ಮೈಸೂರಿನ ಸಭೆಯಲ್ಲಿ ಅಮಿತ್ ಷಾ ಕೊಟ್ಟ ಮೂರು ಸಲಹೆಗಳು ಏನು..? ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದುಕೊಂಡಿವೆ. ಹೀಗಾಗಿ ರಾಷ್ಟ್ರೀಯ ಬಿಜೆಪಿ ನಾಯಕರು ರಾಜ್ಯದ ಕಡೆಗೆ ಗಮನ ಕೊಟ್ಟಿದ್ದಾರೆ. ಲೋಕಸಮರಕ್ಕೂ ಮುನ್ನ ಬಿಜೆಪಿ ಚಾಣಕ್ಯನ ತಂತ್ರಗಾರಿಕೆ ಮಾಡಲು ಸುತ್ತೂರು ಜಾತ್ರೆ ನೆಪದಲ್ಲಿ ಮೈಸೂರಿಗೆ ಬಂದಿದ್ದು, ಟಿಕೆಟ್ ಹಂಚಿಕೆ ಹಾಗು ಜೆಡಿಎಸ್ ಜೊತೆಗೂಡಿ ಕೈಗೊಳ್ಳಬೇಕಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಲೋಕಸಭಾ ಚುನಾವಣೆಗೆ ಹಳೇ ಮೈಸೂರು ಭಾಗದಿಂದ ರಣಕಹಳೆ ಮೊಳಗಿಸಿದ್ದು,

ಬಿಜೆಪಿಯನ್ನ ಗೆಲ್ಲಿಸೋ ಬಗ್ಗೆ ಮೈಸೂರಿನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಮೈಸೂರಿನ ಱಂಡಿಸನ್ ಬ್ಲೂ ಹೋಟೆಲ್ನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎಲೆಕ್ಷನ್‌ನಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗು ತಂತ್ರಗಾರಿಕೆ ಬಗ್ಗೆ ಬಿಜೆಪಿ ನಾಯಕರಿಗೆ ಪಾಠ ಮಾಡಿದ್ದಾರೆ.. ಬಿಜೆಪಿ ರಾಜ್ಯಾಧ್ಯಕ್ಷ ಬಿ..ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಸಂಸದ ಡಿ.ವಿ ಸದಾನಂದಗೌಡ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್, ಶ್ರೀರಾಮುಲು ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ರು. ರಾಜ್ಯ ಸರ್ಕಾರ ಜಾರಿ

ಮಾಡಿರುವ ಗ್ಯಾರಂಟಿ ಯೋಜನೆಗಳ ವೈಫಲ್ಯದ ಜೊತೆಗೆ ಗ್ಯಾರಂಟಿಯಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಜನರಿಗೆ ಅರ್ಥ ಮಾಡಿಸಲು ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಹಾಗು ಬಿಜೆಪಿ ಸೇರಿ ಇರುವ ಎಲ್ಲಾ 28 ಸೀಟು ಗೆಲ್ಲುವುದು ನಮ್ಮ ಟಾರ್ಗೆಟ್ ಎಂದಿರುವ ಅಮಿತ್ ಷಾ, ಟಿಕೆಟ್ ಹಂಚಿಕೆಯನ್ನು ನಾವು ದೆಹಲಿಯಲ್ಲಿ ನಿರ್ಧರಿಸುತ್ತೇವೆ. ಜೆಡಿಎಸ್ ಜೊತೆ ನೀವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಟಿಕೆಟ್ ಹಂಚಿಕೆ ಬಗ್ಗೆ ಎಲ್ಲಿಯೂ ಬಹಿರಂಗ ಹೇಳಿಕೆ ಕೊಡಬೇಡಿ. ಮತ್ತೊಮ್ಮೆ ಮೋದಿ ಪ್ರಧಾನಿ ಮಾಡುವುದೇ ನಮ್ಮ ಗುರಿ ಆಗಿರಬೇಕು. ಮೈಸೂರು, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲೇಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮನೆ ಮನೆಗೂ ವಿಚಾರ ತಲುಪಿಸಬೇಕು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಹಿಂದೂಗಳ ಮತ ಸಂಗ್ರಹಕ್ಕೆ ಶ್ರೀರಾಮ ಮಂದಿರವನ್ನು ಬಳಸಿಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಅಮಿತ್ ಷಾ ಹೇಳಿದ್ದಾರೆ ಎನ್ನಲಾಗಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ

ಮಾಡಿರುವ ವಿಚಾರವನ್ನು ಮನೆ ಮನೆಗೆ ತಲುಪಿಸಿ ಎಂದಿರುವ ಅಮಿತ್ ಷಾ, ಮೊದಲಿಗೆ ಕಾರ್ಯಕರ್ತರು, ಮುಖಂಡರನ್ನ ವಿಶ್ವಾಸಕ್ಕೆ ಪಡೆಯಬೇಕು. ಗ್ರಾಮೀಣ ಪ್ರದೇಶಕ್ಕೆ ತೆರಳಿ ಸಂಘಟನೆ ಮಾಡಬೇಕು. ರಾಜ್ಯ ಸರ್ಕಾರದ ಗ್ಯಾರಂಟಿ ವೈಫಲ್ಯಗಳನ್ನ ಪ್ರಚಾರ ಮಾಡಿಸಿ ಎಂದು ಕರೆ ನೀಡಿದ್ದಾರೆ. ಅಮಿತ್ ಷಾ ಸಭೆಯಲ್ಲಿ ತೆರಿಗೆ ಅನ್ಯಾಯದ ಬಗ್ಗೆಯೂ ಪ್ರಸ್ತಾಪವಾಗಿದ್ದು, ರಾಜ್ಯ ಸರ್ಕಾರ ನಡೆಸ್ತಿರೋ ಅನುದಾನ ಕದನಕ್ಕೆ ತಿರುಗೇಟು ನೀಡಿ ಸಮಯ ಬಂದಾಗ ನಾವು ರಾಜಕೀಯ ದಾಳ ಉರುಳಿಸುತ್ತೇವೆ ಎಂದಿದ್ದಾರೆ ಎನ್ನಲಾಗಿದೆ. ಕೃಷ್ಣಮಣಿ