ತಾಲಿಬಾನ್ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಮುಂದಿನ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ತಮ್ಮ ಅಧಿಕಾರ ತ್ಯಜಿಸಿದರೆಂದು ತಿಳಿದುಬಂದಿದೆ.
ಅಫ್ಗಾನಿಸ್ತಾನದ ಬಹುಪಾಲು ನಗರಗಳ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್, ಭಾನುವಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದ ಹೊರವಲಯವನ್ನು ಪ್ರವೇಶಿಸಿತ್ತು. ಆದರೆ, ರಾಜಧಾನಿಯನ್ನು ಬಲವಂತದಿಂದ ವಶಪಡಿಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿತ್ತು.
‘ರಾಜಧಾನಿಯ ಯಾವುದೇ ನಾಗರಿಕರ ಜೀವ, ಆಸ್ತಿ ಮತ್ತು ಘನತೆಗೆ ನಾವು ಧಕ್ಕೆ ತರುವುದಿಲ್ಲ. ಕಾಬೂಲ್ ನಾಗರಿಕರ ಜೀವಕ್ಕೂ ಯಾವುದೇ ರೀತಿಯ ಅಪಾಯವಿಲ್ಲ’ ಎಂದು ತಾಲಿಬಾನ್ ತಿಳಿಸಿತ್ತು. ಅಫ್ಘನ್ ಅಧಿಕಾರಿಗಳು ಕೂಡಾ, ಕಾಬೂಲ್ ಬಳಿಯ ಕಲಕನ್, ಖರಾಬಾಗ್ ಮತ್ತು ಪಘಮಾನ್ ಜಿಲ್ಲೆಗಳಲ್ಲಿ ತಾಲಿಬಾನ್ ಬಂಡುಕೋರರು ಬೀಡುಬಿಟ್ಟಿದ್ದಾರೆ ಎಂದು ತಿಳಿಸಿದ್ದರು.
ಇದಾದ ಬೆನ್ನಲ್ಲೇ, ತಾಲಿಬಾನ್ ಕಮಾಂಡರ್ ಅಬ್ದುಲ್ ಘನಿ ತಾಲಿಬಾನಿನ ಮುಂದಿನ ಅಧ್ಯಕ್ಷರಾಗಲಿದ್ದಾರೆಂಬ ಸುದ್ದಿ ಹೊರ ಬಿದ್ದಿದೆ.
ಶಸ್ತ್ರಸಜ್ಜಿತ ತಾಲಿಬಾನ್ ಬಂಡುಕೋರರು ಕಾಬೂಲಿನ ಹೊರವಲಯದಲ್ಲೇ ಇರುವಂತೆ ಅವರಿಗೆ ಸೂಚನೆ ನೀಡಿರುವುದಾಗಿ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. ಆದರೆ ಕೆಲ ತಾಲಿಬಾನಿ ಬಂಡುಕೋರರು ಕಾಬೂಲ್ ನಗರವನ್ನು ಪ್ರವೇಶಿಸಿದ್ದಾರೆ, ಆದರೆ ಯಾವುದೇ ಆಕ್ರಮಣ ಇದುವರೆಗೆ ನಡೆದಿಲ್ಲ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ಗೃಹಸಚಿವ ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ. ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿಗೆ ನುಗ್ಗಿ ದಾಳಿ ನಡೆಸುವರೆಂಬ ಭೀತಿ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಅದನ್ನು ಮನಗಂಡು ಅಬ್ದುಲ್ ಸತ್ತಾರ್ ಅವರು ತಾಲಿಬಾನ್ ಕಾಬೂಲ್ ಪ್ರವೇಶಿಸಿದಲ್ಲಿ ಆಫ್ಘನ್ ಭದ್ರತಾ ಪಡೆಗಳು ಕಾದಾಟ ನಡೆಸುವುದಿಲ್ಲ ಎಂದು ಹೇಳಿ ಸಂಭಾವ್ಯ ಆಕ್ರಮಣವನ್ನು ತಡೆ ಹಿಡಿದಿದ್ದಾರೆ.
ದೇಶದ ಚುಕ್ಕಾಣಿ ಹಿಡಿಯಲು ತಾಲಿಬಾನ್ ಸಂಧಾನಕಾರರು ಮತ್ತು ನಾಯಕರು ಅಧ್ಯಕ್ಷರ ನಿವಾಸಕ್ಕೆ ತೆರಳಿರುವುದಾಗಿ ವರದಿಯಾಗಿದೆ.
ತಾಲಿಬಾನ್ ಬಂಡಾಯ ವಿಶ್ವ ರಾಷ್ಟ್ರಗಳನ್ನು ಆತಂಕಕ್ಕೆ ತಳ್ಳಿದ್ದು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ತನ್ನ ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕಾಬೂಲಿನಿಂದ ಹಿಂದಕ್ಕೆ ಕರೆಸಿಕೊಂಡಿದೆ. ಅದಾಗ್ಯೂ, ರಷ್ಯಾ ಕಾಬೂಲಿನಲ್ಲಿನ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದಿಲ್ಲ ಎಂದು ತಿಳಿಸಿದೆ.
ಕಳೆದ 2 ದಶಕಗಳಿಂದ ಅಮೆರಿಕ ಸೇನೆಯಿಂದ ನಿರಂತರ ತರಬೇತುಗೊಂಡಿದ್ದ ಆಫ್ಘನ್ ಭದ್ರತಾಪಡೆಗಳು ತಾಲಿಬಾನ್ ಎದುರು ಸೋತು ಸುಣ್ಣವಾಗಿರುವುದು ಅಮೆರಿಕಾಗೂ ಮುಜುಗರದ ಸಂಗತಿಯೆನಿಸಿದೆ.
ಈ ನಡುವೆ, ಕಾಬೂಲಿಗೆ ತಾಲಿಬಾನ್ ಪ್ರವೇಶದಿಂದ ಆತಂಕಗೊಂಡಿದ್ದ ಸಾವಿರಾರು ನಾಗರಿಕರು ಕಾಬೂಲ್‌ನ ಉದ್ಯಾನಗಳಲ್ಲಿ ಮತ್ತು ಬಯಲು ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ತಾವು ಉಳಿತಾಯ ಮಾಡಿದ ಹಣ ವಾಪಸ್ ಪಡೆಯಲು ನೂರಾರು ಮಂದಿ ಖಾಸಗಿ ಬ್ಯಾಂಕ್‌ಗಳ ಮುಂದೆ ಸೇರಿದಕೊಂಡಿದ್ದರು.