ಮುಡಾ ಹಗರಣದಲ್ಲಿ ರಾಜ್ಯಪಾಲರ ಆದೇಶಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಅಗತ್ಯ ಈಗ ಇರಲಿಲ್ಲ ಎಂದು ಹೈಕೋರ್ಟ್ ಹೇಳಿದರೂ ತನಿಖೆಗೆ ಆದೇಶಿಸಿದ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಮತ್ತು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಇಂತಹ ತೀರ್ಪನ್ನೇ ರಾಜ್ಯಪಾಲರೂ ನಿರೀಕ್ಷಿಸಿದ್ದಿರಬಹುದು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah in Muda Case) ಅವರ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಇದೀಗ ಅವರ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 156(3)(CRPC Section 156(3))ರಡಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದಂತೆ ಲೋಕಾಯುಕ್ತ ಮೈಸೂರು ಪೊಲೀಸರು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ಮತ್ತು ಭಾರತೀಯ ನಾಗರಿಕ ಸಂಹಿತೆ (BNSS) ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್ ಗೆ ಅನುಮೋದನೆ ನೀಡಿದ ರಾಜ್ಯಪಾಲರ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ (Justice Nagaprasanna) ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ರಾಜ್ಯಪಾಲರ ಆದೇಶವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಪ್ರಾಥಮಿಕ ತನಿಖೆಗೆ ಅನುಮೋದನೆ ಎಂದು ಪರಿಗಣಿಸಬೇಕು. ತನಿಖೆ ನಡೆಯದ ಕಾರಣ BNSS ಸೆಕ್ಷನ್ 218ರ ಅಡಿ ಪ್ರಾಸಿಕ್ಯುಷನ್ ಗೆ ಅನುಮೋದನೆ ನೀಡಿರುವುದು ಅನಗತ್ಯ. ಏಕೆಂದರೆ, ಪ್ರಕರಣ ಪ್ರಾಸಿಕ್ಯೂಷನ್ ಹಂತ ತಲುಪಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿಆರ್ ಪಿಸಿ ಸೆಕ್ಷನ್ 156(3)ರಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದೆ.
ಅಲ್ಲಿಗೆ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್ 17ಎ ಅಡಿ ತನಿಖೆ ನಡೆಸಿ, BNSS ಸೆಕ್ಷನ್ 218ರಡಿ ಪ್ರಾಸಿಕ್ಯೂಷನ್ ಗೆ ಅನುಮೋದನೆ ನೀಡಿರುವ ರಾಜ್ಯಪಾಲರ ಆದೇಶಕ್ಕೆ ಸಂಬಂದಿಸಿದಂತೆ ಒಂದು ಹಂತದ ಕಾನೂನು ಪ್ರಕ್ರಿಯೆ ಸದ್ಯಕ್ಕೆ ಮುಕ್ತಾಯಗೊಂಡಂತಾಗಿದೆ. ಹೈಕೋರ್ಟ್ (High Court) ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ವಿಭಾಗೀಯ ಪೀಠ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆಯಾದರೂ ಪ್ರಸ್ತುತ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ತನಿಖೆ ಮುಂದುವರಿದರೆ ಅದನ್ನು ಎದುರಿಸಲೇ ಬೇಕು.
ಈ ವಿಚಾರದಲ್ಲಿ ಹೈಕೋರ್ಟ್ ಆದೇಶ ಮುಖ್ಯಮಂತ್ರಿಗಳ ಸಂಕಷ್ಟವನ್ನು ಅರ್ಧದಷ್ಟು ಕಡಿಮೆ ಮಾಡಿದೆ. ಏಕೆಂದರೆ, ರಾಜ್ಯಪಾಲರ ಆದೇಶದಂತೆ ತನಿಖೆ ಜತೆಗೆ ಪ್ರಾಸಿಕ್ಯೂಷನ್ ಗೂ ಹೈಕೋರ್ಟ್ ಅನುಮತಿ ನೀಡಿದ್ದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕಾದ ಇಕ್ಕಟ್ಟಿಗೆ ಸಿಲುಕಿದ್ದರು. ಇಲ್ಲದಿದ್ದರೆ ನೈತಿಕವಾಗಿ ಅವರು ಅಧಋಪತನಕ್ಕೆ ಇಳಿಯುತ್ತಿದ್ದರು.
ಸದ್ಯದ ಪ್ರಕರಣದಲ್ಲಿ ರಾಜ್ಯಪಾಲರು ಸೋಲಲಿಲ್ಲ, ಮುಖ್ಯಮಂತ್ರಿ ಗೆಲ್ಲಲಿಲ್ಲ ಎನ್ನುವ ಪರಿಸ್ಥಿತಿ. ಏಕೆಂದರೆ, ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಪೂರ್ಣ ಪ್ರಮಾಣದಲ್ಲಿ ಒಪ್ಪಿಲ್ಲವಾದರೂ ತನಿಖೆಗೆ ಅಡ್ಡಿಪಡಿಸಿಲ್ಲ. ಮೇಲಾಗಿ ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದನ್ನು ಅದು ಸ್ಪಷ್ಟವಾಗಿ ಹೇಳಿದೆ. ಅರ್ಹತೆ ಇಲ್ಲದಿದ್ದರೂ ಮುಖ್ಯಮಂತ್ರಿಯವರ ಪತ್ನಿ 56 ಕೋಟಿ ರೂ. ಮೌಲ್ಯದ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಇಂಥ ಪ್ರಕರಣ ಬಿಟ್ಟು ಇನ್ಯಾವ ಪ್ರಕರಣದ ತನಿಖೆ ನಡೆಸಬೇಕು? ನಿಯಮಗಳ ಪ್ರಕಾರ ಮುಖ್ಯಮಂತ್ರಿಯವರ ಪತ್ನಿ 2 ನಿವೇಶನಗಳನ್ನು ಪಡೆಯಲು ಮಾತ್ರ ಅರ್ಹರಾಗಿದ್ದಾರೆ. ಆದರೂ 14 ನಿವೇಶನ ಪಡೆದಿದ್ದಾರೆ. ಪರ್ಯಾಯ ನಿವೇಶನವನ್ನು ಮೈಸೂರಿನ ಹೃದಯ ಭಾಗದಲ್ಲಿ ನೀಡಲಾಗಿದೆ. ಮುಖ್ಯಮಂತ್ರಿಯವರ ಅನುಕೂಲಕ್ಕಾಗಿ ನಿಯಮ ಸಡಿಲಿಸಲಾಯಿತೇ ಎಂಬ ಬಗ್ಗೆ ತನಿಖೆ ನಡೆಯಬೇಕು ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಅಷ್ಟೇ ಅಲ್ಲ, ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ. ಅವರು ಈ ಸಂಬಂಧ ಯಾವುದೇ ಆದೇಶ ಅಥವಾ ಪತ್ರ ನೀಡಿಲ್ಲ ಎಂಬ ಅರ್ಜಿದಾರರ ಪರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಮುಖ್ಯಮಂತ್ರಿಯವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು, ಪ್ರಭಾವ ಬೀರಿರುವುದು ಕಂಡುಬರುತ್ತದೆ. ಪ್ರಭಾವ ಬೀರುವುದಕ್ಕೆ ಯಾವುದೇ ಆದೇಶ ಅಥವಾ ಶಿಫಾರಸಿನ ಅಗತ್ಯವಿಲ್ಲ ಎಂದು ಹೇಳಿದೆ. ಅಲ್ಲಿಗೆ ಅಕ್ರಮದಲ್ಲಿ ಮುಖ್ಯಮಂತ್ರಿಯವರ ನೇರ ಪಾತ್ರ ಇಲ್ಲದೇ ಇದ್ದರೂ ಅವರ ಅಧಿಕಾರದ ಪ್ರಭಾವ ಕೆಲಸ ಮಾಡಿದೆ ಎಂಬುದನ್ನು ಹೈಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಹೇಳಿದೆ.
ಹೀಗಾಗಿ ಮುಖ್ಯಮಂತ್ರಿಯವರ ವಿರುದ್ಧ ತನಿಖೆ ಮತ್ತು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಬಹುದು. ಮುಡಾದಿಂದ ಮುಖ್ಯಮಂತ್ರಿಯವರ ಪತ್ನಿ 14 ನಿವೇಶನಗಳನ್ನು ಪಡೆಯುವ ವಿಚಾರದಲ್ಲಿ ಮುಖ್ಯಮಂತ್ರಿಯವರ ನೇರ ಪಾತ್ರವಿದೆ ಎಂಬುದಕ್ಕೆ ರಾಜ್ಯಪಾಲರಿಗೆ ಸಲ್ಲಿಕೆಯಾಗಿದ್ದ ಮೂರು ದೂರುಗಳಲ್ಲಿ ಯಾವುದರಲ್ಲೂ ಸೂಕ್ತ ದಾಖಲೆಗಳು ಇರಲಿಲ್ಲ. ಅಷ್ಟೇ ಅಲ್ಲ, ಅಂತಹ ದಾಖಲೆಗಳು ಇಲ್ಲವೂ ಇಲ್ಲ. ಆದರೆ, ಮುಖ್ಯಮಂತ್ರಿಯವರ ಪತ್ನಿ ಎಂಬ ಕಾರಣಕ್ಕೆ ನಿಯಮ ಮೀರಿ 14 ನಿವೇಶನ ನೀಡಲಾಗಿದೆ ಎಂಬುದು ಸತ್ಯ. ನಿವೇಶನ ಹಂಚಿಕೆ ಕುರಿತ ಸಭೆಯಲ್ಲಿ ಮುಖ್ಯಮಂತ್ರಿಯವರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರೂ ಇದ್ದರು ಎಂಬುದೂ ಸುಳ್ಳಲ್ಲ. ಹಗರಣದಲ್ಲಿ ಮುಖ್ಯಮಂತ್ರಿಯವರ ವಿರುದ್ಧದ ಆರೋಪಗಳಿಗೆ ಯಾವುದೇ ದಾಖಲೆಗಳು ಇಲ್ಲದೇ ಇರುವಾಗ ರಾಜ್ಯಪಾಲರು ನೇರವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರೆ ಆ ಆದೇಶ ಹೈಕೋರ್ಟ್ ನಲ್ಲಿ ತಕ್ಷಣಕ್ಕೆ ಬಿದ್ದು ಹೋಗುತ್ತಿತ್ತು. ರಾಜ್ಯಪಾಲರ ಆದೇಶ ರಾಜಕೀಯವಾಗಿ ಅವಹೇಳನಕ್ಕೆ ಗುರಿಯಾಗಿ ಅವರು ರಾಜಕೀಯ ಪ್ರೇರಿತ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿತ್ತು.
ಈ ಕಾರಣಕ್ಕಾಗಿಯೇ ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ನಡೆಸಿ BNSS ಸೆಕ್ಷನ್ 218ರ ಅಡಿ ಪ್ರಾಸಿಕ್ಯೂಷನ್ ಗೆ ಅನುಮೋದನೆ ನೀಡಿದ್ದರು. ತನಿಖೆ ಬಳಿಕ ಮುಖ್ಯಮಂತ್ರಿಯವರನ್ನು ಪ್ರಾಸಿಕ್ಯೂಷನ್ ಗೆ ಒಳಪಡಿಸಲು ಮತ್ತೊಮ್ಮೆ ಅನುಮತಿಗಾಗಿ ತಮ್ಮ ಬಳಿ ಬರುವುದು ಬೇಡ ಎಂಬ ಉದ್ದೇಶ ಇದರ ಹಿಂದೆ ಇದ್ದಿರಬಹುದು ಅಥವಾ ಬೇರೆ ಉದ್ದೇಶವೇನಾದರೂ ಇತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಆದೇಶ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಹೈಕೋರ್ಟ್ ಆದೇಶವೂ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಮುಖ್ಯಮಂತ್ರಿ ಇಕ್ಕಟ್ಟಿನಲ್ಲೇ ಮುಂದುವರಿಯುವಂತಾಗಿದೆ.
ನೈತಿಕತೆ ಅನ್ವಯವಾಗುತ್ತದೆಯೇ?
ಈಗ ಉಳಿದಿರುವುದು ನೈತಿಕತೆಯ ಪ್ರಶ್ನೆ. ಮುಖ್ಯಮಂತ್ರಿಯವರ ಪತ್ನಿಗೆ ಕಾನೂನು ಬಾಹಿರವಾಗಿ 14 ನಿವೇಷನ ನೀಡಿರುವ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ನೇರ ಪಾತ್ರ ಇಲ್ಲ ಎಂಬುದು ನಿಜವಾದರೂ ಅವ ರ ಹುದ್ದೆಯ ಪ್ರಭಾವ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಮುಖ್ಯಮಂತ್ರಿಯವರನ್ನು ಓಲೈಸುವ ಉದ್ದೇಶದಿಂದ ಅವರ ಪತ್ನಿಗೆ 14 ನಿವೇಶನ ನೀಡಿರಲೂಬಹುದು. ಆದರೆ, ಅದೆಲ್ಲವೂ ತನಿಖೆಯಿಂದ ಹೊರಬರಬೇಕು. ಆದರೆ, ತನಿಖೆ ನಡೆಸುವ ಲೋಕಾಯುಕ್ತ ಪೊಲೀಸರು ಗೃಹ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಗೃಹ ಇಲಾಖೆಯಿಂದ ನಿಯೋಜನೆ ಮೇಲೆ ಅವರು ಲೋಕಾಯುಕ್ತ ವಿಭಾಗಕ್ಕೆ ಹೋಗಿರುತ್ತಾರೆ. ವರ್ಗಾವಣೆಯಾದರೆ ಮತ್ತೆ ಗೃಹ ಇಲಾಖೆ ವ್ಯಾಪ್ತಿಯಲ್ಲೇ ಬರುತ್ತಾರೆ. ಪೊಲೀಸ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್, ಕಾನ್ ಸ್ಟೇಬಲ್ ಗಳು ಗೃಹ ಸಚಿವರ ವ್ಯಾಪ್ತಿಗೆ ಬರುತ್ತಾರಾದರೂ ಅವರ ಉಸ್ತುವಾರಿ ನೋಡಿಕೊಳ್ಳುವ IPS ಅಧಿಕಾರಿಗಳು ಮುಖ್ಯಮಂತ್ರಿಯವರ ವ್ಯಾಪ್ತಿಗೆ ಬರುತ್ತಾರೆ. ಹೀಗಿರುವಾಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರೆ ತನಿಖೆ ನಿಸ್ಪಕ್ಷಪಾತವಾಗಿ ನಡೆಯುತ್ತದೆ ಎಂದು ಹೇಳುವುದು ಕಷ್ಟ.
ಏಕೆಂದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಸಿದ್ದ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (SIT)ದ ತನಿಖಾ ವರದಿಯಲ್ಲಿ ಎಲ್ಲೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರಿಲ್ಲ(Ex Minister Nagendra). ಆದರೆ, ಈ ಕುರಿತು ತನಿಖೆ ನಡೆಸಿದ ಜಾರಿ ನಿರ್ದೇಶನಾಲಯದ ತನಿಖಾ ವರದಿಯಲ್ಲಿ ನಾಗೇಂದ್ರ ಅವರೇ ಪ್ರಮುಖ ಆರೋಪಿ. ಅಲ್ಲದೆ, ಅವರು ಬಂಧನಕ್ಕೊಳಗಾಗಿ ಈಗ ಜೈಲಿನಲ್ಲಿದ್ದಾರೆ. ಈ ಪ್ರಕರಣ ಕಣ್ಣ ಮುಂದೆಯೇ ಇರುವಾಗ ನಮ್ಮ ರಾಜ್ಯದ ಪೊಲೀಸರು ಲೋಕಾಯುಕ್ತದಲ್ಲಿದ್ದರೂ ಮುಖ್ಯಮಂತ್ರಿಯವರ ವಿರುದ್ಧ ನಿಸ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ.
ಈ ಕಾರಣಕ್ಕಾಗಿಯೇ ಪ್ರತಿಪಕ್ಷದವರು ಮುಖ್ಯಮಂತ್ರಿಯವರ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಇದೊಂದು ರಾಜಕೀಯ ಪ್ರೇರಿತ ದೂರು. ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಡೆದು ವರದಿ ಬಂದ ಬಳಿಕ ಸತ್ಯ ಹೊರಬರುತ್ತದೆ. ಬಳಿಕ ಮುಂದಿನ ನಿರ್ಧಾರ ಎಂದು ಆಡಳಿತ ಪಕ್ಷದವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.