ರಾಜ್ಯ ರಾಜಕಾರಣ ಕಲುಷಿತಗೊಳ್ಳುತ್ತಿದೆ. ರಾಜಕಾರಣದಲ್ಲಿ ಸಿದ್ಧಾಂತ, ಕಾರ್ಯಕ್ರಮ ಆಧಾರದಲ್ಲಿ ರಾಜಕಾರಣ ಮಾಡಬೇಕು. ಸೇಡು, ದ್ವೇಷ, ಕೇಸರೆರಚಾಟ ಯಾರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ಇತ್ತೀಚಿನ ಕಾರ್ಯವೈಖರಿ ನೋಡಿದರೆ ಅವರು ಹತಾಶರಾಗಿರುವುದು ಕಾಣಬಹುದು. ವೈಯಕ್ತಿಕವಾಗಿ ಅವರ ಬಗ್ಗೆ ಇರುವ ಗೌರವ ಬೇರೆ. ಆದರೆ ಅವರು ರಾಜಕಾರಣದಲ್ಲಿ ಹೋಗುತ್ತಿರುವ ಹಾದಿ ನೋಡಿದರೆ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಅವರು ತಮ್ಮ ಕೆಲಸಗಳು, ಸಿದ್ಧಾಂತಗಳ ಹಿನ್ನೆಲೆಯಲ್ಲಿ ಜನತೆ ವಿಶ್ವಾಸ ಗಳಿಸುವ ಪ್ರಯತ್ನ ನಡೆಸುತ್ತಿಲ್ಲ. ಬದಲಿಗೆ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ದೇವೇಗೌಡ, ದೇವರಾಜ ಅರಸು, ಬೊಮ್ಮಾಯಿ ಅವರಿದ್ದರು. ಸಿದ್ಧರಾಮಯ್ಯ ಅವರು ಈಗ ಇದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ಸ್ಥಾನದ ಬಗ್ಗೆ ಬಳಸಿರುವ ಪದ ಪ್ರಯೋಗ, ಪ್ರಜಾತಂತ್ರ ವ್ಯವಸ್ಥೆಗೆ, ಸದನಕ್ಕೆ ತೋರುವ ಅಗೌರವ. ವಿರೋಧ ಪಕ್ಷದ ಸ್ಥಾನಕ್ಕಾಗಿ ನನ್ನ ಸರ್ಕಾರ ತೆಗೆದರು. ಇದಕ್ಕೆ ಕಾಂಗ್ರೆಸ್ ಕಾರಣ ಎಂದಿದ್ದಾರೆ.
ಕುಮಾರಸ್ವಾಮಿ ಅವರೇ ನಿಮ್ಮ ಕುಟುಂಬಕ್ಕೆ ಒಂದು ಹಿನ್ನೆಲೆ ಇದೆ. ಹೇಗೆ ಮಾತನಾಡಬೇಕು ಎಂಬುದನ್ನು ನಿಮ್ಮ ತಂದೆ ಅವರಿಂದ ಕಲಿಯಿರಿ. ಆ ಸ್ಥಾನ ಯಾವುದಕ್ಕೋ ಸಮಾನ ಅದಕ್ಕೆ ಆಸೆ ಪಟ್ಟರು ಎಂದರೆ ವಿಧಾನ ಮಂಡಲಕ್ಕೆ ತೋರುವ ಅಗೌರವ ಎಂದು ಹೇಳಿದ್ದಾರೆ.
ಸ್ಪೀಕರ್ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದ್ಧತೆ ಇದ್ದರೆ, ವಿಧಾನ ಮಂಡಲಕ್ಕೆ ಆಗಿರುವ ಈ ಅಗೌರವವನ್ನು ಸುಮೋಟೋ ಮೂಲಕ ಪ್ರಿವಿಲೇಜ್ ಮೋಷನ್ ಜಾರಿಗೊಳಿಸುವ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಇನ್ನು ಸರ್ಕಾರ ಬೀಳಲು ಕಾಂಗ್ರೆಸ್, ಸಿದ್ದರಾಮಯ್ಯ ಅವರು ಕಾರಣ ಎಂದು ಹೇಳುತ್ತಾರೆ. ವಿಧಾನಸೌಧದಲ್ಲಿ ಕಡತ ನೋಡಿದರೆ ತಿಳಿಯುತ್ತದೆ. ಸರ್ಕಾರ ಅಲುಗಾಡುವಾಗ ನೀವು ವಿದೇಶಕ್ಕೆ ಹೋಗಿದ್ದೀರಿ. ಸರ್ಕಾರ ಪತನವಾಗುವಾಗ ನಾನು ನಿಭಾಯಿಸುತ್ತೇನೆ ಎಂದು ಹೇಳಿದ್ದೀರಿ. ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದಾಗ ವಿಧಾನಸಭೆಯಲ್ಲಿ ನೀವು ಮಾಡಿದ ಭಾಷಣದಲ್ಲಿ ಎಲ್ಲವೂ ಕಡತದಲ್ಲಿದೆ ಎಂದು ಹೇಳಿದ್ದಾರೆ.
ಅಂದು ನೀವು ರಾಜೀನಾಮೆ ನೀಡಿ ಉತ್ತರ ನೀಡುವಾಗ ನನ್ನ ಸರ್ಕಾರ ತೆಗೆಯಲು ಕಾಂಗ್ರೆಸ್ ಕುತಂತ್ರ ಕಾರಣ ಎಂದು ಹೇಳಬಹುದಾಗಿತ್ತು, ಹೇಳಲಿಲ್ಲ ಯಾಕೆ? ಇಡೀ ಆಪರೇಷನ್ ಕಮಲಕ್ಕೆ ಬಿಜೆಪಿ, ಅದರ ರಾಷ್ಟ್ರೀಯ ನಾಯಕತ್ವ ಕಾರಣ ಎಂದು ಹೇಳಿದ್ದೀರಿ.
ಆದರೆ ಈಗ ಕಾಂಗ್ರೆಸ್ ಮೇಲೆ ಆರೋಪಿಸಿ ತೆಗಳುವುದು ಎಷ್ಟು ಸಮಂಜಸ. ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಭೇಟಿಯಾಗಿ ಬಿಜೆಪಿಗೆ ತೊಂದರೆ ಆಗಬಹುದು ಎಂದು ಹೇಳಿ ಈ ನೀರಾವರಿ ಗುತ್ತಿಗೆದಾರರ ಮೇಲೆ ಐಟಿ ದಾಳಿ ಆಗಿದೆ ಎಂದಿದ್ದಾರೆ.
ನಾನು ಸಿದ್ದರಾಮಯ್ಯ ಅವರ ಜತೆ ಮಾತನಾಡಿದಾಗ ಅವರು ಹೇಳಿದ್ದು, ಒಂದು ಸಭೆಯಲ್ಲಿ ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಬಿಟ್ಟರೆ ನಾನು ಎಂದಿಗೂ ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ನೀವು ಬೇರೆ ಕಾರಣಗಳಿಗೆ ಬೇರೆಯವರನ್ನು ಭೇಟಿ ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರನ್ನು ಯಾಕೆ ಭೇಟಿ ಮಾಡುತ್ತೀರಿ. ನಿಮ್ಮ ಮನಸ್ಥಿ ಆ ರೀತಿ ಇಟ್ಟುಕೊಂಡು ಬೇರೆಯವರ ಮೇಲೆ ಆರೋಪ ಎಷ್ಟು ಸರಿ ಎಂದು ಹೇಳಿದ್ದಾರೆ.
ನೀರಾವರಿ ಇಲಾಖೆಯಲ್ಲಿ 18 ಸಾವಿರ ಕೋಟಿ ಹಗರಣ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದು, ಇದರಲ್ಲಿ 10- 15% ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ.
ವಿರೋಧ ಪಕ್ಷಗಳ ನಾಯಕರ ಮನೆ ಮೇಲೆ ಐಟಿ ದಾಳಿ ಆದರೆ ಅಂದು ಸಂಜೆಯೇ ಏನೆಲ್ಲಾ ಸಿಕ್ಕಿದೆ ಎಂಬ ಮಾಹಿತಿ ಪ್ರಕಟವಾಗುತ್ತದೆ. ಆದರೆ ಸರ್ಕಾರದ ಮುಖ್ಯಮಂತ್ರಿ ಆಪ್ತರ ಮನೆ ಮೇಲೆ ದಾಳಿ ಆದಾಗ ಅದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಮಾಹಿತಿ ನೀಡಿದರೆ ಮಧ್ಯಪ್ರದೇಶ ಆಪರೇಷನ್ ಕಮಲಕ್ಕೆ, ಕೇಂದ್ರ ನಾಯಕರಿಗೆ ಎಷ್ಟು ಹಣ ಹೋಗಿದೆ ಎಂಬ ಮಾಹಿತಿ ಬರಬಹುದು ಎಂದು ತಡೆ ಹಿಡಿದಿದ್ದೀರಾ? ಈ ಬಗ್ಗೆ ಸಿಎಂ, ಮಂತ್ರಿಗಳು ಬಾಯಿ ಬಿಡುತ್ತಿಲ್ಲ ಎಂದು ಹೇಳಿದ್ದಾರೆ.
ಈ ಹಗರಣಕ್ಕೆ ಬಿಜೆಪಿ ನಾಯಕರೇ ನೇರ ಕಾರಣ. ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಕಿಕ್ ಬ್ಯಾಕ್ ಹೋಗಿಬಿಟ್ಟಿದೆ. ನಾ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮಿಸ್ಟರ್ ಮೋದಿ, ನಿಮ್ಮ ಸರ್ಕಾರದ ವಿರುದ್ಧ ಐಟಿ ಇಡಿ ದಾಳಿ ಆಗಿದೆ. ಇದರ ಬಗ್ಗೆ ಏನು ಹೇಳುತ್ತೀರಾ?
ಈ ರಾಜ್ಯದಲ್ಲಿ ಎಷ್ಟು ಲೂಟಿ ಆಗಿದೆ ಎಂದು ಐಟಿ ಹಾಗೂ ಇಡಿ ಅಧಿಕಾರಿಗಳು ಸಂಗ್ರಹಿಸಿರುವ ಅಷ್ಟು ದಾಖಲೆಗಳನ್ನು ಜನರ ಮುಂದೆ ಇಡಬೇಕು.
ಈ ಎರಡು ಇಲಾಖೆ ಕೇಂದ್ರದ ನಿಯಂತ್ರಣದಲ್ಲಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು ಎಂಬುದು ಸ್ವಲ್ಪವಾದರೂ ಇದ್ದರೆ, ಈ ಹಗರಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಇದರಲ್ಲಿ ಯಾರಿಗೆ ಪಾಲು ಹೋಗಿದೆ ಎಂಬ ಬಗ್ಗೆ ಮಾತನಾಡದೆ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ಮೇಲೆ ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ.
ರಾಜ್ಯದ ಜನತೆಗೆ ಸಂದೇಶ ಹೋಗಬೇಕು, ಯಾರು ತಪ್ಪಿತಸ್ಥರು ಎಂದು ತಿಳಿಯಬೇಕಾದರೆ ಈ ಪ್ರಕರಣದ ತನಿಖೆಗೆ ಆದೇಶ ನೀಡಬೇಕು ಎಂದು ಸಿಎಂ ಬೊಮ್ಮಾಯಿ ಅವರಿಗೆ ಆಗ್ರಹಿಸುತ್ತೇನೆ.