ಕೃಷ್ಣಮಣಿ
ಮೈಸೂರು ಸ್ಯಾಂಡಲ್ ಸೋಪ್ ಹೈದ್ರಾಬಾದ್‌ನಲ್ಲಿ ನಕಲಿಯಾಗಿ ಮಾರಾಟ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ರು. ಕೆಎಸ್‌ಡಿಎಲ್ ಎಂಡಿ ಪ್ರಶಾಂತ್‌ಗೆ ಎಂ.ಬಿ ಪಾಟೀಲ್ ಮಾಹಿತಿ ನೀಡಿದ್ದರು. ತನಿಖೆ ಮಾಡಿದಾಗ ಹೈದರಾಬಾದ್‌ನಲ್ಲಿ ಜಾಲ ಇರುವುದು ಪತ್ತೆಯಾಗಿತ್ತು. ಈ ಸುಳಿವಿನ ಆಧಾರದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಕಾರ್ಖಾನೆಗೆ ಹೋಗಿ ಖರೀದಿ ಮಾಡುವ ಭರವಸೆ ಕೊಟ್ಟಿದ್ದರು. ಕಾರ್ಖಾನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ದಾಳಿ ನಡೆಸಿ ಸೀಝ್ ಮಾಡಿದ್ದರು. ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ FIR ದಾಖಲಾಗಿದೆ. ರಾಕೇಶ್ ಜೈನ್ ಹಾಗೂ ಮಹಾವೀರ್ ಜೈನ್ ಎಂಬುವರ ಮೇಲೆ FIR ಆಗಿದೆ. ರಾಕೇಶ್ ಹಾಗೂ ಮಹಾವೀರ್ ಜೈನ್ ಇಬ್ಬರೂ ಬಿಜೆಪಿಯ ಸಕ್ರಿಯ ನಾಯಕರು ಎಂದಿದ್ದರು.

ಮಣಿಕಂಠ ರಾಥೋಡ್‌ಗೂ ಲಿಂಕ್ ಕೊಟ್ಟಿದ್ದ ಸಚಿವರು
ಮೈಸೂರು ಸ್ಯಾಂಡಲ್ ಸೋಪ್ ನಕಲಿ ಮಾಡಿದ್ದ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಶಾಸಕ ರಾಜಾಸಿಂಗ್ ಮತ್ತು ಕಲಬುರಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್, ಬಿಜೆಪಿಯ ವಿಠಲ್ ನಾಯಕ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರ ಜೊತೆಗಿನ ಫೋಟೋ ಕೂಡಾ ಇದೆ ಎಂದು ತೋರಿಸಿದ್ರು ಸಚಿವ ಪ್ರಿಯಾಂಕ್ ಖರ್ಗೆ. ಮೈಸೂರು ಸ್ಯಾಂಡಲ್ ಸೋಪ್ ರಾಜ್ಯದ ಹೆಮ್ಮೆಯ ಪ್ರೊಡೆಕ್ಟ್ ಆಗಿದೆ. ಕರ್ನಾಟಕದ ಆಸ್ತಿ ಮಾರಾಟಕ್ಕೆ ಬಿಜೆಪಿ ನಾಯಕರು ತಯಾರಾಗಿದ್ದಾರೆ ಅನಿಸುತ್ತದೆ. ಕೊರೊನಾ ಸಂದರ್ಭದಲ್ಲಿ ಹೆಣದ ಮೇಲೆ ಹಣ ಮಾಡಿದ್ದರು. ಈಗ ಈ ರೀತಿ ಕರ್ನಾಟಕದ ಹೆಮ್ಮೆಯ ಬ್ರಾಂಡ್ ನಕಲಿ ಮಾಡಿ ಹಣ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದರು.

‘ಹಣಕ್ಕಾಗಿ ಬಿಜೆಪಿಗರು ಏನು ಬೇಕಿದ್ರೂ ಮಾಡ್ತಾರೆ’
ಬಿಜೆಪಿ ನಾಯಕರ ಜೊತೆಗೆ ಇರುವ ಫೋಟೋ ಪ್ರದರ್ಶನ ಮಾಡಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಏಕೆ ಇಂತಹ ವಂಚನೆ ಮಾಡುವವರು ಬಿಜೆಪಿ ಜೊತೆಗೆ ಕಾಣಿಸಿಕೊಳ್ಳುತ್ತಾರೆ..? ಎಂದು ಪ್ರಶ್ನಿಸಿದ್ದರು. ಜೊತೆಗೆ ರಾಜ್ಯದ ಆಸ್ತಿ ಮಾರಾಟಕ್ಕೆ ಹೊರಟವರಿಗೆ ಯಾಕೆ ಟಿಕೆಟ್ ಕೊಡ್ತಿದ್ದೀರಿ..? ನಿಮ್ಮ ಎಲ್ಲಾ ವ್ಯವಹಾರ ಇಂತವರ ಬಳಿ ಇದೆ. ಅದೇ ಕಾರಣಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಲ್ಲಿ ನಿಮ್ಮ ಪಾಲು ಇದೆ ಎಂದು ತೋರಿಸುತ್ತದೆ. ಕರ್ನಾಟಕದ ಗೌರವ ಅಡ ಇಟ್ಟು ಎಷ್ಟು ಹಣ ಗಳಿಸ್ತಿದ್ದೀರಾ..? ಮೈಸೂರು ಸ್ಯಾಂಡಲ್ ನಕಲಿ ಮಾರಾಟ ಜಾಲ ಬಿಜೆಪಿಗರೇ ನಡೆಸಲ್ಲ ಎಂಬುದಕ್ಕೆ ಏನು ಗ್ಯಾರಂಟಿ..? ಕರ್ನಾಟಕದ ಮರ್ಯಾದೆ ಮಾರಾಟಕ್ಕೆ ಇಟ್ಟವರ ಪರವಾಗಿ ರಾಮ ಭಕ್ತರು ಎಂದು ಬೀದಿಗೆ ಇಳಿಯುತ್ತೀರಾ..? ಬಿಜೆಪಿಗರು ಕನ್ನಡ ವಿರೋಧಿಗಳು. ಹಣಕ್ಕೋಸ್ಕರ ಯಾವುದೇ ಕೆಲಸಕ್ಕೂ ಹೇಸುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಉತ್ತರ ಕೊಡಬೇಕು ಎಂದು ಆಗ್ರಹ ಮಾಡಿದ್ದರು.

ಪರಿಶೀಲನೆ ಮಾಡದೆ ಸಿಕ್ಕಿಬಿದ್ರಾ ಮಿನಿಸ್ಟರ್ ಪ್ರಿಯಾಂಕ್..?
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್ ಆಕ್ರೋಶ ಹೊರ ಹಾಕಿದ್ದು, ಪ್ರಿಯಾಂಕ್ ಖರ್ಗೆಯನ್ನು ಪಾಗಲ್ ಪ್ರಿಯಾಂಕ್, ಮೆಂಟಲ್ ಪ್ರಿಯಾಂಕ್, ಪಪ್ಲು ಪ್ರಿಯಾಂಕ್, ಪಿಕೆ ಪ್ರಿಯಾಂಕ್ ಎಂದು ಬಾಯಿಗೆ ಬಂದಂತೆ ವಾಗ್ದಾಳಿ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್ ತೀವ್ರ ವಾಗ್ದಾಳಿ ಮಾಡಿದ್ದು, ನನ್ನ ಒಂದೂ ಕೂದಲು ಅಲುಗಾಡಿಸಲು ನಿನ್ನಿಂದ ಆಗಲ್ಲ. ನೀವು ಹೇಳ್ತಿರೋ ಆರೋಪಿ ಮಹಾವೀರ ಜೈನ್ ನನ್ನ ಸ್ನೇಹಿತ ಅಲ್ಲ. ನೀವು ಫೋಟೋ ತೋರಿಸುವ ಮಹಾವೀರ ಜೈನ್ ನನ್ನ ಸ್ನೇಹಿತನಲ್ಲ. ನನಗೆ ಮಹಾವೀರ್ ಜೈನ್ ಅನ್ನೋ ಸ್ನೇಹಿತ ಇದ್ದಾರೆ. ಆದರೆ ಅವರು ಈ ಪ್ರಕರಣದಲ್ಲಿ ಇಲ್ಲ.. ಮಹಾವೀರ್ ತಂದೆ ಹೆಸರನ್ನು ನೋಡಿದ್ರೆ ಗೊತ್ತಾಗುತ್ತೆ ಎಂದು ಆಧಾರ್ ಕಾರ್ಡ್ ಹಾಗು FIR ಪ್ರತಿಯಲ್ಲಿದ್ದ ಹೆಸರನ್ನು ಹೋಲಿಕೆ ಮಾಡಿ ತೋರಿಸಿದ್ದಾರೆ. ಒಟ್ಟಾರೆ ಮಣಿಕಂಠ ರಾಥೋಡ್ ಎದುರು ಪ್ರಿಯಾಂಕ್ ಖರ್ಗೆ ಜಾರಿ ಬಿದ್ದಂತಾಗಿದೆ.