
ಲೋಕಸಭೆ ಎಲೆಕ್ಷನ್ ಗೆ ಸರ್ವ ಸಿದ್ಧತೆ ನಡೆಸಲಾಗಿದೆ. ಬುಧವಾರ ಮೊದಲ ಹಂತದ ಎಲೆಕ್ಷನ್ ನಡೆಯೋ ಕಡೆ ಬಹಿರಂಗ ಪ್ರಚಾರ ಅಂತ್ಯವಾಗ್ತಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರ ಓಲೈಕೆಯಲ್ಲಿ ಮಗ್ನರಾಗಿದ್ದಾರೆ..ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರ ಮೈಸೂರಲ್ಲಿ ಮತದಾನಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ
ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮೂರು ದಿನ ಬಾಕಿ ಇದ್ದು, ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ನಡುವೆ ಮೈಸೂರು-ಕೊಡಗು ಕ್ಷೇತ್ರದ ಮತಗಟ್ಟೆಗಳ ಸಂಖ್ಯೆ, ಮತದಾರರ ಸಂಖ್ಯೆ, ಭದ್ರತೆ, ಸಿದ್ದತೆ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಮಾಹಿತಿ ನೀಡಿದ್ದಾರೆ.ಲೋಕಸಭಾ ಚುನಾವಣೆಗೆ ಸಿದ್ದತೆ ಕುರಿತು ಮೈಸೂರು ಜಿಲ್ಲಾಧಿಕಾರಿ ಡಾ ಕೆ. ವಿ ರಾಜೇಂದ್ರ ಅವರು ಇಂದು ಸುದ್ದಿಗೋಷ್ಠಿ ನಡೆಸಿದ್ದು, ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಉಪಸ್ಥಿತರಿದ್ದರು.ಈ ವೇಳೆ ಮಾತನಾಡಿದ ಮಾಹಿತಿ ನೀಡಿದ ಡಿಸಿ ಕೆ.ವಿ ರಾಜೇಂದ್ರ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2092222. ಈ ಪೈಕಿ ಪುರುಷರು 1026324, ಮಹಿಳೆಯರು 1065714, ಇತರರು 184 ಮಂದಿ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2202 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದ್ದು 9809 ಮತಗಟ್ಟೆ ಸಿಬ್ಬಂದಿಗಳನ್ನ ನೇಮಕ ಮಾಡಲಾಗಿದೆ.ಏಪ್ರಿಲ್ 26ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ ಚಲಾಯಿಸಲು ಅವಕಾಶವಿದೆ. ಮತಚಲಾಯಿಸಿದ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲು ವ್ಯವಸ್ಥೆ ಮಾಡಲಾಗಿದೆ. 473 ಕೆ ಎಸ್ ಆರ್ ಟಿ ಸಿ ಬಸ್ ಗಳು, 33 ಜೀಪ್ ಗಳು, 79 ಮಿನಿ ಬಸ್ ಗಳನ್ನ ಬಳಕೆ ಮಾಡಲಾಗುತ್ತಿದೆ ಎಂದು ಡಾ.ಕೆ.ವಿ ರಾಜೇಂದ್ರ ತಿಳಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 2202 ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದ್ದು, 2202 ಮತಗಟ್ಟೆಗಳ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತು ಮಾಡಲಾಗಿದೆ ಎಂದರು.











