ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಹಂಚಿಕೆಯಾಗಿರುವ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಪ್ರಥಮ ಹಂತದ ಪರಿಶೀಲನಾ ಕಾರ್ಯವನ್ನು ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಆರಂಭಿಸಲಾಗಿದೆ.
ಸಿದ್ದಾರ್ಥನಗರದ ನೂತನ ಜಿಲ್ಲಾಧಿಕಾರಿ ಕಚೇರಿಗಳ ಸಂಕೀರ್ಣದ ಸಮೀಪದಲ್ಲಿ ನಿರ್ಮಿಸಿರುವ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 5,635 ಬ್ಯಾಲೆಟ್ ಯುನಿಟ್’ಗಳು ಹಾಗೂ 3,958 ಕಂಟ್ರೋಲ್ ಯುನಿಟ್’ಗಳನ್ನು ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ.
ಚುನಾವಣಾ ಆಯೋಗದಿಂದ 4,274 ವಿವಿಪ್ಯಾಟ್ ಯಂತ್ರಗಳು ಹಂಚಿಕೆಯಾಗಿದ್ದು, ಅವುಗಳನ್ನು ಹೈದರಾಬಾದ್’ನಿಂದ ತರಲಾಗಿದೆ. ಇವಿಎಂಗಳನ್ನು ಪರಿಶೀಲನೆ ನಡೆಸುವ ಕಾರ್ಯವನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಶನಿವಾರ ವೀಕ್ಷಿಸಿದರು.
ಮಾರ್ಗಸೂಚಿ ಪಾಲಿಸುವಂತೆ ಹಾಗೂ ಲೋಪವಾಗದಂತೆ ನೋಡಿಕೊಳ್ಳುವಂತೆ ನಿಯೋಜಿತ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕೇಂದ್ರದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಚುನಾವಣಾ ತಹಶೀಲ್ದಾರ್ ರಾಮ್ ಪ್ರಸಾದ್ ಇದ್ದರು.