ಮುಂಬೈ ಮೂಲದ ಎನ್‌ಜಿಒ ಒಂದರ ಮಹಿಳೆಯೊಬ್ಬರು ಸಲ್ಲಿಸಿದ ಆಕ್ಷೇಪದ ಮೇರೆಗೆ ಈ ಕಾಮರ್ಸ್ ವೆಬ್ಸೈಟ್ ಮಿಂತ್ರ (myntra) ತನ್ನ ಲೋಗೋ ಬದಲಾಯಿಸಿಕೊಳ್ಳಲು ಹೊರಟಿದೆ.
ಅವೆಸ್ತಾ ಫೌಂಡೇಶನ್‌ನ ಸ್ಥಾಪಕಿ ನಾಝ್ ಪಟೇಲ್ ಎನ್ನುವವರು ರಾಜ್ಯ ಸೈಬರ್ ಪೊಲೀಸರಿಗೆ ಕಂಪೆನಿಯ ವಿರುದ್ಧ ಸಲ್ಲಿಸಿದ್ದ ದೂರಿನಲ್ಲಿ ಮಿಂತ್ರದ ಲೋಗೋವು ಮಹಿಳೆಯರನ್ನು ‘ಅವಮಾನಿಸುವಂತಿದೆ ಮತ್ತು ಆಕ್ರಮಣಕಾರಿ’ಯಾಗಿದೆ ಎಂದು ಆರೋಪಿಸಿದ್ದರು.
ಕಳೆದ ಡಿಸೆಂಬರ್‌ನಲ್ಲಿ ದೂರು ಸಲ್ಲಿಸಿದ್ದ ನಾಝ್ ಪಟೇಲ್ ಲೋಗೋವನ್ನು ತೆಗೆದುಹಾಕಬೇಕು ಮತ್ತು ಕಂಪೆನಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ನಾಝ್ ಅವರು ಲೋಗೋ ನಗ್ನ ಮಹಿಳೆಯನ್ನು ಹೋಲುತ್ತದೆ ಎಂದು ಆರೋಪಿಸಿದ್ದರು.
ಮುಂಬೈ ಪೊಲೀಸ್ ಇಲಾಖೆಯ ಸೈಬರ್ ಕ್ರೈಮ್ ವಿಭಾಗವು ಮಿಂತ್ರಾ ಕಂಪೆನಿಗೆ ಈ ಮೇಲ್ ಕಳುಹಿಸಿ ದೂರಿನ ಬಗ್ಗೆ ಮಾಹಿತಿ ಕೊಟ್ಟಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಿಂತ್ರ ‘ಒಂದು ತಿಂಗಳೊಳಗಾಗಿ ಲೊಗೋ ಬದಲಾಯಿಸುತ್ತೇವೆ’ ಅಂದಿತ್ತು.
ಮಿಂತ್ರ ತನ್ನ ಹೊಸ ಲೋಗೋವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ಆ್ಯಪ್, ವೆಬ್ಸೈಟ್ ಸೇರಿದಂತೆ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲೂ ಹೊಸ ಲೋಗೋವನ್ನು ಬಳಸಲು ಆರಂಭಿಸಿದೆ. ಮಾತ್ರವಲ್ಲ, ಪ್ಯಾಕೇಜ್‌ಗಾಗಿ ಹೊಸ ಲೊಗೋವನ್ನೇ ಮುದ್ರಿಸಲು ಆದೇಶ ನೀಡಿದೆ ಎಂದು ವರದಿಗಳು ತಿಳಿಸುತ್ತವೆ .
“ಲೋಗೋವು ಮಹಿಳೆಯರನ್ನು ಅವಮಾನಿಸುವಂತಿದೆ ಎಂದು ನಮಗನಿಸಿತು. ದೂರಿನ ಆಧಾರದ ಮೇಲೆ ನಾವು ಕಂಪೆನಿಗೆ ಈ ಮೈಲ್ ಕಳುಹಿಸಿದೆವು. ನಮ್ಮನ್ನು ಭೇಟಿಯಾದ ಅವರು ಒಂದು ತಿಂಗಳೊಳಗೆ ಲೋಗೋ ಬದಲಾಯಿಸುತ್ತೇವೆ ಎಂದರು” ಎನ್ನುತ್ತಾರೆ ಮುಂಬೈ ಪೊಲೀಸಿದ ಸೈಬರ್ ಕ್ರೈಮ್ ಡಿಸಿಪಿ ರಶ್ಮಿ ಕರಂಡಿಕರ್.
ಮಿಂತ್ರಾವು 2007ರಲ್ಲಿ ಕಾರ್ಯಾರಂಭ ಶುರು ಮಾಡಿದ್ದು 2014ರಲ್ಲಿ ಫ್ಲಿಪ್‌ಕಾರ್ಟ್ ಮಿಂತ್ರವನ್ನು ಖರೀದಿಸಿದ್ದು ಭಾರತದಲ್ಲಿ ಅತ್ಯಂತ ದೊಡ್ಡ ಫ್ಯಾಷನ್ ಸ್ಟೋರ್ ಎಂದೇ ಹೆಸರುವಾಸಿ.