ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತಲಾಶ್ ನಡೆಸುತ್ತಿರುವ ಹೊತ್ತಿನಲ್ಲೇ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಮಾಡಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಹಿಂದೆ ಕರ್ನಾಟಕ ಅಭಿವೃದ್ಧಿ ಪರ ರಾಜ್ಯವಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಅಭಿವೃದ್ಧಿಗೆ ಹಣ ಖರ್ಚು ಮಾಡ್ತಾ ಇಲ್ಲ. ವಾಲ್ಮೀಕಿ ನಿಗಮದ ಹಗರಣದ ಹಣ ಕಾಂಗ್ರೆಸ್ ಪಕ್ಷ ಮತ್ತು ಚುನಾವಣೆಗೆ ಬಳಕೆಯಾಗಿದೆ. ಮುಡಾ ಹಗರಣದಲ್ಲಿ ಸಿಎಂ ಪಾತ್ರ ಇದೆ. ಅದನ್ನು ಕೋರ್ಟ್‌ಗಳು, ಇ.ಡಿ ಯವರು ಹೇಳಿದ್ದಾರೆ. ಕಾನೂನು ಬಾಹಿರವಾಗಿ ಸಿಎಂ ಕುಟುಂಬ ಸೈಟ್ ಪಡೆದಿದೆ. ಸೈಟ್ ವಾಪಸ್ ಕೊಟ್ಟಿರುವುದು ಸಿಎಂ ಅಪರಾಧ ಮಾಡಿರೊದಕ್ಕೆ ಸಾಕ್ಷಿ ಎಂದಿದ್ದಾರೆ.
ಮೈಸೂರಿನಲ್ಲಿ ಮುಡಾ ಹಗರಣದ ಬಗ್ಗೆ ಮಾತನಾಡಿರುವ ಮೈಸೂರು ಕೊಡಗು ಸಂಸದ ಯದುವೀರ್ ಮಾತನಾಡಿ, ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು. ಮುಡಾ ಹಗರಣದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿ ಪಕ್ಷದಿಂದ ಪಾದಯಾತ್ರೆ ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಮಾತನಾಡಿ, ಇಡಿ ಅಧಿಕಾರಿಗಳು ಭೈರತಿ ಸುರೇಶ್ ಮನೆ ಮೇಲೆ ದಾಳಿ ಮಾಡಬೇಕು. ಭೈರತಿ ಸುರೇಶ್ ಮನೆಯಲ್ಲಿ ದಾಖಲೆಗಳು ಸಿಗುತ್ತವೆ. ಇಡಿ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೋಯ್ಯುತ್ತಾರೆ. 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲಾ ನಿವೇಶನಗಳನ್ನ ವಾಪಸ್ ಪಡೆಯಬೇಕು. ಸೂರು ಇಲ್ಲದ ಜನತೆಗೆ ಈ ನಿವೇಶನಗಳನ್ನ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ. ಇನ್ನು ಮುಡಾದಲ್ಲಿ ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಲಿ, ಮುಡಾದಲ್ಲಿ ಶಾಸಕರ ಸದಸ್ಯತ್ವ ರದ್ದು ಮಾಡುವ ಸರ್ಕಾರದ ನಿರ್ಧಾರವನ್ನ ಸ್ವಾಗತ ಮಾಡುತ್ತೇವೆ. ಆದರೆ ಮುಡಾಗೆ ದಕ್ಷ ಹಾಗೂ ಅನುಭವವುಳ್ಳ ಅಧಿಕಾರಿಯನ್ನ ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ಮೊದಲೇ ರಾಜೀನಾಮೆ ಕೊಡಬೇಕಿತ್ತು. ನೈತಿಕ ಹೊಣೆ ಹೊತ್ತು ಈಗಲಾದ್ರೂ ರಾಜೀನಾಮೆ ಕೊಡಲಿ. ಮುಡಾ ಹಗರಣದಲ್ಲಿ ಆರೋಪ ಮುಕ್ತ ಆದ ಮೇಲೆ ಸಿಎಂ ಆಗಿ ವಾಪಸ್ ಬರಲಿ ಎಂದು ಸಲಹೆ ನೀಡಿದ್ದಾರೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಎಂದಿದ್ದ ಸಿಎಂ ಸಿದ್ದರಾಮಯ್ಯ, ಮತ್ತೆ ಈಗ ಮುಡಾ ಹಗರಣ ಯಾಕೆ ಮಾಡಿದ್ರು ? ಆರೋಪ ಮಾಡಿದಾಗಲೇ ಸೈಟ್ ವಾಪಸ್ ಕೊಟ್ಟಿದ್ರೆ ಮುಗಿದು ಬಿಡ್ತಿತ್ತು. ಈಗ ನೈತಿಕ ಹೊಣೆ ಹೊತ್ತು, ರಾಜೀನಾಮೆ ಕೊಟ್ಟು ಮುಕ್ತ ಆಗಬೇಕು ಎಂದು ಆಗ್ರಹ ಮಾಡಿದ್ದಾರೆ.