ್ದಿನಕಣ್ಣಿನ ಕಾಲದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು? ಯಾವ ಮಾತನ್ನು ಆಡಬೇಕು ಮತ್ತು ಯಾವುದನ್ನು ಆಡಬಾರದು? ಅದರಲ್ಲೂ ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಎಂತಹ ಸೂಕ್ಷ್ಮತೆ ಹೊಂದಿರಬೇಕು? ಎಂಬ ವಿಷಯದಲ್ಲಿ ಇನ್ನೂ ಅನುಭವ ಸಾಲದು ಎಂಬುದನ್ನು ಈ ಪ್ರಕರಣ ಎತ್ತಿತೋರಿಸಿದೆ.
ವೈಯಕ್ತಿಕವಾಗಿ ಆರಗ ವ್ಯಕ್ತಿತ್ವಕ್ಕೆ, ಗೃಹ ಸಚಿವ ಸ್ಥಾನಮಾನಕ್ಕೆ ಮತ್ತು ಬಿಜೆಪಿ ಪಕ್ಷ ಮತ್ತು ಸರ್ಕಾರಕ್ಕೆ ಸದ್ಯಕ್ಕಂತೂ ಹಾನಿಯಾಗಿದೆ. ಗೃಹ ಸಚಿವರ ರಾಜೀನಾಮೆಗೆ ರಾಜ್ಯದೆಲ್ಲೆಡೆ ಒತ್ತಡ ಹೆಚ್ಚತೊಡಗಿದೆ. ಈಗಾಗಲೇ ಬಿಜೆಪಿ ಮತ್ತು ಆರ್ ಎಸ್ ಎಸ್ ಆಂತರಿಕ ವಲಯದಲ್ಲಿ ಕೂಡ ಆರಗ ಹೇಳಿಕೆಯ ಬಗ್ಗೆ ಅಸಮಾಧಾನದ ಮಾತುಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ಒಂದೇ ಬಾರಿಗೆ ಗೃಹ ಸಚಿವ ಸ್ಥಾನದ ಬಂಪರ್ ಲಾಟರಿ ಹೊಡೆದಿದ್ದ ಆರಗ ಅವರ ಕೈತಪ್ಪಲಿದೆಯೇ ಗೃಹ ಖಾತೆ ಎಂಬುದನ್ನು ಕಾದುನೋಡಬೇಕಿದೆ.