ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೇಯರ್ ಆನ್ ಲೈನ್ ಅದಾಲತ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಕಾರ್ಯಕ್ರಮದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಲಾಯಿತು.
ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೇಯರ್ ಶಿವಕುಮಾರ್, ನಗರಪಾಲಿಕೆಗೆ ಸಂಬಂಧಿಸಿದ ಕೆಲಸಗಳಿಗೆ, ಕುಂದುಕೊರತೆ ನಿವಾರಣೆಗೆ ಹಾಗೂ ದಾಖಲೆಗಳನ್ನು ಕೋರಿ ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ನೆರವಾಗಲು (ಮೇಲ್ಮನವಿ ಸಲ್ಲಿಸಲು) ಮೇಯರ್ ಆನ್‌ಲೈನ್ ಅದಾಲತ್ ಎಂಬ ವಿನೂತನ ಕಾರ್ಯಕ್ರಮಕ್ಕೆ ಬುಧವಾರದಿಂದ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪಾಲಿಕೆಯ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವವರು ವಿಳಂಬವಾಗಿರುವ ಕುರಿತು ಆನ್‌ಲೈನ್ ಅದಾಲತ್’ನಲ್ಲಿ ತಿಳಿಸಬಹುದು. ಇದಕ್ಕೆ 30 ದಿನಗಳವರೆಗ ಅವಕಾಶವಿದೆ. ಇರುವಲ್ಲಿಂದಲೇ ದೂರು ದಾಖಲಿಸಬಹುದು. ಸಂಬಂಧಿಸಿದ ಅಧಿಕಾರಿಗಳು ಅದಕ್ಕೆ ಸ್ಪಂದಿಸುತ್ತಾರೆ. ಅರ್ಜಿ ವಿಲೇವಾರಿ ಆಗಿದೆಯೇ ಇಲ್ಲವೇ ಎನ್ನುವುದನ್ನು ನಾನೂ ಮೇಲ್ವಿಚಾರಣೆ ನಡೆಸುತ್ತೇನೆ ಎಂದು ಹೇಳಿದರು.
ಕೇಂದ್ರ ಕಚೇರಿ ಹಾಗೂ ಎಲ್ಲ ವಲಯ ಕಚೇರಿಗಳಲ್ಲೂ ಸಾರ್ವಜನಿಕರ ಅದಾಲತ್ ನಡೆಸಿದ್ದೆವು. ಆದರೂ ದೂರುಗಳು ಬರುತ್ತಿವೆ. ಹೀಗಾಗಿ ಹೊಸ ರೀತಿಯಲ್ಲಿ ಸ್ಪಂದಿಸಲು ಆನ್’ಲೈನ್ ವೇದಿಕೆ ಬಳಸಿಕೊಳ್ಳುತ್ತಿದ್ದೇವೆ. ಇಲ್ಲಿನವರಾಗಿದ್ದು, ಕೆಲಸ ಮೊದಲಾದ ಕಾರಣಗಳಿಂದ ಬೇರೆ ನಗರಗಳಲ್ಲಿ ಇರುವವರು, ಕಚೇರಿಗೆ ಬಾರಲು ಆಗದಿರುವವರನ್ನು ಗಮನದಲ್ಲಿಟ್ಟುಕೊಂಡು ಈ ಅದಾಲತ್ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನೇರವಾಗಿ ಬರಲು ಸಾಧ್ಯವಾಗದವರು ಬಳಸಿಕೊಳ್ಳಬೇಕು. http://bit.ly/MCCMayor ಲಿಂಕ್ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅಲ್ಲಿನ ಕ್ಯೂ ಆರ್ ಕೋಡ್ ಕೂಡ ಸ್ಕ್ಕಾನ್ ಮಾಡಿ ಸಲ್ಲಿಸಬಹುದು. ಜನರು ಅಲೆದಾಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅರ್ಜಿಗಳನ್ನು ವಿಲೇವಾರಿ ಮಾಡಲೆಂದೇ ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ನಿತ್ಯವೂ ಫಾಲೋಅಪ್ ಮಾಡಲಾಗುವುದು. ಬಾಕಿ ಇದ್ದರೆ ಗುರುತಿಸಿ, ಕೆಲಸ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ–ಸಿಬ್ಬಂದಿಗೆ ಸೂಚಿಸಲಾಗುವುದು. ಅದಾಲತ್ ಸಂದರ್ಭದಲ್ಲಿ ವಲಯ ಕಚೇರಿ–6ರ ಆರ್’ಐ ನಯನ ತೆರಿಗೆ ಕಟ್ಟಿಸಿಕೊಳ್ಳಲು ಅಲೆದಾಡಿಸುತ್ತಿದ್ದುದು ಕಂಡುಬಂದಿತ್ತು. ಅದರನ್ನು ಅಲ್ಲಿಂದ ರಿಲೀವ್ ಮಾಡಲಾಗಿದೆ. ಈ ಅದಾಲತ್’ನಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಾಲಿಕೆಯಲ್ಲಿ ಎಲ್ಲ ವ್ಯವಸ್ಥೆಯೂ ಸುಧಾರಿಸಿದೆ ಎಂದು ಹೇಳುವುದಿಲ್ಲ. ನ್ಯೂನತೆಗಳಿವೆ. ಹೀಗಾಗಿಯೇ, ಸುಧಾರಣೆಗೆ ಮತ್ತು ಸಾರ್ವಜನಿಕರಿಗೆ ಸ್ಪಂದಿಸಲು ಅದಾಲತ್ ಮೊದಲಾದವುಗಳನ್ನು ನಡೆಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ವ್ಯವಸ್ಥೆ ಸುಧಾರಿಸಿಲ್ಲ. ಸಣ್ಣ ಸಣ್ಣ ಕಾರಣದಿಂದ ಅರ್ಜಿಗಳನ್ನು ವಿಲೇವಾರಿ ಮಾಡಿಲ್ಲ ಎನ್ನುವುದು ಅದಾಲತ್ ನಡೆಸಿದ ಸಂದರ್ಭದಲ್ಲಿ ಗೊತ್ತಾಗಿದೆ. ಈಗ, ಸುಧಾರಿಸಲು ಅವಕಾಶ ಕೊಟ್ಟಿದ್ದೇನೆ. ವಿಳಂಬ ಧೋರಣೆ ಅಥವಾ ನಿರ್ಲಕ್ಷ್ಯ ಮುಂದುವರಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಾಲಿಕೆಯ ಆಡಳಿತ ಪಕ್ಷದ ನಾಯಕಿ ಅಶ್ವಿನಿ ಅನಂತು, ಎಸ್’ಇ ಮಹೇಶ್, ಉಪ ಆಯುಕ್ತೆ ರೂಪಾ ಇದ್ದರು.