ಮಾರ್ಚ್ 13 ರ ಭಾನುವಾರದಂದು ಮಧ್ಯಪ್ರದೇಶದ ನರ್ಮದಾಪುರಂ ನಗರದ ಸಮೀಪವಿರುವ ಮುಸ್ಲಿಂ ಪ್ರಾರ್ಥನಾಲಯವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿ, ಕೇಸರಿ ಬಣ್ಣ ಬಳಿದು ಹೋಗಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ ಎರಡನೇ ಪ್ರಕರಣ ಇದು.
50 ವರ್ಷಗಳಷ್ಟು ಹಳೆಯದಾದ ಈ ಪ್ರಾರ್ಥನಾಲಯ ನರ್ಮದಾಪುರಂ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಾರ್ಥನಾಲಯದ ಗುಮ್ಮಟ, ಸಮಾಧಿ ಮತ್ತು ಪ್ರವೇಶ ದ್ವಾರಕ್ಕೆ ಕೇಸರಿ ಬಣ್ಣ ಬಳಿದು, ಮರದ ಬಾಗಿಲುಗಳನ್ನು ಒಡೆದು ಮಾರು ನದಿಗೆ ಎಸೆಯಲಾಗಿದೆ ಹಾಗೂ ಕಂಪಂಡಿನಲ್ಲಿದ್ದ ಹ್ಯಾಂಡ್ ಪಂಪ್ ಅನ್ನು ಹಾಳುಗೆಡವಲಾಗಿದೆ ಪ್ರಾರ್ಥನಾಲಯದ ಉಸ್ತುವಾರಿ ಅಬ್ದುಲ್ ಸತ್ತಾರ್ ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದರೂ ಅವರು ಸ್ಪಂದಿಸಿಲ್ಲ ಎಂದು ಆರೋಪಿಸಲಾಗಿದೆ. ಕಡೆಗೆ ರಾಜ್ಯ ಹೆದ್ದಾರಿ 22ರಲ್ಲಿ ತಡೆದು ಪ್ರತಿಭಟಿಸಿದ ಬಳಿಕ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 (ಎ) (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗಾಗಿ, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಎರಡು ಅಗ್ನಿಶಾಮಕ ದಳದ ವಾಹನಗಳ ಸಹಾಯದಿಂದ ಪ್ರಾರ್ಥನಾಲಯಕ್ಕೆ ಪುನಃ ಬಣ್ಣ ಬಳಿಯುವುದು ಸೇರಿದಂತೆ ಪುನಃಸ್ಥಾಪಿಸುವ ಕೆಲಸ ಪ್ರಾರಂಭವಾಗಿದೆ.
“ಎರಡೂ ಸಮುದಾಯಗಳ ಜನರು ಇಲ್ಲಿ ಶಾಂತಿಯುತವಾಗಿ ವಾಸಿಸುತ್ತಿರುವ ಕಾರಣ ಸ್ಥಳೀಯ ಯುವಕರು ಈ ಕೃತ್ಯ ಎಸಗಿರುವಂತೆ ತೋರುತ್ತಿಲ್ಲ. ಈ ಹಿಂದೆ ಇಲ್ಲಿ ಯಾವುದೇ ಕೋಮು ಉದ್ವಿಗ್ನತೆ ಇರಲಿಲ್ಲ” ಎಂದು ಮಖಾನ್ ನಗರ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ಹೇಮಂತ್ ಶ್ರೀವಾಸ್ತವ್ ಎಕ್ಸ್‌ಪ್ರೆಸ್‌ಗೆ ತಿಳಿದ್ದಾರೆ.
ನರ್ಮದಾಪುರಂ ಜಿಲ್ಲೆಯ ಪಚ್ಮರ್ಹಿಯಲ್ಲಿ ಒಂದು ತಿಂಗಳ ಹಿಂದೆ ಇದೇ ರೀತಿಯ ಘಟನೆ ಸಂಭವಿಸಿದೆ ಮತ್ತು ಪೊಲೀಸರು ಎರಡು ಪ್ರಕರಣಗಳ ನಡುವಿನ ಸಂಬಂಧವನ್ನು ಹುಡುಕುತ್ತಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಹೇಳಿದೆ.
ಜನವರಿ 14 ರಂದು, ಅಪರಿಚಿತ ವ್ಯಕ್ತಿಗಳು ಪಚ್ಮರ್ಹಿಯ ದೇನ್ವಾ ದರ್ಶನದ ಬಳಿ ಮುಸ್ಲಿಂ ದೇಗುಲವನ್ನು ಧ್ವಂಸಗೊಳಿಸಿದರು ಎಂದು ದೈನಿಕ್ ಭಾಸ್ಕರ್ ವರದಿ ಹೇಳಿದೆ.