ನಾನು ಸಂಸದಳಾಗಿ ಬಂದ ನಂತರ ಮಂಡ್ಯ ಜಿಲ್ಲೆಯ ಬಿ ಹೊಸೂರು ಗ್ರಾಮದ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದ ಕೇಂದ್ರೀಯ ವಿದ್ಯಾಲಯಕ್ಕೆ ಹೊಸ ಕಟ್ಟಡ ಮಾಡಿಸಿ ಕೊಡುವುದಾಗಿ ಮಾತುಕೊಟ್ಟಿದ್ದೆ. ಸತತ ಪ್ರಯತ್ನದಿಂದಾಗಿ ಇದೀಗ ಮಂಡ್ಯದ ನನ್ನ ಸ್ವಾಭಿಮಾನಿ ಮಕ್ಕಳಿಗೆ ನೂತನ ಕಟ್ಟಡಕ್ಕೆ ಮಂಜೂರಾತಿ ಸಿಕ್ಕಿದೆ ಎಂದು ಸಂಸದೆ ಸುಮಲತಾ ಹೇಳಿಕೊಂಡಿದ್ದಾರೆ.
ನನ್ನ ಮನವಿಗಳನ್ನು ಪರಿಶೀಲಿಸಿ ಕೇಂದ್ರ ಸರಕಾರವು 22.71 ಕೋಟಿ ರೂಪಾಯಿ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಂಸತ್ತು ವ್ಯವಹಾರಗಳ ಹಾಗೂ ಗಣಿ ಸಚಿವರಾದ ಮಾನ್ಯ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ನೂತನ ಕಟ್ಟಡದ ಗುದ್ದಲಿ ಪೂಜೆಗೆ ಆಹ್ವಾನಿಸಿದೆ ಎಂದು ತಿಳಿಸಿದ್ದಾರೆ.
ಮಂಜೂರಾತಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆ. ಸಂಸತ್ತಿನಲ್ಲೂ ಪ್ರಸ್ತಾವನೆ ಸಲ್ಲಿಸಿದ್ದೆ. ಇದೀಗ ಟೆಂಡರ್ ಪ್ರಕ್ರಿಯೆ ಹಾಗೂ ತಾಂತ್ರಿಕ ರೂಪುರೇಷೆಗಳನ್ನು ಪೂರ್ಣಗೊಳಿಸುವ ಕಾಲವೂ ಬಂದಿದೆ. ನಮ್ಮೆಲ್ಲರ ಆಸೆಯಂತೆ ಸುಸಜ್ಜಿತ ವ್ಯವಸ್ಥೆಯುಳ್ಳ ನೂತನ ಕೇಂದ್ರೀಯ ವಿದ್ಯಾಲಯ ಶಾಲೆಯ ಕಟ್ಟಡದ ಗುದ್ದಲಿ ಪೂಜೆ ಶೀಘ್ರದಲ್ಲಿ ನೆರವೇರಲಿದೆ ಎಂದು ವಿವರಿಸಿದ್ದಾರೆ.
