ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಜಮೀನು ಮಾಡೋದು, ನಿವೇಶನ ಮಾಡೋದು ನೋಡಿದ್ದೀರಿ ಆದರೆ ಮೈಸೂರಿನಲ್ಲಿ ಪಾರ್ಕ್ ಅನ್ನೇ ನಿವೇಶನವನ್ನಾಗಿ ಫೋರ್ಜರಿ ಮಾಡಿ ರಿಜಿಸ್ಟರ್ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಮೈಸೂರಿನ ಅಯ್ಯಜ್ಜಯ್ಯನಹುಂಡಿಯಲ್ಲಿ ಸರ್ವೇ ನಂಬರ್ 1/1 ರ ಪೈಕಿ 4 ಎಕರೆ 39 ಗುಂಟೆ ಜಮೀನಿದ್ದು ನಿವೇಶನಗಳನ್ನು ಮಾಡಿದ್ದರು. ಪಾರ್ಕ್ ಗೆ ಅಂತಲೇ ಪ್ರತ್ಯೇಕ ಜಾಗವನ್ನು ಬಿಡಲಾಗಿತ್ತು. ನಂತರ ಬಡಾವಣೆಯ ಮಾಲೀಕರು ಪಾರ್ಕ್ ಅನ್ನೇ ನಿವೇಶನವನ್ನಾಗಿ ಬದಲಿಸಿ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅಯ್ಯಜ್ಜಯ್ಯನಹುಂಡಿ ಗ್ರಾಮದಲ್ಲಿ ಸರ್ವೆ ನಂಬರ್ 1/1 ರ 4 ಎಕರೆ 39 ಗುಂಟೆ ಜಮೀನಿಲ್ಲಿ ಮೊದಲು 62 ನಿವೇಶನಗಳಿಗೆ ಮುಡಾ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಪಾರ್ಕ್‌ಗೆ ಎಂದು ಪ್ರತ್ಯೇಕವಾಗಿ ಜಾಗ ಮೀಸಲಿರಿಸಿದ್ದು ಈಗ ಇದನ್ನು ಕೂಡ ಬಡಾವಣೆಯ ಮಾಲೀಕರು ನಿವೇಶನವನ್ನಾಗಿ ಬದಲಿಸಿ ಅಕ್ರಮ ಎಸಗಿದ್ದಾರೆ.

ಸರ್ವೆ ನಂಬರ್ 1/1 ರಲ್ಲಿ ಕೇವಲ 62 ನಿವೇಶನಗಳಿದ್ದು ಮಿಕ್ಕ 6 ಹೆಚ್ಚುವರಿ ನಿವೇಶನವನ್ನು, ಅಂದರೆ (ನಿ. ಸಂಖ್ಯೆ, 63,64,65,66,67 ಮತ್ತು 68)ಅನ್ನು ಪಾರ್ಕ್ ನಿಂದ ಅಕ್ರಮವಾಗಿ ನಿವೇಶನವನ್ನಾಗಿ ಬದಲಿಸಿ ಮಾರಾಟ ಮಾಡಿದ್ದಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.
ಸದರಿ ಈ ಬಡಾವಣೆಗೆ ಸಂಬಂಧಪಟ್ಟಂತೆ ಸಂಬಂಧಿಸಿದವರಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ ಮತ್ತು ಮುಂದಿನ ಆದೇಶದವರೆಗೂ ಈ ನಿವೇಶನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನೋಂದಣಿ ಮಾಡಬಾರದು ಎಂದು ಸಂಬಂಧ ಪಟ್ಟ ಉಪ ನೋಂದಣಾಧಿಕಾರಿಗಳಿಗೆ ಪ್ರಾಧಿಕಾರ ಆದೇಶದಲ್ಲಿ ತಿಳಿಸಿದೆ.
ಪಾರ್ಕ್ ಜಾಗವನ್ನು ನಿವೇಶನ ಎಂದು ಖಾತೆ ಮಾಡಿರುವ ಮುಡಾ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿರುವ ಶಂಕೆ ಕಂಡು ಬಂದಿದ್ದು ಈ ಕುರಿತು ಅಧಿಕಾರಿಗಳು ಮುಂದೆ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ನೋಡಬೇಕಿದೆ.