ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಜಾತಿ ನಿಂದನೆ ಹಾಗು ಕೊಲೆ ಬೆದರಿಕೆ ಕೇಸ್‌ನಲ್ಲಿ ಬಂಧನವಾಗಿ ಜಾಮೀನು ಪಡೆದು ಹೊರ ಬಂದಿದ್ದಾರೆ. ಈ ನಡುವೆ ಮತ್ತೆ ಅತ್ಯಾಚಾರ ಕೇಸ್‌ನಲ್ಲಿ ಬಂಧನ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ನಡುವೆ ಶಾಸಕ ಮುನಿರತ್ನ ಬೆಂಬಲಿಗರು ಸಾಕ್ಷಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಸಂತ್ರಸ್ತೆಯ ಸ್ನೇಹಿತೆಯ ಮಗನಿಗೆ ಮುನಿರತ್ನ ಬೆಂಬಲಿಗರು ಬೆದರಿಕೆ ಒಡ್ಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತೆ ಆಗಿರುವ ಸುನಂದಮ್ಮ ಎನ್ನುವವರು ಬೆದರಿಕೆ ಹಾಕಿದ್ದಾರೆ ಎಂದು ಯಶವಂತಪುರ ಠಾಣೆಯಲ್ಲಿ ರಾಕೇಶ್ ಎಂಬಾತ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಮುನಿರತ್ನ ವಿರುದ್ಧ ತನಿಖೆಗೆ ಎಸ್ಐಟಿ ರಚಿಸಿರುವ ವಿಚಾರದ ಬಗ್ಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಮುನಿರತ್ನ ವಿರುದ್ಧ ಬಹಳ ವಿಚಿತ್ರವಾದ ಪ್ರಕರಣ ದಾಖಲಾಗಿದೆ. ನಮಗೆ ಯೋಚನೆ ಮಾಡಲು ಆಗದ ರೀತಿಯ ವಿಚಾರ ಇದು. ಹೀಗೂ ಸಾಧ್ಯವಾ..? ಅನಿಸುವಷ್ಟು ವಿಚಾರಗಳಿವೆ. ಹೀಗಾಗಿ ಈ ಬಗ್ಗೆ ಸ್ಪಷ್ಟವಾದ ತನಿಖೆ ಆಗಬೇಕಿದೆ. ಈಗಾಗಲೇ ಇದರ ಬಗ್ಗೆ ಸರ್ಕಾರ SIT ರಚಿಸಿದೆ. ಒಂದು ವೇಳೆ ಮುನಿರತ್ನ ಈ ರೀತಿ ಮಾಡಿದ್ರೆ ಇದೊಂದು ಪೈಶಾಚಿಕ ಕೃತ್ಯ ಎಂದು ಕಿಡಿಕಾರಿದ್ದಾರೆ.

ಶಾಸಕ ಮುನಿರತ್ನ ಅವರನ್ನ ನಾನು ಹಿಂದಿನಿಂದಲೂ ನೋಡಿದ್ದೇನೆ. ಈಗ ಅವರ ಬಗ್ಗೆ ವೈಯಕ್ತಿಕ ಮಾತನಾಡಲ್ಲ. ಈ ಘಟನೆಗಳನ್ನು ನಿಜವಾಗಿಯೂ ಅವರು ಮಾಡಿಸಿದ್ರೆ ಇದು ಪೈಶಾಚಿಕ ಕೃತ್ಯ. ಯಾರೊಬ್ಬರು ಈ ರೀತಿ ಮಾಡೋದಕ್ಕೆ ಹೋಗಲ್ಲ. ಅದು ಒಮ್ಮೆ ಸುಳ್ಳು ಅಂತ ಆದರೆ ನನಗೆ ಸಂತೋಷ ಆಗುತ್ತದೆ. ಯಾಕಂದ್ರೆ ಆ ರೀತಿ ಏನೂ ಇಲ್ಲ ಅಂತ ಸಮಾಧಾನ ಆಗತ್ತದೆ. ನಿಜ ಅಂತ ಆದ್ರೆ ಮನುಷ್ಯರು ಈ ರೀತಿ ಮಾಡಲು ಸಾಧ್ಯನಾ ಅಂತ ಅನಿಸುವ ರೀತಿಯಲ್ಲಿ ಆಗುತ್ತದೆ ಎಂದಿದ್ದಾರೆ.