ಷೇರುಪೇಟೆ ಸತತ ಕುಸಿತ ನಡುವೆಯೂ ಪೆಟ್ರೋಲಿಯಂ ಸಂಸ್ಕರಣ ಕಂಪನಿಗಳಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ (MRPL) ಮತ್ತು ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ (CPCL) ಷೇರುಗಳು ಜಿಗಿಯುತ್ತಿವೆ. ಜೂನ್ 7ರಂದು ದಿನದ ವಹಿವಾಟಿನಲ್ಲಿ ಉಭಯ ಷೇರುಗಳೂ ಶೇ. 19ರಷ್ಟು ಏರಿಕೆ ದಾಖಲಿಸಿವೆ. ಅಷ್ಟೇ ಅಲ್ಲದೇ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿವೆ.
ಈ ಷೇರುಗಳ ಜಿಗಿಯುತ್ತಿರುವುದಕ್ಕೆ ಮುಖ್ಯ ಕಾರಣ ಸಂಸ್ಕರಣೆಯಲ್ಲಿನ ಲಾಭ ಗಣನೀಯ ಪ್ರಮಾಣದಲ್ಲಿ ಹಿಗ್ಗಿರುವುದು. ಸಂಸ್ಕರಣೆಗೆ ಮಾನದಂಡವಾಗಿರುವ ಸಿಂಗಾಪುರ ಸಂಸ್ಕರಣ ಲಾಭಾಂಶವು ಪ್ರತಿ ಬ್ಯಾರೆಲ್ ಗೆ 25.2 ಡಾಲರ್ ಗಳಷ್ಟು ಏರಿಕೆಯಾಗಿದೆ. ಅಂದರೆ, 100 ಡಾಲರ್ ಗಳನ್ನು ಪಾವತಿಸಿ ಒಂದು ಬ್ಯಾರೆಲ್ ಕಚ್ಚಾ ತೈಲ ಖರೀದಿಸಿ ಸಂಸ್ಕರಿಸಿದರೆ, ಈ ಕಂಪನಿಗಳಿಗೆ 25 ಡಾಲರ್ ಲಾಭವಾಗುತ್ತದೆ. ಅಂದರೆ ಶೇ.25ರಷ್ಟು ಲಾಭವಾಗುತ್ತಿದೆ. ಲಾಭದ ಪ್ರಮಾಣವು ಈ ಮಟ್ಟಕ್ಕೆ ಏರಿರುವುದು ಇದೇ ಮೊದಲು. ಹೀಗಾಗಿ ಈ ಷೇರುಗಳಿಗೆ ಭಾರಿ ಬೇಡಿಕೆ ಬಂದಿದೆ.
ಮೂರು ತಿಂಗಳ ಹಿಂದೆ ಕೇವಲ 40 ರೂಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದ್ದ ಎಂಆರ್ಪಿಎಲ್ ಈಗ 108 ರೂಪಾಯಿಗೆ ಜಿಗಿದಿದೆ. ಮೂರು ತಿಂಗಳಲ್ಲಿ ಹೂಡಿಕೆದಾರರಿಗೆ ಶೇ.150ರಷ್ಟು ಲಾಭ ತಂದುಕೊಟ್ಟಿದೆ. ಸಿಪಿಸಿಎಲ್ ಮೂರು ತಿಂಗಳ ಹಿಂದೆ 100 ರೂಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದ್ದು ಈಗ 370 ರೂಪಾಯಿಗೆ ಜಿಗಿದಿದೆ. ಹೂಡಿಕೆದಾರರಿಗೆ ಶೇ.240ರಷ್ಟು ಲಾಭ ತಂದುಕೊಟ್ಟಿದೆ. ವಿಶೇಷ ಎಂದರೆ ಇದೇ ಅವಧಿಯಲ್ಲಿ ವಿಸ್ತೃತ ಮಾರುಕಟ್ಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಕೇವಲ ಶೇ.4ರಷ್ಟು ಮಾತ್ರ ಏರಿಕೆ ದಾಖಲಿಸಿವೆ.
ಈ ಎರಡೂ ಷೇರುಗಳ ಕಳೆದ ಕೆಲವು ದಿನಗಳಿಂದ ಅಪ್ಪರ್ ಸರ್ಕ್ಯೂಟ್ ಮುಟ್ಟುತ್ತಿವೆ. ದಿನದಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಷೇರು ಏರಿಕೆಯಾಗಬೇಕು. ಆ ಮಟ್ಟ ದಾಟಿದರೆ ಆ ದಿನದ ವಹಿವಾಟು ಸ್ಥಗಿತಗೊಳ್ಳುತ್ತದೆ. ಇದಕ್ಕೆ ಅಪ್ಪರ್ ಸರ್ಕ್ಯೂಟ್ ಎನ್ನಲಾಗುತ್ತದೆ.
ಉಭಯ ಷೇರುಗಳ ಓಟ ಎಲ್ಲಿಯವರೆಗೆ? ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಇನ್ನೂ ಅಸ್ಥಿರತೆ ಇದೆ. ಈ ಅಸ್ಥಿರತೆ ಮುಂದುವರೆಯುವವರೆಗೂ ದರ ಏರುತ್ತಲೇ ಇರುತ್ತದೆ. ಸಂಸ್ಕರಣೆಯ ಲಾಭದ ಪ್ರಮಾಣ ಶೇ.25ರಷ್ಟು ಇರುವುದರಿಂದ ಕಚ್ಚಾ ತೈಲ ದರ ಏರಿದರೂ ಇವುಗಳ ಲಾಭದ ಪ್ರಮಾಣವೂ ಏರುತ್ತದೆ.
ತೈಲ ದರ ಇಳಿದಾಗ ಸಹಜವಾಗಿಯೇ ಸಂಸ್ಕರಣದ ಲಾಭ ಪ್ರಮಾಣ ತಗ್ಗುತ್ತದೆ. ಸದ್ಯಕ್ಕೆ ತೈಲ ದರ ಇಳಿಯುವ ಸಾಧ್ಯತೆ ಇಲ್ಲ. ರಷ್ಯಾ- ಉಕ್ರೇನ್ ಯುದ್ಧ ಎಲ್ಲಿಯವರೆಗೆ ಸಾಗುತ್ತದೋ ಅಲ್ಲಿಯವರೆಗೂ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರೆಯಲಿದ್ದು, ತೈರ ದರ ಏರು ಹಾದಿಯಲ್ಲೇ ಸಾಗಲಿದೆ.
ಈ ನಡುವೆ ಒಪೆಕ್ ದೇಶಗಳು ತೈಲ ಉತ್ಪಾದನೆ ಪ್ರಮಾಣ ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಅವುಗಳ ಹೆಚ್ಚಿಸಿರುವ ಪ್ರಮಾಣವು ಬೇಡಿಕೆಗೆ ಹೋಲಿಸಿದರೆ ತೀರಾ ಅತ್ಯಲ್ಪ. ಹೀಗಾಗಿ ತೈಲ ದರದಲ್ಲಿ ಸದ್ಯಕ್ಕೆ ಸ್ಥಿರತೆ ಬರುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಈ ಷೇರುಗಳ ಜಿಗಿತ ಆಬಾದಿತವಾಗಿರಲಿದೆ.