ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಭುಗಿಲೆದ್ದಿರುವ ನಾಯಕತ್ವ ಬದಲಾವಣೆ ಮಾತುಗಳ ಬೆನ್ನಲ್ಲೇ ಮೌನ ಮುರಿದಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ವರ್ಷಾಂತ್ಯದಲ್ಲಿ ಚುನಾವಣೆ ಎದುರಿಸಲಿರುವ ರಾಜಸ್ಥಾನದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ಕೂಗು ಜೋರಾಗೀ ಕೇಳಿ ಬರುತ್ತಿದೆ. ಅದರ ಫಲವಾಗಿ ಇತ್ತೀಚಿಗೆ ಕಾಂಗ್ರೆಸ್ ಹೈ ಕಮಾಂಡ್ ಅನ್ನು ಸಚಿನ್ ಪೈಲಟ್ ಒಂದು ಸುತ್ತು ಭೇಟಿ ಮಾಡಿದ್ದರು. ಗೆಹ್ಲೋಟ್ ಹೇಳಿಕೆಯು ಸಚಿನ್ ಪೈಲಟ್ ವರಿಷ್ಠರ ಬೇಟಿ ನಂತರ ಬಂದಿರುವುದು ವಿಶೇಷ.

ಈ ಕುರಿತು ಮಾತನಾಡಿರುವ ಗೆಹ್ಲೋಟ್ ನಾನು ನನ್ನ ರಾಜೀನಾಮೆಯನ್ನ ಶಾಶ್ವತವಾಗಿ ಸೋನಿಯಾರವರ ಬಳಿ ಸಲ್ಲಿಸಿದ್ದೇನೆ ನಿರ್ಧಾರ ತೆಗೆದುಕೊಳ್ಳಲು ಅವರು ಸ್ವತಂತ್ರರು ವದಂತಿಗಳಿಗೆ ಯಾರು ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.
2020ರಲ್ಲಿ ಕೋವಿಡ್ ಲಾಕ್ಡೌನ್ ಶುರುವಾಗುವ ಎರಡು ವಾರಗಳ ಮುಂಚೆ ಕಾಂಗ್ರೆಸ್ ನಾಯಕತ್ವದ ವಿರುದ್ದ ಬಂಡಾಯವೆದ್ದು ಸರ್ಕಾರವನ್ನು ಪತನದಂಚಿಗೆ ತಂದಿದ್ದ ಸಚಿನ್ ಪೈಲಟ್ ಹಾಗೂ ಅವರ ಬಣದ ಸಮಸ್ಯೆಗಳನ್ನು ಪ್ರಿಯಾಂಕ ಗಾಂಧಿ ವಾದ್ರಾ ನೇತೃತ್ವದ ತ್ರಿಸದಸ್ಯ ಪೀಠವು ಆಲಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪೈಲಟ್ ವಾಪಸ್ ಕಾಂಗ್ರೆಸ್ ಕ್ಯಾಂಪ್ ಸೇರಿದ್ದರು.





